ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಮಾರ್ಚ್ 18 ರಂದು ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು ಕೇಂದ್ರ ಸರ್ಕಾರದ ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯಿಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್, ಮಾಜಿ ಸಂಸದ ವಿನಯ್ ಕುಮಾರ್ ಸೊರಕೆ ಹಾಗೂ ಇತರ ರಾಜ್ಯ ಮತ್ತು ಜಿಲ್ಲಾ ನಾಯಕರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬುದಾಗಿ ಕಾಂಗ್ರೆಸ್ ಮುಖಂಡ ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ತಿಳಿಸಿದರು.
ಅವರು ಇಂದು ಪಕ್ಷದ ಚುನಾವಣಾ ಪ್ರಚಾರ ಕಚೇರಿಯಲ್ಲಿ ನೂತನ ಪಾಲಿಕೆ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಾ, ಮಾರ್ಚ್ 18 ಸೋಮವಾರದಂದು ನಡೆಯುವ ಬೃಹತ್ ಸಮಾವೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡು ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಹಾಗು ಇದೆ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಗೆಲುವಿನ ವಿಜಯೋತ್ಸವವನ್ನು ಆಚರಿಸಲಾಗುವುದೆಂದು ತಿಳಿಸಿದರು.
ಅಭಿನಂದನಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ರಮಾನಾಥ ರೈ ಮಾತನಾಡಿ, ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಪಕ್ಷದ ಸಿದ್ದಾಂತದಂತೆ ಕಾರ್ಯ ನಿರ್ವಹಿಸಿ ಪಕ್ಷದ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಸಹಕರಿಸಬೇಕೆಂದು ಕೇಳಿಕೊಂಡರು.
ಎಐಸಿಸಿ ಸದಸ್ಯ ಪಿ.ವಿ.ಮೋಹನ್, ಮಾಜಿ ಸಂಸದ ವಿನಯ್ ಕುಮಾರ್ ಸೊರಕೆ, ಕೆಪಿಸಿಸಿ ಕಾರ್ಯದರ್ಶಿ ಐವನ್ ಡಿಸೋಜ, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಸದಸ್ಯ ಮಿಥುನ್ ರೈ ಹಾಗೂ ಇತರ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English