ಬಂಟ್ವಾಳ : ಬಾಳ್ತಿಲ ಗ್ರಾಮದ ಕುಂಟಲ್ಪಾಡಿ ಯಲ್ಲಿ ಅತ್ಯಾಚಾರ ಯತ್ನ, ಕೊಲೆಗೀಡಾದ ಸೌಮ್ಯಳ ಕೊಲೆ ಆರೋಪಿ ಸತೀಶನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಶನಿವಾರ ಬಾಳ್ತಿಲ ಗ್ರಾಮದ ನೂರಾರು ಸಂಖೆಯ ಗ್ರಾಮಸ್ಥರು ಗ್ರಾಮಪಂಚಾಯತ್ ಸಭಾಂಗಣದಲ್ಲಿ ಸೇರಿ ಹಕ್ಕೊತ್ತಾಯ ಸಭೆ ನಡೆಸಿದರು.
ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುಂದರ ಸಾಲ್ಯಾನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ಊರ ಗಣ್ಯರು ಭಾಗವಹಿಸಿ ಸೌಮ್ಯಳ ಸಾವಿಗೆ ಸಂತಾಪ ವ್ಯಕ್ತಪಡಿಸಿದರು.
ಇಂತಹ ಅಮಾನುಷ ಕೃತ್ಯ ಎಸಗಿದ ಆರೋಪಿಗೆ ತಕ್ಕುದಾದ ಶಿಕ್ಷೆ ವಿಧಿಸಬೇಕು, ಇಂತಹಾ ಕೃತ್ಯ ನಡೆಸುವ ಮನಸ್ಥಿತಿಯವರನ್ನು ಕಾನೂನು ಪ್ರಕಾರ ಶಿಕ್ಷಿಸಬೇಕು ಹಾಗು ಆರೋಪಿಪರವಾಗಿ ಯಾವ ವಕೀಲರೂ ವಾದ ಮಾಡಬಾರದು, ಮೃತ ಸೌಮ್ಯ ಳ ಕುಟುಂಬಕ್ಕೆ ಮಾನಸಿಕವಾದ ಧೈರ್ಯ ತುಂಬುವ ಕೆಲಸ ಆಗಬೇಕು ಮತ್ತು ಮೃತ ಸೌಮ್ಯಳ ಹೆಸರಿನಲ್ಲಿ ಖಾಸಗಿಯಾಗಿ ಯಾರೂ ಹಣ ಸಂಗ್ರಹ ಮಾಡಬಾರದು ಎಂಬ ಒತ್ತಾಯ ಸಭೆಯಲ್ಲಿ ಕೇಳಿ ಬಂದಿತು. ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ ಊರಿನ ಗಣ್ಯರು, ರಾಜಕೀಯ ರಹಿತವಾಗಿ ನಡೆಯುತ್ತಿರುವ ಹೋರಾಟ ತೀವ್ರವಾಗಬೇಕು ಎಂದು ಹೇಳಿದರು.
ಬಾಳ್ತಿಲ ಗ್ರಾಮಪಂಚಾಯತ್ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದ ಮನವಿ ಪತ್ರವನ್ನು ಸಭೆಯಲ್ಲಿ ವಾಚಿಸಲಾಯಿತು. ಜಿಲ್ಲಾ ಬಿಜೆಪಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರ ಪ್ರಕಾಶ್ ಶೆಟ್ಟಿ, ಮಮತಾ ಗಟ್ಟಿ, ಚೆನ್ನಪ್ಪ ಕೋಟ್ಯಾನ್, ಮಾಜಿ ಶಾಸಕ ರುಕ್ಮಯ ಪೂಜಾರಿ, ತಾಲೂಕು ಪಂಚಾಯತ್ ಅಧ್ಯಕ್ಷೆ ಲಲಿತಾ ಶಿವಪ್ಪ ನಾಯ್ಕ, ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, ಯುವ ಜೆಡಿ ಎಸ್ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಪೂಜಾರಿ, ಪ್ರಮುಖರಾದ ಮೋಹನ್ ಪಿ.ಎಸ್, ಸೂರ್ಯನಾರಾಯಣ ಭಟ್, ನೇತ್ರಾವತಿ, ಆಶಾಪ್ರಸಾದ್, ಶಿಕ್ಷಕ ರಾಧಾಕೃಷ್ಣ ಅಡ್ಯಂತಾಯ, ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ, ಬಂಟ್ವಾಳ ನಗರ ಠಾಣಾಧಿಕಾರಿ ಬಿ.ಶೇಖರ್ ವೇದಿಕೆಯಲ್ಲಿದ್ದರು. ಈ ಸಂದರ್ಭ ರಾಜ್ಯಮಟ್ಟದಲ್ಲಿ ಸುದ್ದಿಯಾದ ಸೌಮ್ಯ ಕೊಲೆಗೆ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರು ಸೌಮ್ಯ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ನೀಡದಿರುವ ಬಗ್ಗೆ ಗ್ರಾಮಸ್ಥರಿಂದ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.
Click this button or press Ctrl+G to toggle between Kannada and English