ಮಂಗಳೂರು : ಮಾರ್ಚ್ 7ರಂದು ನಡೆಯುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 677 ಅಭ್ಯರ್ಥಿಗಳ ಭವಿಷ್ಯ ನಿರ್ಧಾರಗೊಳ್ಳಲಿದೆ. ಅದಕ್ಕಾಗಿ ವಿವಿಧ ರಾಜಕೀಯ ಪಕ್ಷಗಳು ಬಿರುಸಿನ ಮತಪ್ರಚಾರದಲ್ಲಿ ತೊಡಗಿದ್ದು, ಅಂತಿಮವಾಗಿ ಜಯದ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುದು ಕುತೂಹಲ ಹುಟ್ಟಿಸಿದೆ. ಈ ಚುನಾವಣೆಯು ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯುವ ರಾಜ್ಯ ವಿಧಾನ ಸಭಾ ಚುನಾವಣೆಗೆ ಪೂರ್ವಭಾವಿಯಾದ ಸೆಮಿಫೈನಲ್ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಸ್ಥಳೀಯಾಡಳಿತ ಚುನಾವಣೆಯಲ್ಲಿ ಯಾವ ಪಕ್ಷದ ಅಭ್ಯರ್ಥಿಗಳು ಅಧಿಕ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಾರೋ ಅದೇ ಪಕ್ಷದ ಜನಪ್ರತಿನಿಧಿಗಳು ಗೆದ್ದು ಬರುವುದರಲ್ಲಿ ಸಂಶಯವಿಲ್ಲ. ಆ ಹಿನ್ನಲೆಯಲ್ಲಿ ಪ್ರತಿಯೊಂದು ಪಕ್ಷದ ಕಾರ್ಯಕರ್ತರೂ ಕೂಡ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸುತ್ತಿದ್ದಾರೆ. ಪರಸ್ಪರ ಒಳಜಗಳ, ವೈಮನಸ್ಸು ಬಿಟ್ಟು ಶಕ್ತಿಮೀರಿ ದುಡಿಯುತ್ತಿದ್ದಾರೆ. ಅದು ಎಷ್ಟರಮಟ್ಟಿಗೆ ಸಫಲತೆ ಸಾಧಿಸಲಿದೆ ಎಂಬುದಕ್ಕೆ ಮತದಾರರ ನಿರ್ಧಾರವನ್ನು ಅಲವಂಬಿಸಿರುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ, ಮೂಡಬಿದ್ರೆ, ಉಳ್ಳಾಲ, ಬಂಟ್ವಾಳ, ಪುತ್ತೂರು ಪುರಸಭೆ ಮತ್ತು ಬೆಳ್ತಂಗಡಿ ಹಾಗು ಸುಳ್ಯ ಪಟ್ಟಣ ಪಂಚಾಯತ್ಗೆ ನಡೆಯುವ ಚುನಾವಣೆಯ ಫಲಿತಾಂಶವು ಮಾ.11ಕ್ಕೆ ಪ್ರಕಟಗೊಳ್ಳಲಿದ್ದು, ಆವರೆಗೆ ಮತದಾರ, ಅಭ್ಯರ್ಥಿಗಳ, ಪಕ್ಷದ ಮುಖಂಡರ, ಕಾರ್ಯಕರ್ತರ, ರಾಜಕೀಯ ವಿಶ್ಲೇಷಕರ ಕುತೂಹಲ ಇದ್ದೇ ಇದೆ.
ಅಂದಹಾಗೆ, ಮೂಲ್ಕಿ ಪಟ್ಟಣ ಪಂಚಾಯತ್ನ ಅವಧಿ ಪೂರ್ತಿಯಾಗದ ಕಾರಣ ಇನ್ನಷ್ಟೆ ಚುನಾವಣೆ ನಡೆಯಬೇಕಾಗಿದೆ.
ಈ ಬಾರಿ 2,25,812 ಪುರುಷರು ಮತ್ತು 2,37,569 ಮಹಿಳೆಯರ ಸಹಿತ ಒಟ್ಟು 4,60,381 ಮಂದಿ ಮತ ಚಲಾಯಿಸುವ ಹಕ್ಕು ಹೊಂದಿದ್ದು, ಇವರ ಆಯ್ಕೆ ಯಾರ್ಯಾರು ಎಂಬುದನ್ನು ಕ್ಷಣಗಣನೆ ಎದುರಾಗಿದೆ.
ಮಂಗಳೂರು ಮಹಾನಗರಪಾಲಿಕೆ : ಪಾಲಿಕೆಯ 60 ವಾರ್ಡ್ ಗಳಲ್ಲಿ 243 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಅದರಲ್ಲಿ ಕಾಂಗ್ರೆಸ್ 60, ಬಿಜೆಪಿ 60, ಜೆಡಿಎಸ್ 48, ಸಿಪಿಐ 1, ಸಿಪಿಐ(ಎಂ) 14, ಜೆಡಿಯು 2, ಬಿಎಸ್ಆರ್ 14, ಎಸ್ಡಿಪಿಐ 8, ಕೆಜೆಪಿ 11, ಡಬ್ಲ್ಯುಪಿಐ 6. ಐಯುಎಂಲಿ 1, ಪಕ್ಷೇತರರು 18 ಮಂದಿಯಿದ್ದಾರೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ 34 ಕಾಂಗ್ರೆಸ್ 20, ಜೆಡಿಎಸ್ 1, ಸಿಪಿಎಂ 1, ಪಕ್ಷೇತರರು 4 ಮಂದಿ ಆಯ್ಕೆಯಾಗಿದ್ದರು. ಈ ಬಾರಿ ಕೆಜೆಪಿ, ಬಿಎಸ್ಆರ್, ಎಸ್ಡಿಪಿಐ, ಡಬ್ಲ್ಯುಪಿಐ ಹೊಸ ಪಕ್ಷಗಳಾಗಿದ್ದರೆ, ಜೆಡಿಎಸ್ ಪಕ್ಷ ಬಹುತೇಕ ಕ್ಷೇತ್ರದಲ್ಲಿ ತನ್ನ ಅಸ್ತಿತ್ವ ತೋರಿಸಲು ಪ್ರಯತ್ನಿಸಿದೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನೇರ ಹಣಾಹಣಿ ಇದೆ. ಕಾಂಗ್ರೆಸ್ ನ ದುರಾಡಳಿತದಿಂದ ಬೇಸತ್ತಿದ್ದ ಜನರು ಬಿಜೆಪಿಗೆ ಮತ ಹಾಕಿ ಗೆಲ್ಲಿಸಿದ್ದರೂ ಕೂಡ ಗೆದ್ದ ಬಳಿಕ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಪೋರೇಟರ್ ಗಳು ಹಂಚಿ ತಿನ್ನುವ ವಿಷಯದಲ್ಲಿ ಸಹಮತ ಹೊಂದಿರುವುದು ವಿಶೇಷ. ಇದನ್ನು ಮತದಾರ ಗಮನಿಸಿದ್ದಾರೆ. ಮಂಗಳೂರಿನ ಮಟ್ಟಿಗೆ ಬಿಜೆಪಿಗೆ ಕೆಜೆಪಿ ಮುಳ್ಳಾಗಬಹುದು ಎಂದು ಭಾವಿಸಿದ್ದರೂ ಕೂಡ ಅದು ಕಾಂಗ್ರೆಸ್ನ ಮತವನ್ನೇ ದೋಚುವ ಸಾಧ್ಯತೆ ದಟ್ಟವಾಗಿದೆ. ಯಾಕೆಂದರೆ, ಕಾಂಗ್ರೆಸ್, ಜೆಡಿಎಸ್ ನ ಅತೃಪ್ತ ದಂಡು ಕೆಜೆಪಿಯತ್ತ ವಾಲಿದೆ. ಇತ್ತ ಎಸ್ ಡಿಪಿಐ, ಡಬ್ಲ್ಯುಪಿಐ, ಮುಸ್ಲಿಂ ಲೀಗ್ ಕೂಡ ಕಾಂಗ್ರೆಸ್ ನ ಮತವನ್ನು ಬಗಲಿಗೆ ಹಾಕಿಕೊಳ್ಳಲಿದೆ. ಅದನ್ನೆಲ್ಲಾ ಲೆಕ್ಕಾಚಾರ ಹಾಕಿದ ಬಿಜೆಪಿ ಗೆಲುವು ತನ್ನದೇ ಎಂದು ಬೀಗುತ್ತಿದೆ. ಇತ್ತ ಕಾಂಗ್ರೆಸ್ “ಯಾರು ಏನೇ ಕೂಗಾಡಲಿ… ಬಿಜೆಪಿಯನ್ನು ಮತದಾರ ಕೈ ಬಿಡಲಿದ್ದಾನೆ’ ಎಂದು ಕನಸು ಕಾಣುತ್ತಿದೆ. ಆದರೆ, ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಬಂಡಾಯ ಬಿಸಿ ಎದುರಾಗಿದೆ. ಟಿಕೆಟ್ ಸಿಗದ ಆಕಾಂಕ್ಷಿಗಳು ಪಕ್ಷಾಂತರಿಗಳಾಗಿದ್ದಾರೆ, ಬಂಡಾಯವಾಗಿ ಕಣದಲ್ಲಿದ್ದಾರೆ. ಹಾಗಾಗಿ ಇಲ್ಲಿನ 3,26,125 ಮತದಾರರು ಇವರಿಗೆ ಯಾವ ಕಾಣಿಕೆ ಸಲ್ಲಿಸಲಿದ್ದಾನೆ ಎಂದು ನೋಡಬೇಕಾಗಿದೆ.
ಮೂಡಬಿದ್ರೆ : ಮೂಡಬಿದ್ರೆ ಪುರಸಭೆಯ 23 ವಾರ್ಡ್ ಗಳಲ್ಲಿ 77 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆ ಪೈಕಿ ಕಾಂಗ್ರೆಸ್ 22, ಬಿಜೆಪಿ 22, ಜನತಾದಳ (ಎಸ್) 23, ಸಿಪಿಐ(ಎಂ)3, ಸ್ವತಂತ್ರರು 7 ಮಂದಿಯಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 10, ಜೆಡಿಎಸ್ 8, ಬಿಜೆಪಿ 4, ಸಿಪಿಐಎಂ 1 ಸ್ಥಾನ ಪಡೆದಿತ್ತು. ಆದರೆ, ಈ ಬಾರಿ ಪುರಸಭೆ ವ್ಯಾಪ್ತಿಯ 15,946 ಮತದಾರರ ಚಿತ್ತ ಎಂಬುದು ಕುತೂಹಲ ಉಂಟಾಗಿದೆ. ಸತತ ಗೆಲುವಿನಿಂದ ಬೀಗುತ್ತಿರುವ ಶಾಸಕ ಅಭಯಚಂದ್ರ ಜೈನ್ ಗೆ ಇದು ಅಗ್ನಿ ಪರೀಕ್ಷೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಜೆಡಿಎಸ್ ತನ್ನ ಪ್ರಾಬಲ್ಯ ಉಳಿಸಿಕೊಂಡಿದ್ದರೆ ಅದು ಮೂಡಬಿದ್ರೆಯಲ್ಲಿ ಮಾತ್ರ. ಈ ಊರಿನ ಹಿರಿಯ ರಾಜಕಾರಣಿ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟರಿಗೆ ಇದೊಂದು ಸವಾಲಾಗಿದೆ. ಅತ್ತ ಬಿಜೆಪಿ ಕೂಡ ತನ್ನ ಮತ ಬೇಟೆಯನ್ನು ಮುಂದುವರಿಸಿದೆ.
ಉಳ್ಳಾಲ : ಉಳ್ಳಾಲ ಪುರಸಭೆಯ 27 ವಾರ್ಡ್ ಗಳಲ್ಲಿ 93 ಅಭ್ಯಥರ್ಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ 27, ಬಿಜೆಪಿ 18, ಜನತಾ ದಳ (ಎಸ್) 19, ಸಿಪಿಐ(ಎಂ) 7, ಎಸ್ಡಿಪಿಐ 9, ಕೆಜೆಪಿ 4, ಸ್ವತಂತ್ರರು 9. ಕಳೆದ ಬಾರಿ ಕಾಂಗ್ರೆಸ್ 17, ಬಿಜೆಪಿ 6, ಜೆಡಿಎಸ್ 1, ಸಿಪಿಐಎಂ 2, ಪಕ್ಷೇತರ ಒಬ್ಬ ಗೆಲುವು ಸಾಧಿಸಿದ್ದರು. ಈ ಬಾರಿ ಎಸ್ಡಿಪಿಐ ಮುಸ್ಲಿಮರ ಮತವನ್ನೂ, ಕೆಜೆಪಿ ಬಂಟರ ಮತವನ್ನೂ ದೋಚಿದರೆ ಅಚ್ಚರಿಯಿಲ್ಲ. ಅಲ್ಲದೆ, ಕಾಂಗ್ರೆಸ್ ನ ಮೂವರು ಬಂಡಾಯವಾಗಿ ಸ್ಪರ್ಧಿಸಿದ್ದಾರೆ. ಅಂದರೆ, ಕಳೆದ ಬಾರಿ ಸ್ಪರ್ಧಿಸಿ ಗೆದ್ದಿದ್ದ ದಿನಕರ ಉಳ್ಳಾಳ್, ಫಾರೂಕ್ ಯು.ಎಚ್.ಗೆ ಟಿಕೆಟ್ ನಿರಾಕರಿಸಿದ ಕಾರಣ ಅವರು ಪಕ್ಷೇತರರಾಗಿ ಕಣದಲ್ಲಿದ್ದಾರೆ. ಶಿವಾಜಿನಗರ ವಾರ್ಡ್ ನಿಂದ ಕಳೆದ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದಿದ್ದ ರತ್ನಾವತಿ ಈ ಬಾರಿ ಅದೇ ವಾರ್ಡ್ ನಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ.
ಪುರಸಭೆಯ ಅಧ್ಯಕ್ಷರ ಚುನಾವಣೆ ವೇಳೆ ಹೈಕಮಾಂಡ್ ಸೂಚನೆಯನ್ನು ಧಿಕ್ಕರಿಸಿದ್ದ ಬಾಝಿಲ್ ಡಿಸೋಜರಿಗೆ ಆರಂಭದಲ್ಲಿ ಪಕ್ಷ ಟಿಕೆಟ್ ನಿರಾಕರಿಸಿದ್ದರೂ ಬಳಿಕ ತಾಂತ್ರಿಕ ಸಮಸ್ಯೆಗೆ ಪಕ್ಷ ಸಿಲುಕಿದ ಕಾರಣ ಟಿಕೆಟ್ ನೀಡಿದೆ. ಆದರೆ, ಅವರ ಘೋಷಣಾ ಪತ್ರದ ವಿರುದ್ಧ ವಿಪಕ್ಷಗಳು ತಗಾದೆ ತೆಗೆದಿದ್ದು, ಚುನಾವಣೆ ಸಂದರ್ಭ ಅದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಅತ್ತ ಪುರಸಭೆಯ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಎಂದು ಗುರುತಿಸಲ್ಪಟ್ಟಿದ್ದ ಉಪಾಧ್ಯಕ್ಷೆಯಾಗಿದ್ದ ಭವಾನಿಗೆ ಟಿಕೆಟ್ ನಿರಾಕರಿಸಿದ ಕಾರಣ ಅವರು ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ಬಿಜೆಪಿ 6 ಮಂದಿ ಮುಸ್ಲಿಮರಿಗೆ ಟಿಕೆಟ್ ನೀಡಿರುವುದು ವಿಶೇಷ. ಇದು ಬಿಜೆಪಿಗೆ ಎಷ್ಟರಮಟ್ಟಿಗೆ ವರದಾನವಾಗಲಿದೆ ಎಂದು ಕಾದು ನೋಡಬೇಕಾಗಿದೆ.
ಬಂಟ್ವಾಳ : ಬಂಟ್ವಾಳ ಪುರಸಭೆಯ 23 ವಾರ್ಡ್ ಗಳಲ್ಲಿ 83 ಅಭ್ಯರ್ಥಿ ಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ 22, ಬಿಜೆಪಿ 23, ಜನತಾ ದಳ (ಎಸ್)10, ಸಿಪಿಐ 1, ಸಿಪಿಐ(ಎಂ)1, ಎಸ್ಡಿಪಿಐ 13,ಕೆಜೆಪಿ 4 ಮಂದಿ ಸ್ಪರ್ಧಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 11, ಬಿಜೆಪಿ 9, ಮುಸ್ಲಿಂ ಲೀಗ್ 2 ಮಂದಿ ಗೆದ್ದಿದ್ದರು. ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಹಣಾಹಣಿಯಿದೆ. ಶಾಸಕ ಹಾಗು ಪಕ್ಷದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಮಾನಾಥ ರೈ ಅವರು ತನ್ನ ವಿರೋಧಿಗಳನ್ನು ಹೇಗೆ ಬಾಯ್ಮುಚ್ಚಿಸಲಿದ್ದಾರೆ ಎಂಬುದು ಕುತೂಹಲ ಸೃಷ್ಟಿಸಿದೆ. ಅತ್ತ ಬಿಜೆಪಿಯಿಂದ ಜೆಡಿಎಸ್ ಪಕ್ಷಕ್ಕೆ ಲಗ್ಗೆಯಿಟ್ಟು ಅಲ್ಲೊಂದು ಸಂಚಲನ ಹುಟ್ಟಿಸಿರುವ ಮಾಜಿ ಸಚಿವ ನಾಗರಾಜ ಶೆಟ್ಟಿಗೂ ಈ ಚುನಾವಣೆ ಸವಾಲಾಗಿದೆ. ತನ್ನ ಸ್ವ ಕ್ಷೇತ್ರದಲ್ಲಿ ಪಕ್ಷ ನೆಲಕ್ಕಚ್ಚಿದರೆ ರಾಜ್ಯ ನಾಯಕರು ನಾಗರಾಜ ಶೆಟ್ಟರ ಮೇಲಿಟ್ಟ ಭರವಸೆ ಹುಸಿಯಾಗಲಿದೆ. ಎಸ್ಡಿಪಿಐ ಪಕ್ಷ ಕಾಂಗ್ರೆಸ್ ಗೂ, ಕೆಜೆಪಿ ಪಕ್ಷ ಬಿಜೆಪಿಗೆ ಮುಳ್ಳಾದರೆ ಅಚ್ಚರಿಯಿಲ್ಲ.
ಪುತ್ತೂರು : ಪುತ್ತೂರು ಪುರಸಭೆಯ 27 ವಾರ್ಡ್ ಗಳಲ್ಲಿ 88 ಅಭ್ಯರ್ಥಿಗಳಿದ್ದಾರೆ, ಅದರಲ್ಲಿ ಕಾಂಗ್ರೆಸ್ 27, ಬಿಜೆಪಿ 27, ಜನತಾದಳ (ಎಸ್) 18, ಸಿಪಿಐ(ಎಂ) 1, ಎಸ್ಡಿಪಿಐ 10, ಸ್ವತಂತ್ರರು 5 ಮಂದಿಯಿದ್ದಾರೆ. ಕಳೆದ ಬಾರಿ ಇಲ್ಲಿ ಬಿಜೆಪಿಯ 15 ಮತ್ತು ಕಾಂಗ್ರೆಸ್ನ 12 ಮಂದಿ ಗೆದ್ದಿದ್ದರು. ಕಳೆದ ಸಲ ಬಿಜೆಪಿಗೆ ಸಡ್ಡು ಹೊಡೆದು ಬಂಡಾಯ ಸ್ಪರ್ಧೆ ನೀಡಿದ್ದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಈ ಬಾರಿ ಕಾಂಗ್ರೆಸ್ ಗೆ ಜಿಗಿದಿದ್ದಾರೆ. ಪುತ್ತೂರಿನ ಕಾಂಗ್ರೆಸ್ನಲ್ಲಿ ಬಣ ರಾಜಕೀಯವಿದ್ದರೂ ಕೂಡ ಶಕು ಅಕ್ಕ ಅದನ್ನು ಸರಿಮಾಡಿಯಾರು ಎಂಬ ಹುಸಿ ಭರವಸೆ ಕಾಂಗ್ರೆಸ್ ಕಾರ್ಯಕರ್ತರಲ್ಲಿದೆ. ಅದೇ ಲೆಕ್ಕಾಚಾರದಲ್ಲಿ ಪಕ್ಷದ ನಾಯಕರೂ ಇದ್ದಾರೆ. ಶಕುಂತಳಾ ಶೆಟ್ಟಿಯ ಕಾಂಗ್ರೆಸ್ ಸೇರ್ಪಡೆ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇಲ್ಲಿ ಶಕುವನ್ನು ಮೆಟ್ಟಿ ಹಾಕಲು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ರಣರಂಗಕ್ಕೆ ಇಳಿಯಲೇ ಬೇಕಾಗಿದೆ. ಡಿವಿಯ ಹತ್ತಿರದ ಸಂಬಂಧಿ ಜೆಡಿಎಸ್ ಸೇರಿರುವುದರಿಂದ ಡಿವಿ ರಾಜ್ಯ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿ ತನ್ನ ಇಮೇಜು ಉಳಿಸಿಕೊಳ್ಳಲು ಈ ಚುನಾವಣೆಯಲ್ಲಿ ಬೆವರು ಇಳಿಸಲೇಬೇಕಾಗಿದೆ.
ಬೆಳ್ತಂಗಡಿ : ಬೆಳ್ತಂಗಡಿ ಪಟ್ಟಣ ಪಂಚಾಯತ್ನ 11 ವಾರ್ಡ್ ಗಳಲ್ಲಿ 38 ಅಭ್ಯರ್ಥಿಗಳಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಎಲ್ಲಾ 11 ಸ್ಥಾನಗಳಿಗೂ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಿದೆ. ಜನತಾದಳ (ಎಸ್)3, ಸಿಪಿಐ(ಎಂ)6, ಎಸ್ಡಿಪಿಐ 6, ಸ್ವತಂತ್ರರು 1 ಸ್ಪರ್ಧಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 7 ಮತ್ತು ಬಿಜೆಪಿ 4 ಸ್ಥಾನ ಗೆದ್ದಿತ್ತು. ಶಾಸಕ ವಸಂತ ಬಂಗೇರ ಅವರ ಪ್ರಭಾವ ಇಲ್ಲಿದ್ದು, ಅವರು ಈ ಬಾರಿಯೂ ಮತದಾರರನ್ನು ಮೋಡಿ ಮಾಡಬಲ್ಲರು ಎಂಬ ವಿಶ್ವಾಸ ಪಕ್ಷದ ಕಾರ್ಯಕರ್ತರಲ್ಲಿದೆ. ಆದರೆ, ಜೆಡಿಎಸ್ ಕೂಡ ತನ್ನ ಅಸ್ತಿತ್ವಕ್ಕಾಗಿ ಕನಿಷ್ಠ 1 ಸ್ಥಾನ ಗೆಲ್ಲಲು ಪ್ರಯತ್ನ ಸಾಗಿಸಿದೆ. ಇವೆಲ್ಲದರ ಮಧ್ಯೆ ಎಸ್ಡಿಪಿಐ ತನ್ನ ಖಾತೆ ತೆರೆಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಮತದಾರರ ಬೇಟೆಯಲ್ಲಿ ತೊಡಗಿದೆ.
ಸುಳ್ಯ : ಸುಳ್ಯ ಪಟ್ಟಣ ಪಂಚಾಯತ್ನ 18 ವಾರ್ಡ್ ಗಳಲ್ಲಿ 55 ಮಂದಿ ಕಣದಲ್ಲಿದ್ದು, ಕಾಂಗ್ರೆಸ್ 17, ಬಿಜೆಪಿ 18, ಜನತಾ ದಳ(ಎಸ್) 9, ಸಿಪಿಐ(ಎಂ)1, ಕೆಜೆಪಿ 4, ಸ್ವತಂತ್ರರು 6 ಸ್ಪರ್ಧಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 9, ಕಾಂಗ್ರೆಸ್ 6, ಜೆಡಿಎಸ್ 1, ಪಕ್ಷೇತರರು ಇಬ್ಬರಿದ್ದಾರೆ. ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಶಾಸಕ ಎಸ್. ಅಂಗಾರ ಮತ್ತವರ ಬೆಂಬಲಿಗರು ಒಂದಷ್ಟು ಬೇಸರಿಸಿಕೊಂಡಿದ್ದರೂ ಮತ್ತೆ ಮೌನಕ್ಕೆ ಶರಣಾಗಿರುವುದು ಬಿಜೆಪಿಗೆ ಬಿಸಿ ತುಪ್ಪವಾಗದು. ಆದರೆ, ಕಾಂಗ್ರೆಸ್ ಮಾತ್ರ ಸುಳ್ಯವನ್ನು ಪ್ರತಿಷ್ಠೆಯ ಕ್ಷೇತ್ರವಾಗಿ ಪರಿಗಣಿಸಿದೆ. ರಾಜ್ಯದ ಪ್ರಮುಖ ನಾಯಕರು ಸುಳ್ಯಕ್ಕೆ ಆಗಮಿಸಿ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇವೆಲ್ಲದರ ಮಧ್ಯೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಬಹಿರಂಗ ಸಭೆ ನಡೆಸಿ ಪಕ್ಷದ ಪ್ರಚಾರ ನಡೆಸಿದ್ದರು. ಅದು ಈ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆಗೊಂಡೀತೇ? ಎಂದು ಕಾದು ನೋಡಬೇಕಾಗಿದೆ.
ಚುನಾವಣೆ : ಮಾರ್ಚ್ 7
ಫಲಿತಾಂಶ : ಮಾರ್ಚ್ 11.
ವಾರ್ಡ್ ಗಳು : 189
ಮತದಾರರು : 4,60,381
ಅಭ್ಯರ್ಥಿಗಳು : 677
ಕಾಂಗ್ರೆಸ್ : 189
ಬಿಜೆಪಿ : 179
ಜೆಡಿಎಸ್ : 130
ಎಸ್ ಡಿಪಿಐ : 46
ಸಿಪಿಐಎಂ : 33
ಕೆಜೆಪಿ : 23
ಬಿಎಸ್ಆರ್ : 14
ಡಬ್ಲ್ಯುಪಿಐ : 6
ಸಿಪಿಐ : 2
ಜೆಡಿಯು : 2
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ : 1
ಸ್ವತಂತ್ರರು : 55
Click this button or press Ctrl+G to toggle between Kannada and English