ಮಂಗಳೂರು : ಒಂದು ಹುಡುಗಿಯ ಮೇಲೆ ಅತ್ಯಾಚಾರ ನಡೆಸಿದ ನಂತರ ಅವಳನ್ನು ಕೊಲೆ ಮಾಡುವ ಮೂಲಕ ನಾಗರೀಕತೆಯ ಮುಖಕ್ಕೆ ಮಸಿ ಬಳಿದ ಘಟನೆ ತೀರಾ ಇತ್ತೀಚೆಗೆ ಕರಾವಳಿಯಲ್ಲಿ ನಡೆದಿದೆ. ಅತ್ಯಾಚಾರದಿಂದ ನಲುಗಿದ ಹುಡುಗಿಯನ್ನು ಕೊಲೆ ಮಾಡಿದ ನಂತರ ಕಾಮುಕ ಬಾಯ್ಬಿಟ್ಟ ಮಾತು ತೀರಾ ಅಸಹ್ಯಕ್ಕೆ ಗುರಿ ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹ ಉಳಿದಿಲ್ಲ.
ಅಷ್ಟಕ್ಕೂ ಕಾಮುಕನ ವರ್ಶನ್ ಏನಿತ್ತು ಅಂತೀರಾ.. ಬನ್ನಿ ನೀವೇ ಖುದ್ದಾಗಿ ಕೇಳಿ ಬಿಡಿ. ಬಂಟ್ವಾಳ: `ಸೌಮ್ಯಳನ್ನು ಸಾಯಿಸಿದ್ದು ನಿಜ. ಆದರೆ ನನ್ನದು ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಪರಿಸ್ಥಿ ತಿಗೆ ಹೆದರಿ ಆಕೆಯನ್ನು ಕೊಲೆಗೈಯ್ದು ಕೆರೆಗೆ ಎಸೆದಿದ್ದೇನೆ. ಬಳಿಕ ಯಾರಿಗೂ ಗೊತ್ತಾಗಬಾರದೆಂದು ಅದೇ ಕೆರೆಯಲ್ಲಿ ಸ್ನಾನ ಮಾಡಿದೆ ಎಂದು ಕಾಮುಕ ಹಂತಕ ಸತೀಶ ನ್ಯಾಯಾಲಯದಲ್ಲಿ ಸತ್ಯ ಬಾಯ್ಬಿಟ್ಟಿದ್ದಾನೆ.
ಆರೋಪಿ ಸತೀಶ್, ಸೌಮ್ಯಳನ್ನು ನಾನು ಕಳೆದ ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದೆ. ಆದರೆ ಆಕೆ, ಆಕೆಯ ಮನೆಯವರಿಗೆ ನನ್ನ ಪ್ರೀತಿ ಅರ್ಥವಾಗಿರಲಿಲ್ಲ. ಆಕೆಯನ್ನು ಹಲವಾರು ಬಾರಿ ಮನವೊಲಿಸಲು ಯತ್ನಿಸಿದ್ದೆ. ಆದರೆ ನನ್ನ ನಿರೀಕ್ಷೆ ಹುಸಿಯಾಗಿತ್ತು ಎಂದು ಭಗ್ನಪ್ರೇಮಿಯಂತೆ ತನ್ನ ಪ್ರೇಮ ಕಹಾನಿಯನ್ನು ವಿವರಿಸಿದ್ದಾನೆ. ಅಂದು ಮಧ್ಯಾಹ್ನ ಹೊತ್ತು ಕೂದಲು ತೆಗೆಸಲು ಹೋಗಿದ್ದೆ. ಅಂಗಡಿ ಬಾಗಿಲು ಮುಚ್ಚಿದ್ದರಿಂದ ಮನೆಗೆ ಬರುತ್ತಿದ್ದೆ. ದಾಸಕೋಡಿಗೆ ತಲುಪುವಾಗ ಸೌಮ್ಯ ಬಸ್ ನಿಂದ ಇಳಿಯುತ್ತಿದ್ದಳು. ಅವಳನ್ನೇ ಹಿಂಬಾಲಿಸಿದೆ. ಕಶೆಕೋಡಿ ಎಂಬಲ್ಲಿ ಆಕೆಯ ಕೈಹಿಡಿದು ಎಳೆದೆ. ಅವಳು ನನ್ನ ಮುಷ್ಠಿಯಿಂದ ಜಾರಿಕೊಳ್ಳಲು ಯತ್ನಿಸಿದಾಗ ನಮ್ಮೊಳಗೆ ಸೆಣಸಾಟ ನಡೆಯಿತು.
ನನ್ನ ಕೈ ತಪ್ಪಿಸಿ ಓಡುವಷ್ಟರಲ್ಲಿ ನೆಲಕ್ಕೆ ಬಿದ್ದವಳು, ಹೆದರಿಕೊಂಡು ಬೊಬ್ಬೆ ಇಟ್ಟಳು. ಇನ್ನು ಜನ ಸೇರಿ ನನ್ನನ್ನು ಬಿಡುವುದಿಲ್ಲ ಎಂದು ಹೆದರಿ ಆಕೆಯ ಕುತ್ತಿಗೆಯನ್ನು ಕೈಯಲ್ಲಿದ್ದ ಟವಲ್ ನಿಂದ ಗಟ್ಟಿಯಾಗಿ ಬಿಗಿದೆ. ಅಷ್ಟರಲ್ಲಿ ಅವಳು ಕೊನೆಯುಸಿರು ಎಳೆದಿ ದ್ದಳು. ಆ ದೃಶ್ಯ ನೋಡಿ ಮತ್ತೂ ಕಂಗಾ ಲಾದ ನಾನು ಅವಳ ದೇಹವನ್ನು ಕೆರೆಗೆ ಎಸೆದು, ಅದೇ ಕೆರೆಯಲ್ಲಿ ಮುಳುಗಿ ಸ್ನಾನ ಮಾಡಿದೆ.
ನ್ಯಾಯಾಂಗ ಬಂಧನ: ಸೌಮ್ಯ ಹಂತಕನಿಗೆ ಬಂಟ್ವಾಳ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಘಟನೆಯ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರು ಮಾರ್ಚ್ 13ರ ತನಕ ನ್ಯಾಯಾಂಗ ಬಂಧನ ನೀಡಿರುವುದಾಗಿ ವೃತ್ತ ನಿರೀಕ್ಷಕ ಅನಿಲ್ ಕುಲಕರ್ಣಿ ತಿಳಿಸಿದ್ದಾರೆ.
ಸತೀಶ್ ನಿಜಕ್ಕೂ ಮೆಂಟಲ್ :
ಆರೋಪಿ ಸತೀಶನನ್ನು ಪೊಲೀಸರು `ಮೆಂಟಲ್ ಎನ್ನುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಏಕಮುಖವಾಗಿ ಪ್ರೀತಿಸಿ ತನ್ನ ತೆವಲು ತೀರಿಸಿಕೊಳ್ಳುವ ಯತ್ನದಲ್ಲಿ ಮುಗ್ಧೆ ಸೌಮ್ಯಳನ್ನು ಅಮಾನವೀಯವಾಗಿ ಹತ್ಯೆ ಮಾಡಿ ಕೆರೆಗೆಸೆದ ಸತೀಶ ಮೆಂಟಲ್ ಹೇಗಾಗುತ್ತಾನೆ ಎನ್ನುವುದು ಸಾರ್ವಜನಿಕರ ಪ್ರಶ್ನೆ. ಪೊಲೀಸರು ಈಗಿಂದೀಗಲೇ ಆರೋಪಿಯನ್ನು ರಕ್ಷಿಸಲು ಪ್ರಯತ್ನ ಮಾಡುತ್ತಿದ್ದಾರೆ. ಎಫ್ಐಆರ್ ನಲ್ಲಿ ದುರ್ಬಲ ಅಂಶಗಳನ್ನು ದಾಖಲಿಸಿದರೆ ಮುಂದಿನ ದಿನಗಳಲ್ಲಿ ಸತೀಶನನ್ನು ಗಲ್ಲುಶಿಕ್ಷೆಯಿಂದ ತಪ್ಪಿಸುವುದು ಸುಲಭವಾಗುತ್ತದೆ ಎಂದೇ ಪೊಲೀಸರು ಸಾರ್ವಜನಿಕರನ್ನು `ಮೆಂಟಲ್’ ಮಾಡಲು ಹೊರಟಿದ್ದಾರೆ ಎನ್ನುತ್ತಿದ್ದಾರೆ ಸಾರ್ವಜನಿಕರು.
ಪ್ರತಿಭಾವಂತ ಹುಡುಗಿ ಸೌಮ್ಯ:
ಸೌಮ್ಯರ ತಂದೆ ಸೀತಾರಾಮ ಶೇರಿಗಾರರದ್ದು ತೀರಾ ಬಡಕುಟುಂಬ ವಾಗಿದ್ದು, ಅವರು ವಾದ್ಯ ಊದುವ ಕಾಯಕ ನಡೆಸುವವರು. ಇವರ ಪತ್ನಿ ನಳಿನಾಕ್ಷಿ ಸ್ಥಳೀಯ ಕೃಷಿಕರ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಐವರು ಮಕ್ಕಳಿದ್ದು, ನಾಲ್ವರು ಹೆಣ್ಣುಮಕ್ಕಳು ಮತ್ತು ಓರ್ವ ಪುತ್ರನಿದ್ದಾನೆ. ಹಿರಿಯ ಪುತ್ರಿ ಸೌಮ್ಯ ಪ್ರತಿಭಾನ್ವಿತೆಯಾಗಿದ್ದು, ಮಂಗಳೂರಿ ನಲ್ಲಿ ಬಿಎಡ್ ತರಬೇತಿ ಮುಗಿಸಿದ್ದು, ಮಣಿ ಪಾಲದ ಖಾಸಗಿ ಸಂಸ್ಥೆಯಲ್ಲಿ ತಾತ್ಕಾಲಿಕ ಉದ್ಯೋಗಕ್ಕೆ ಸೇರಿದ್ದರು. ಈ ವೇಳೆ ಮಣಿ ಪಾಲದ ಚಿಕ್ಕಮ್ಮನ ಮನೆಯಲ್ಲಿ ಉಳಿದಿದ್ದರು. ಸರಕಾರ ಶಿಕ್ಷಕರ ನೇಮಕಕ್ಕೆ ಸಂಬಂಧಿಸಿ ಅರ್ಜಿಯನ್ನು ಆಹ್ವಾನಿಸಿದ್ದ ಹಿನ್ನೆಲೆಯಲ್ಲಿ 11ರ ಸುಮಾರಿಗೆ ಮನೆಗೆ ಮರಳುವಾಗ ಕಾಮುಕನ ಕೈಯಲ್ಲಿ ಸಿಲುಕಿ ದಾರುಣ ಅಂತ್ಯವನ್ನು ಕಂಡಿದ್ದಾಳೆ.
ಬಸ್ ನಿಂದ ಇಳಿದು ಮನೆಯ ಕಡೆ ನಡೆದುಕೊಂಡು ಹೋಗುತ್ತಿರುವಾಗ ಬಲವಂತವಾಗಿ ತಡೆದು ನಿಲ್ಲಿಸಿದ ಸತೀಶ, ಆಕೆಯ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆತನ ಕೃತ್ಯವನ್ನು ವಿರೋಧಿಸಿದ ಸೌಮ್ಯಳ ಕುತ್ತಿಗೆಗೆ ಟವಲ್ ನಿಂದ ಬಿಗಿದಿದ್ದಾನೆ. ಅಷ್ಟರಲ್ಲಿ ಆಕೆ ಬೊಬ್ಬಿಟ್ಟಿದ್ದಾಳೆ. ಆದರೂ ಬಿಡದ ಆತ ಅವಳನ್ನು ಸಾಯಿಸಿಯೇ ಬಿಟ್ಟಿದ್ದ. ಕೊನೆ ಯುಸಿರೆಳೆದ ಆಕೆಯನ್ನು ಸಮೀಪದ ನಿರ್ಜನ ಪ್ರದೇಶದ ಕೆರೆಯೊಂದಕ್ಕೆ ಎಸೆದು ಅಲ್ಲಿಂದ ಪರಾರಿಯಾಗಿದ್ದ.
ಈ ಸಂದರ್ಭ ಆಕೆಯ ಮೊಬೈಲ್ ಫೋನ್ ಸ್ಥಳದಲ್ಲೇ ಬಿದ್ದಿದ್ದು, ಅದು ನಡೆದುಕೊಂಡು ಬರುತ್ತಿದ್ದ ಸ್ಥಳೀಯ ವಿದ್ಯಾ ಎಂಬಾಕೆಗೆ ಸಿಕ್ಕಿತ್ತು. ಅಷ್ಟರಲ್ಲಿ ಅದಕ್ಕೆ ಮಣಿಪಾಲದಲ್ಲಿನ ಸೌಮ್ಯಳ ಚಿಕ್ಕಮ್ಮನ ಫೋನ್ ಬಂದಿದ್ದು, ವಿದ್ಯಾ ಫೋನ್ ಕರೆಗೆ ಉತ್ತರಿಸಿ ಮೊಬೈಲ್ ಫೋನ್ ದಾರಿಯಲ್ಲಿ ಸಿಕ್ಕಿದ್ದನ್ನು ಹೇಳಿದ್ದರು. ತಕ್ಷಣ ಮನೆಯವರು ಸ್ಥಳೀಯರ ಜೊತೆ ಸೇರಿ ಹುಡುಕಾಡತೊಡಗಿದಾಗ ಮೊಬೈಲ್ ಸಿಕ್ಕಿದ ಸ್ಥಳದ ಸಮೀಪದ ಪೊದೆಯ ಬಳಿ ಚಪ್ಪಲಿ, ಬ್ಯಾಗ್, ಅರ್ಜಿ ಫಾರಂ ಸಿಕ್ಕಿದೆ. ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಆಕೆಯ ಮೃತದೇಹ ಪತ್ತೆಯಾಯಿತು. ಮೃತದೇಹದಲ್ಲಿ ಆಕೆಯ ಕೈ, ಕತ್ತು ಮತ್ತು ಹೊಟ್ಟೆಯಲ್ಲಿ ಪರಚಿದ ಗಾಯಗಳು ಕಂಡುಬಂದಿದ್ದು, ಚಿನ್ನದ ಚೈನ್ ಮತ್ತು ಮೂಗುತಿ ನಾಪತ್ತೆಯಾಗಿತ್ತು.
ಇಬ್ಬರ ಅತ್ಯಾಚಾರಕ್ಕೆ ಯತ್ನಿಸಿದ್ದ!
ಆರೋಪಿ ಸತೀಶ ಈ ಹಿಂದೆಯೂ ಇಬ್ಬರು ಯುವತಿಯರ ಬಲತ್ಕಾರಕ್ಕೆ ಯತ್ನಿಸಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದ. ಆದರೆ ಯುವತಿಯರ ಮನೆಮಂದಿ ಮಾನ-ಮರ್ಯಾದೆಗಂಜಿ ಪೊಲೀಸರಿಗೆ ದೂರು ನೀಡಲು ಮುಂದಾಗಿರಲಿಲ್ಲ. ಇದೀಗ ದಾರುಣ ಬಲಿಯಾದ ಸೌಮ್ಯಳ ಹಿಂದೆ ಬಿದ್ದಿದ್ದ ಸತೀಶ ಈ ಹಿಂದೊಮ್ಮೆ ಆಕೆಯ ಕೈಯನ್ನು ಹಿಡಿದು ಎಳೆದಾಡಿದ್ದ ಮಾತ್ರವಲ್ಲದೆ ಆಕೆಯಲ್ಲಿ ಮೊಬೈಲ್ ನಂಬರ್ ನೀಡುವಂತೆ ಅನೇಕ ಬಾರಿ ಪೀಡಿಸಿದ್ದ ಎನ್ನಲಾಗಿದೆ. ಕಲ್ಲು ಸಾಗಾಟದ ಲಾರಿಯಲ್ಲಿ ಕೆಲಸ ಮಾಡುತ್ತಿದ್ದ ಸತೀಶನ ಮನೆ ಘಟನಾ ಸ್ಥಳದಿಂದ ಕೆಲವೇ ಮೀಟರ್ ದೂರದಲ್ಲಿದೆ. ಆರೋಪಿ ಸೌಮ್ಯಳನ್ನು ರಸ್ತೆಯಿಂದ ಎಳೆದುಕೊಂಡು ಕೆರೆಯ ಕಡೆ ಹೋಗುವಾಗ ತನ್ನನ್ನು ಕೊಲ್ಲುತ್ತಿದ್ದಾರೆ, ಬಚಾವ್ ಮಾಡಿ ಎಂದು ಕೂಗಿಕೊಂಡಿದ್ದಳು.
Click this button or press Ctrl+G to toggle between Kannada and English