ಹೊಸದಿಲ್ಲಿ : ಪೆಟ್ರೋಲು ಬೆಲೆಯನ್ನು ಲೀಟರಿಗೆ 1.40 ರೂಪಾಯಿಯಂತೆ ಏರಿಸಲಾಗಿದ್ದು, ಇದು ಇತ್ತೀಚೆಗಿನ ಕೆಲವು ವಾರಗಳಲ್ಲಿ ಆಗಿರುವ ದೊಡ್ಡ ಮೊತ್ತದ ಹೆಚ್ಚಳ.ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಯೇರಿಕೆ ಮತ್ತು ರೂಪಾಯಿ ಮೌಲ್ಯ ಕುಸಿತದಿಂದಾಗಿ ಶುಕ್ರವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲು ಬೆಲೆಯನ್ನು ರೂ. 1.40ರಂತೆ ಏರಿಸುವುದು ಅನಿವಾರ್ಯ ಎಂದು ಭಾರತೀಯ ತೈಲ ನಿಗಮ ಹೇಳಿದೆ.
ಈ ಏರಿಕೆಯಲ್ಲಿ ಸ್ಥಳೀಯ ತೆರಿಗೆಗಳು ಒಳಗೊಂಡಿಲ್ಲ. ವ್ಯಾಟ್ ಸೇರಿಸಿದ ಬಳಿಕ ಏರಿಕೆ ಇನ್ನೂ ತುಸು ಹೆಚ್ಚಾಗಲಿದೆ. ಫೆ. 16ರಂದು ವ್ಯಾಟ್ ಸೇರಿಸದೆ ರೂಪಾಯಿ 1.50 ಏರಿಸಿದ್ದು ಇತ್ತೀಚೆಗಿನ ದಿನಗಳಲ್ಲಿ ಮಾಡಿದ್ದ ದೊಡ್ಡ ಏರಿಕೆಯಾಗಿತ್ತು.
ಇಂದಿನ ಏರಿಕೆಯಿಂದಾಗಿ ದಿಲ್ಲಿಯಲ್ಲಿ ಲೀಟರಿಗೆ 1.68 ರೂ. ಹೆಚ್ಚಿ 70.74 ರೂ. ಆಗುತ್ತದೆ. ಪೆಟ್ರೋಲು, ಡೀಸೆಲ್ ಮತ್ತು ಗ್ಯಾಸ್ ಬೆಲೆ ಏರಿಸಿರುವ ಹೊರತಾಗಿಯೂ ಪ್ರಸಕ್ತ ಹಣಕಾಸು ವರ್ಷದಲ್ಲಿ ತೈಲ ಕಂಪೆನಿಗಳಿಗೆ 86,500 ಕೋ. ರೂಪಾಯಿ ನಷ್ಟವಾಗಲಿದೆ ಎಂದು ನಿಗಮ ಹೇಳಿದೆ.
Click this button or press Ctrl+G to toggle between Kannada and English