ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ

4:12 PM, Monday, October 18th, 2010
Share
1 Star2 Stars3 Stars4 Stars5 Stars
(No Ratings Yet)
Loading...

 ಮೈಸೂರು ದಸರಾಮೈಸೂರು : 400 ವರ್ಷಗಳ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ  ಭಾನುವಾರ ಮಧ್ಯಾಹ್ನ 1.45 ಕ್ಕೆ  ಶುಭ ಕುಂಭ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು .  750 ಕಿ.ಗ್ರಾಂ. ತೂಕದ ಬಂಗಾರದ ಅಂಬಾರಿಯಲ್ಲಿದ್ದ ದೇವಿ ಚಾಮುಂಡೇಶ್ವರಿಗೆ ಹಸಿರು ಶಾಲು ಹೊದ್ದ ಸಿಎಂ ಬಿ.ಎಸ್. ಯಡಿಯೂರಪ್ಪ ಪುಷ್ಪ ಸಮರ್ಪಣೆ ಮಾಡಿ ವಿದ್ಯುಕ್ತವಾಗಿ ಚಾಲನೆ ನೀಡಿದರು. ಅಂಬಾರಿ ಹೊತ್ತಿದ್ದ ಬಲರಾಮ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಬಲರಾಮನ ಹಿಂದೆ ಸುಂದರವಾಗಿ ಅಲಂಕೃತಗೊಂಡ ಆನೆಗಳು ಜಂಬೂ ಸವಾರಿಯಲ್ಲಿ ಭಾಗವಹಿಸಿದೆ.

 ಮೈಸೂರು ದಸರಾ
ರಾಜವಂಶಸ್ಥ, ಮಾಜಿ ಸಂಸದ ಶ್ರೀಕಂಠದತ್ತ  ನರಸಿಂಹರಾಜ ಒಡೆಯರ್, ರಾಜ್ಯ ಹೈ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೆಹರ್ , ಮೈಸೂರು ಉಸ್ತುವಾರಿ ಸಚಿವ ಎ ರಾಮದಾಸ್ , ಮೈಸೂರು ನಗರ ಮೇಯರ್ ಸಂದೇಶ್ ಸ್ವಾಮಿ ಮತ್ತಿತ್ತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕರಗ, ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ನಂದಿ ಕೋಲು ಕುಣಿತ, ಸೋಮನ ಕುಣಿತ, ಪೂಜಾ ಕುಣಿತ, ಕೋಲಾಟ ಹೀಗೆ ವಿವಿಧ ಕಲಾವಿದರ ಕಲೆ ದಸರಾ ಮೆರವಣಿಗೆಯಲ್ಲಿ ಆಕರ್ಷಕವಾಗಿತ್ತು.
ಆಯಾ ಜಿಲ್ಲೆಗಳ ವಿಶೇಷತೆಗಳನ್ನು ಎತ್ತಿ ತೋರಿಸುವ ಸ್ತಬ್ಧಚಿತ್ರಗಳು, ಗದಗಿನ ಗಾನಯೋಗಿ ದಿ. ಪುಟ್ಟರಾಜ ಗವಾಯಿಗಳ ಸ್ತಬ್ದ ಚಿತ್ರ , ಮಂಡ್ಯಜಿಲ್ಲೆಯಿಂದ ಮೈಸೂರು ದರ್ಬಾರ್ ಚಿತ್ರ, ಚಿತ್ರದುರ್ಗದ ಕಲ್ಲಿನ ಕೋಟೆ, ಕೊಪ್ಪಳದ ಆನೆಗೊಂದಿ ಕೋಟೆ, ದಕ್ಷಿಣ ಕನ್ನಡ ಜಿಲ್ಲೆ ರಾಣಿ ಅಬ್ಬಕ್ಕನ ಚಿತ್ರ, ತುಮಕೂರಿನ ಮಧುಗಿರಿ ಬೆಟ್ಟ, ಬಿಜಾಪುರದ ಗೋಲ್ ಗುಂಬಜ್ ಚಿತ್ರ, ಶಿವಮೊಗ್ಗದ ಬಿದನೂರು ಕೋಟೆ ಚಿತ್ರಗಳು ಜಂಬೂ ಸವಾರಿಗೆ ಮೆರುಗನ್ನು ತಂದಿತ್ತು.

 ಮೈಸೂರು ದಸರಾ
ಸುಮಾರು 15 ವರ್ಷಗಳಿಂದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ 52 ವರ್ಷದ ಬಲರಾಮ 750 ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಕಳೆದ 12 ವರ್ಷಗಳಿಂದ ಹೊರುತ್ತಿದ್ದಾನೆ. ಬಲರಾಮನಿಗೆ ವಯಸ್ಸಾಗುತ್ತಿರುವುದರಿಂದ ಕಣ್ಣಿನಲ್ಲಿ ಪೊರೆ ಬಂದಿರುವ ಕಾರಣ ಕೊನೆ ಬಾರಿಗೆ ಚಿನ್ನದ ಅಂಬಾರಿಯನ್ನು ಹೊತ್ತಿದ್ದಾನೆ.  ಜಂಬೂ ಸವಾರಿ ಮೆರವಣಿಗೆಯಲ್ಲಿ ಅಭಿಮನ್ಯು, ವರಲಕ್ಷ್ಮಿ, ಗಜೇಂದ್ರ, ಅರ್ಜುನ, ಸರಳಾ, ಮೇರಿ ಆನೆಗಳೂ ಪಾಲ್ಗೊಳ್ಳುತ್ತವೆ. ವಿಜಯ ದಶಮಿ ದಿನದಂದು ನಡೆಯುವ ಜಂಬೂ ಸವಾರಿ ಮೈಸೂರು ದಸರಾದ ಪ್ರಮುಖ ಆಕರ್ಷಣೆ.

 ಮೈಸೂರು ದಸರಾ
ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಂದ ಉದ್ಘಾಟನೆಗೊಂಡ ದಸರಾ ಮಹೋತ್ಸವ ಕಳೆದ ಒಂಭತ್ತು ದಿನಗಳಿಂದ ಮನರಂಜನಾ ದಸರಾ, ಯುವದಸರಾ, ಮಹಿಳಾ ದಸರಾ, ಮಕ್ಕಳ ದಸರಾ, ರೈತರ ದಸರಾ, ಆಹಾರ ಮೇಳ, ಯೋಗ ದಸರಾ, ಚಲನಚಿತ್ರೋತ್ಸವ, ಗ್ರಾಮೀಣ ದಸರಾ, ಭಜನಾ ದಸರಾ, ಕ್ರೀಡಾಕೂಟ, ಕುಸ್ತಿ, ಗಾಳಿಪಟ ಸ್ಪರ್ಧೆ, ಸೈಕಲ್ ಸ್ಪರ್ಧೆ ಮುಂತಾದ ವಿವಿಧ ಕಾರ್ಯಕ್ರಮಗಳ ಮೂಲಕ ಜನಮನಸೂರೆಗೊಂಡಿತು.
ಬನ್ನಿಮಂಟಪದಲ್ಲಿ ಸಂಜೆ 6.30ಕ್ಕೆ ಕವಾಯತು  ಅಶ್ವಾರೋಹಿದಳ, ಟೆಂಟ್ ಪೆಗ್ಗಿಂಗ್, ಮೋಟರ್ ಸೈಕಲ್ ಚಮತ್ಕಾರ, ಲೇಸರ್ ಷೋ, ಪಂಜಿನ ಕವಾಯತು ನಡೆಯಿತು. ರಾಜ್ಯಪಾಲ ಎಚ್ ಭಾರದ್ವಾಜ್ ಅವರು ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರು.
ಮುಖ್ಯಮಂತ್ರಿ, ಸಚಿವರುಗಳು, ಶಾಸಕರು ಸೇರಿದಂತೆ ಲಕ್ಷಾಂತರ ಮಂದಿ ಹಬ್ಬದ ಸಡಗರದಲ್ಲಿ ಪಾಲ್ಗೊಂಡು ರಸನಿಮಿಷಗಳನ್ನು ಸವಿದರು. ಬಲರಾಮನ ಸಾರಥ್ಯದಲ್ಲಿ ನಡೆದ ಜಂಬೂ ಸವಾರಿ, ನಾಡಿನ ಚೆಲುವನ್ನು ಬಿಂಬಿಸುವ ಸ್ತಬ್ದಚಿತ್ರಗಳು ಮತ್ತು ಕಲಾವಿದರ ಕಲೆಯ ಕರಾಮತ್ತುಗಳನ್ನು ಕಣ್ಣುಗಳಲ್ಲಿ ತುಂಬಿಕೊಂಡರು.
ದರ್ಬಾರ್ ನಡೆಸಿ ರಾಜನ ಪೋಷಾಕಿನಲ್ಲಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಜವಾದ ರಾಜನಂತೆ ಕಂಗೊಳಿಸುತ್ತಿ ದ್ದರು. ಇಡೀ ಸಾಂಸ್ಕೃತಿಕ ನಗರಿ ಮೈಸೂರು ಹಬ್ಬದ ಸಡಗರದಿಂದ ವಿಶೇಷವಾಗಿ ಕಾಣುತ್ತಿತ್ತು.
ವಿಜಯದಶಮಿಯಂದು ಬೆಳಿಗ್ಗೆ ಸಾಂಪ್ರದಾಯಿಕ ವಜ್ರಮುಷ್ಠಿ ಕಾಳಗ ನಡೆಯಿತು. ಐತಿಹಾಸಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟು ಕೊಂಡು ನಡೆಯುವ ಸ್ಪರ್ಧಾರಹಿತ ಕಾಳಗದಲ್ಲಿ ನಾಲ್ವರು ಜಗಜಟ್ಟಿಗಳು ಕಾಳಗ ನಡೆಸಿದರು.
ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವಂತೆ ಜರಗುವ ಈ ಕಾಳಗದಲ್ಲಿ ಜಟ್ಟಿಯ ರಕ್ತ ಚಿಮ್ಮಿ ನೆಲಕ್ಕೆ ಮುಟ್ಟಬೇಕೆನ್ನುವುದು ಸಂಪ್ರದಾಯ. ಜಟ್ಟಿಗಳ ಮೈಯಲ್ಲಿ ರಕ್ತ ಚಿಮ್ಮಿದ ನಂತರ ವಜ್ರಮುಷ್ಠಿ ಕಾಳಗವನ್ನು ಸಮಾಪ್ತಿಗೊಳಿಸಲಾಯಿತು. ಇಲ್ಲಿ ಬಹುಮಾನವಿರದೆ, ಕೇವಲ ಸ್ವಾಮಿ ನಿಷ್ಠೆಯ ರೂಢಿಯನ್ನು ಪ್ರದರ್ಶಿಸುವುದಕ್ಕೋಸ್ಕರ ಕಾಳಗವನ್ನು ಏರ್ಪಡಿಸಲಾಗುತ್ತದೆ.
ಮೈಸೂರು ದಸರಾಕ್ಕೆ ವಿಶ್ವದಾದ್ಯಂತದ ಸಾವಿರಾರು ಪ್ರವಾಸಿಗರು ಆಗಮಿಸಿದ್ದು, ಭಾರೀ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಅರಮನೆ ಆವರಣದಿಂದ ಬನ್ನಿ ಮಂಟಪದವರೆಗಿನ ಸುಮಾರು ಐದು ಕಿಲೋ ಮೀಟರ್ ಉದ್ದಕ್ಕೂ ಪೊಲೀಸ್ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿತ್ತು.
ಯಾವುದೇ ಅನಾಹುತಗಳು ನಡೆಯಬಾರದು ಎಂಬ ನಿಟ್ಟಿನಲ್ಲಿ ಪಕ್ಕದ ಜಿಲ್ಲೆಗಳಿಂದಲೂ ಪೊಲೀಸ್ ಪಡೆಗಳನ್ನು ಕರೆಸಿಕೊಳ್ಳ ಲಾಗಿದ್ದು, 4,000ಕ್ಕೂ ಹೆಚ್ಚು ಪೊಲೀಸರು ಭದ್ರತೆ ಒದಗಿಸಿದರು. ಹತ್ತಾರು ಅಂಬುಲೆನ್ಸ್‌ಗಳೂ ತುರ್ತು ಸೇವೆಗಳಿಗಾಗಿ ಸಿದ್ಧವಾಗಿದ್ದವು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English