ಕಾಸರಗೋಡು : ಕರ್ನಾಟಕ- ಕೇರಳ ಗಡಿ ಭಾಗದಲ್ಲಿ ಅಕ್ರಮ ಕಳ್ಳಸಾಗಾಟದ ದಂಧೆಗೆ ಚಾಲನೆ ದೊರೆತಿದೆ.
ಕಾಸರಗೋಡಿನ ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯ ಪೆರ್ಲ- ಪೂವನಡ್ಕ ರಸ್ತೆಯ ಕುರೆಡ್ಕದಿಂದ ನಡುಬೈಲು ಮತ್ತು ಸೇರಾಜೆ ಮೂಲಕ ಕೋಳಿಗಳ ವ್ಯಾಪಕ ಕಳ್ಳಸಾಗಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಕೇರಳ ಹಾಗೂ ಕರ್ನಾಟಕ ರಾಜ್ಯದ ಖಜಾನೆಗೆ ಭಾರಿ ಮೊತ್ತದ ತೆರಿಗೆ ನಷ್ಟವುಂಟಾಗುತ್ತಿದೆ.
ಕರ್ನಾಟಕ- ಕೇರಳ ಗಡಿ ಭಾಗದಲ್ಲಿ ಅಕ್ರಮವಾಗಿ ಕಳ್ಳ ಸಾಗಾಟ ನಡೆಯುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಈ ಹಿಂದೆ ತೊಟ್ಟೆ ಸಾರಾಯಿ, ಕೋಣ ಮಾಂಸ ಸಾಗಾಟ ಪೊಲೀಸರ ಕಣ್ತಪ್ಪಿಸಿ ಸರಾಗವಾಗಿ ನಡೆಯುತ್ತಿತ್ತು. ಆದರೆ ಅಬಕಾರಿ ಪೊಲೀಸರು ನಿರಂತರ ಅಲ್ಲಲ್ಲಿ ದಾಳಿ ನಡೆಸಿದ ಪರಿಣಾಮ ಈಗ ನಿಯಂತ್ರಣದಲ್ಲಿದೆ. ಆದರೆ ಇದೀಗ ಕೋಳಿಗಳ ಅಕ್ರಮ ಸಾಗಾಟ ದಂಧೆ ಗಡಿ ಪ್ರದೇಶದಲ್ಲಿ ಶುರುವಾಗಿರುವುದು ಪೊಲೀಸರ ನಿದ್ದೆಗೆಡಿಸಿದೆ.
ಮಾರಾಟ ತೆರಿಗೆ ಇಲಾಖೆ ಚೆಕ್ ಪೋಸ್ಟ್ ಅಧಿಕಾರಿಗಳ ಕಣ್ಣು ತಪ್ಪಿಸಿ ಬಳಸು ದಾರಿಯಾಗಿ ಕೇರಳಕ್ಕೆ ಅಕ್ರಮ ಸಾಗಾಟ ನಡೆಸಲಾಗುತ್ತಿದ್ದು, ಮಾರಾಟ ತೆರಿಗೆ ಇಲಾಖೆ ಅಧಿಕಾರಿಗಳು ಮಾತ್ರ ಜಾಣ ಕಿವುಡು ಅನುಸರಿಸುತ್ತಿದ್ದಾರೆ. ಗಡಿ ಪ್ರದೇಶ ಅಡ್ಕಸ್ಥಳದಿಂದ ಕೇವಲ ಐದು ಕಿ.ಮೀ. ದೂರದ ಪೆರ್ಲದಲ್ಲಿ ಕೇರಳ ಮಾರಾಟ ತೆರಿಗೆ ಚೆಕ್ ಪೋಸ್ಟ್ ಚಟುವಟಿಕೆ ನಡೆಸುತ್ತಿದ್ದರೂ, ಇವರ ಮೂಗಿನ ನೇರಕ್ಕೆ ನಡೆದು ಬರುತ್ತಿರುವ ಕಳ್ಳಸಾಗಾಟ ದಂಧೆಯನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.
ಕರ್ನಾಟಕದಿಂದ ದಿನವೊಂದಕ್ಕೆ 15ರಿಂದ 20 ಲಾರಿಗಳು ಕಳ್ಳಸಾಗಾಟದ ಮೂಲಕ ಮಾಂಸದ ಕೋಳಿಯನ್ನು ಕೇರಳಕ್ಕೆ ರವಾನಿಸುತ್ತಿದೆ. ಎಣ್ಮಕಜೆ ಪಂಚಾಯಿತಿಯ ಒಂದೇ ಕಡೆ ಇಷ್ಟೊಂದು ಪ್ರಮಾಣದ ಕೋಳಿ ಸಾಗಾಟವಾಗುತ್ತಿದ್ದರೆ, ಪೈವಳಿಕೆ, ವರ್ಕಾಡಿ, ಸುಳ್ಯಪದವು- ಬೆಳ್ಳೂರು, ಕಿನ್ನಿಂಗಾರು ಹಾದಿಯಾಗಿಯೂ ಅನಧಿಕೃತವಾಗಿ ಕೋಳಿ ಸಾಗಾಟ ನಿರಂತರ ನಡೆಯುತ್ತಿರುವುದಾಗಿ ನಾಗರಿಕರು ಆರೋಪಿಸುತ್ತಾರೆ. ಇದರಿಂದ ಮಾಸಿಕ ಲಕ್ಷಾಂತರ ರೂ. ತೆರಿಗೆ ಸರಕಾರದ ಖಜಾನೆಗೆ ಪೋಲಾಗುತ್ತಿದೆ.
ಈ ಹಿಂದೆ ಎಣ್ಮಕಜೆ ಪಂಚಾಯಿತಿಯ ಕುರೆಡ್ಕ ಮೂಲಕ ಸೇರಾಜೆ ರಸ್ತೆಯಲ್ಲಿ ಸಾಗಿ ಶಿರಿಯ ಅಣೆಕಟ್ಟು ಮೂಲಕ ಮಣಿಯಂಪಾರೆಗೆ ಸಂಪರ್ಕ ಕಲ್ಪಿಸಿ ಕೇರಳಕ್ಕೆ ಕೋಳಿ ಹಾಗೂ ಇತರ ಸಾಮಗ್ರಿಗಳನ್ನು ಅನಧಿಕೃತವಾಗಿ ಸಾಗಿಸಲಾಗುತ್ತಿತ್ತು. ಪತ್ರಿಕೆ ವಿಶೇಷ ವರದಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಅಂದು ಸೇರಾಜೆ ಪ್ರದೇಶದಲ್ಲಿ ಚೆಕ್ ಪೋಸ್ಟ್ ಅಳವಡಿಸಲಾಗಿತ್ತಾದರೂ, ನಂತರ ಅದನ್ನು ತೆರವುಗೊಳಿಸಲಾಗಿದೆ. ನಂತರ ಹಿಂದಿನಂತೆಯೇ ಯಥೇಚ್ಛವಾಗಿ ಕಳ್ಳಸಾಗಾಟ ನಡೆದು ಬರಲಾರಂಭಿಸಿದೆ.
ನಡುಬೈಲು ರಹದಾರಿ
ನಡುಬೈಲು ಮತ್ತು ಬೆದ್ರಂಪಳ್ಳ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕಾಸರಗೋಡು ಸರಕಾರಿ ಕಾಲೇಜು ಎನ್ನೆಸ್ಸೆಸ್ ಘಟಕ ತನ್ನ ವಾರ್ಷಿಕ ವಿಶೇಷ ಶಿಬಿರದ ಮೂಲಕ ನಡುಬೈಲು ಎಂಬಲ್ಲಿ ಮೂರು ವರ್ಷದ ಹಿಂದೆ ರಸ್ತೆಯನ್ನು ನಿರ್ಮಿಸಿದ್ದು, ಇದೀಗ ಈ ಹಾದಿ ಕಳ್ಳ ಸಾಗಾಟಕ್ಕೆ ಉಪಯೋಗವಾಗುತ್ತಿದೆ.
ಕುರೆಡ್ಕದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿಯಿಂದ ಎಡಕ್ಕೆ ತಿರುಗುವ ರಸ್ತೆಯಲ್ಲಿ ಕಿ.ಮೀ. ಸಂಚರಿಸಿದಾಗ ನಡುಬೈಲು ಬಯಲು ಪ್ರದೇಶ ಲಭಿಸುತ್ತಿದ್ದು, ಇಲ್ಲಿಂದ ಫರ್ಲಾಂಗು ದೂರದ ಬೆದ್ರಂಪಳ್ಳ ಮೂಲಕ ಕಳ್ಳಸಾಗಾಟದಾರರು ಸುಲಭವಾಗಿ ತಮ್ಮ ಕೇಂದ್ರಗಳಿಗೆ ಸೇರಿಕೊಳ್ಳುತ್ತಿದ್ದಾರೆ.
ಭಾರಿ ಬೆಂಗಾವಲು
ಮಾಂಸದ ಕೋಳಿ ಸಾಗಾಟದ ವಾಹನವೊಂದು ಕರ್ನಾಟಕದಿಂದ ಲೋಡು ಮಾಡಿ ಹೊರಟಿತೆಂದರೆ, ಅದರ ಹಿಂದೆ ಹಾಗೂ ಮುಂದೆ ಕೆಲವೊಂದು ಬೆಂಗಾವಲು ವಾಹನಗಳು ಸಾಗುತ್ತದೆ. ಅಲ್ಲದೆ, ಚೆಕ್ ಪೋಸ್ಟ್ ಅಧಿಕಾರಿಗಳು ಆಗಮಿಸುವ ಬಗ್ಗೆ ಮಾಹಿತಿ ನೀಡಲು ಅಲ್ಲಲ್ಲಿ ತಮ್ಮ ಏಜೆಂಟರನ್ನೂ ನಿಲ್ಲಿಸಿರುತ್ತಾರೆ.
ರಾತ್ರಿ 12ರ ನಂತರ ಸಕ್ರಿಯರಾಗುವ ದಂಧೆಕೋರರು, ಬೆಳಗ್ಗೆ 9ರ ವರೆಗೂ ಅನಧಿಕೃತ ಸಾಗಾಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಅಪರಿಚಿತ ವಾಹನಗಳು ಕಂಡು ಬಂದರೆ ಕಳ್ಳಸಾಗಾಟದ ಲಾರಿಗೆ ಮಾಹಿತಿ ರವಾನೆಯಾಗಿ ಅಲ್ಲೇ ಲಾರಿಯನ್ನು ತಡೆಹಿಡಿಯಲಾಗುತ್ತದೆ.
ಪೆರ್ಲದ ಚೆಕ್ ಪೋಸ್ಟ್ ತಪ್ಪಿಸಿ ಕೇರಳಕ್ಕೆ ಕಳ್ಳ ಸಾಗಾಟ ನಡೆಸಲು ಈ ರೀತಿಯ ಕಸರತ್ತು ನಿರಂತರ ನಡೆದು ಬರುತ್ತಿದೆ. ಇದೂ ಅಲ್ಲದೆ, ಸ್ಥಳೀಯ ಕೆಲವು ವ್ಯಕ್ತಿಗಳೂ ಕಳ್ಳಸಾಗಾಟದಾರರೊಂದಿಗೆ ಸೇರಿಕೊಂಡು ದಂಧೆಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ.
ಚೆಕ್ ಪೋಸ್ಟ್ ಸ್ಥಾಪನೆಗೆ ಮನವಿ
ಈಗಾಗಲೇ ಪೈವಳಿಕೆ, ವರ್ಕಾಡಿ, ಎಣ್ಮಕಜೆ ಪಂಚಾಯಿತಿ ಗಡಿ ಪ್ರದೇಶದ ಬಳಸುದಾರಿಯ ಮೂಲಕ ಕೇರಳಕ್ಕೆ ಕಳ್ಳಸಾಗಾಟ ನಡೆದು ಬರುತ್ತಿದ್ದು, ನಿಗದಿತ ಪ್ರದೇಶದಲ್ಲಿ ಚೆಕ್ ಪೋಸ್ಟ್ ಸ್ಥಾಪನೆಗೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿರುವುದಾಗಿ ಚೆಕ್ ಪೋಸ್ಟ್ ತಪಾಸಣೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಧಿಕಾರಿಗಳ ಕಣ್ಣುತಪ್ಪಿಸಿ ಹೊರ ರಾಜ್ಯದಿಂದ ವ್ಯಾಪಕವಾಗಿ ಕಳ್ಳಸಾಗಾಟ ನಡೆದು ಬರುತ್ತಿರುವ ವಿಷಯ ಇಲಾಖೆಗೆ ತಿಳಿದಿದ್ದರೂ, ಇದನ್ನು ಸಶಕ್ತವಾಗಿ ತಡೆಗಟ್ಟುವಲ್ಲಿ ಇಲಾಖೆಯೂ ಅಸಮರ್ಥವಾಗಿದೆ. ಇಲಾಖೆ ವಾಹನ ತಪಾಸಣೆಗೆ ಹೊರಟ ತಕ್ಷಣ ಕಳ್ಳಸಾಗಾಟದಾರರಿಗೆ ಮಾಹಿತಿ ರವಾನಿಸುವ ತಂಡ ಕಾರ್ಯಾಚರಿಸುತ್ತಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿರುವುದಾಗಿ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಏನಿದ್ದರೂ, ಇಲಾಖೆ ಅಧಿಕಾರಿಗಳ ಅರಿವಿನಲ್ಲೇ ಕಳ್ಳಸಾಗಾಟ ನಡೆದು ಬರುತ್ತಿರುವುದು ಜಗಜ್ಜಾಹೀರಾಗಿದೆ. ಸರಕಾರದ ಖಜಾನೆಗೆ ಲಕ್ಷಾಂತರ ರೂ. ತೆರಿಗೆ ವಂಚಿಸುತ್ತಿರುವ ಕಳ್ಳಸಾಗಾಟವನ್ನು ತಡೆಗಟ್ಟಲು ವಿಫಲವಾಗಿರುವ ಇಲಾಖೆ ಕ್ರಮವನ್ನು ಮೇಲಧಿಕಾರಿಗಳೂ ಗಂಭೀರವಾಗಿ ಪರಿಗಣಿಸಿದಂತೆ ಕಂಡು ಬರುತ್ತಿಲ್ಲ. ಈ ಬಗ್ಗೆ ಮೇಲಧಿಕಾರಿಗಳನ್ನು ಪ್ರಶ್ನಿಸಿದರೆ, ಇವೆಲ್ಲವೂ ಸಾಮಾನ್ಯವೆಂಬಂತೆ ಮಾತನಾಡುತ್ತಿದ್ದಾರೆ. ಕಳ್ಳಸಾಗಾಟದ ಮೂಲಕ ಕೆಲವೇ ವ್ಯಕ್ತಿಗಳು ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಇಲಾಖೆಗೆ ಬಿಸಿ ಮುಟ್ಟಿಸುವ ಕೆಲಸ ನಡೆಬೇಕಾಗಿದೆ.
Click this button or press Ctrl+G to toggle between Kannada and English