ಮಂಗಳೂರು : ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಡಾ| ಎಂ. ವೀರಪ್ಪ ಮೊಲಿ ಹಾಗು ಮಾನ್ಯ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರವರು ಮಾರ್ಚ್18 ಸೋಮವಾರ ಸುದೀರ್ಘ ಇತಿಹಾಸವಿರುವ ಲೇಡಿಗೋಶನ್ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಡಾ| ಎಂ. ವೀರಪ್ಪ ಮೊಲಿ ಮಾತನಾಡಿ, 162 ವರ್ಷಗಳ ಸುಧೀರ್ಘ ಇತಿಹಾಸವಿರುವ ಲೇಡಿಗೋಶನ್ ಆಸ್ಪತ್ರೆ ಯ ನೂತನ ಕಟ್ಟಡ ನಿರ್ಮಾಣ ದಿಂದಾಗಿ ಮಹಿಳೆಯರು ಮತ್ತು ಮಕ್ಕಳ ಬದುಕಿನಲ್ಲಿ ಹೊಸ ಮನ್ವಂತರ ಸೃಷ್ಟಿಯಾಗಲಿದೆ. ನೂರಾರು ವರ್ಷ ಇತಿಹಾಸವಿರುವ ಲೇಡಿಗೋಶನ್ ಆಸ್ಪತ್ರೆಯು 21 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು, ನಿರ್ಮಾಣದ ಹೊಣೆ ಹೊತ್ತಿರುವ ಎಂ.ಆರ್.ಪಿ.ಎಲ್. ಆಸ್ಪತ್ರೆಗೆ ಅಗತ್ಯವಿರುವ ಆಧುನಿಕ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದ್ದು, ಈ ಕಟ್ಟಡದ ಕಾಮಗಾರಿಯು ಅತೀ ವೇಗದಿಂದ ಆರಂಭಗೊಂಡು ಅಷ್ಟೇ ವೇಗದಿಂದ ಕೇವಲ 18 ತಿಂಗಳುಗಳಲ್ಲಿ ಸಂಪೂರ್ಣವಾಗಲಿದೆ ಎಂದವರು ಹೇಳಿದರು.
ಮಾನ್ಯ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ರಾಜ್ಯ ಸರ್ಕಾರವು ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಲೇಡಿಗೋಶನ್ ಆಸ್ಪತ್ರೆಗೆ ನೂತನ ಕಟ್ಟಡದ ಭಾಗ್ಯ ಇದೀಗ ಎಂಆರ್‌ಪಿಎಲ್‌ನಿಂದ ದೊರಕಿದ್ದು ಆಸ್ಪತ್ರೆಯನ್ನು ಇನ್ನಷ್ಟು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮಕೈಗೊಳ್ಳಲಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಎಸ್ಇಝಡ್ ತ್ಯಾಜ್ಯ ಶುದ್ದೀಕರಣದ 3ನೇ ಘಟಕವನ್ನು ಉದ್ಘಾಟಿಸಿದರು. ಮಂಗಳೂರು ಮಿನಿ ವಿಧಾನಸೌದದ ಒಂದನೇ ಹಾಗೂ ಎರಡನೇ ಹಂತದ ಕಾಮಗಾರಿಗಳ ಉದ್ಘಾಟನೆಯನ್ನು ಹಾಗೂ 3ನೇ ಹಂತದ ಕಾಮಗಾರಿಗೆ ಚಾಲನೆಯನ್ನು ನೀಡಿದರು. ಆ ನಂತರ ಜಿಲ್ಲಾಸ್ಪತ್ರೆ ವೆನ್ಲಾಕ್ ನ ವಿವಿಧ ಯೋಜನೆಗಳ ಕಟ್ಟಡಕ್ಕೆ ಶಿಲಾನ್ಯಾಸ ಹಾಗೂ ವಾಜಪೇಯಿ ಆರೋಗ್ಯಶ್ರೀ ಯೋಜನೆಗೆ ಜಿಲ್ಲೆಯಲ್ಲಿ ಚಾಲನೆ ನೀಡಿದರು.
ವಿಧಾನಸಭಾ ಉಪಸಭಾಪತಿ ಎನ್. ಯೋಗೀಶ್ ಭಟ್, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಎಂ.ಆರ್.ಪಿ.ಎಲ್.ನ ಆಡಳಿತ ನಿರ್ದೇಶಕ ಪಿ.ಪಿ. ಉಪಾಧ್ಯ, ರಾಜ್ಯ ಉನ್ನತ ಶಿಕ್ಷಣ ಸಚಿವ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ, ಸಂಸದರಾದ ನಳಿನ್ ಕುಮಾರ್ ಕಟೀಲು, ಜಯಪ್ರಕಾಶ್ ಹೆಗ್ಡೆ, ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ. ಕೊರಗಪ್ಪ ನಾಯ್ಕ, ಶಾಸಕರಾದ ಕೆ. ಅಭಯಚಂದ್ರ ಜೈನ್, ಜೆ. ಕೃಷ್ಣ ಪಾಲೆಮಾರ್, ಯು.ಟಿ. ಖಾದರ್, ಬಿ. ರಮಾನಾಥ ರೈ, ವಿಧಾನಪರಿಷತ್ ಸದಸ್ಯರಾದ ಕ್ಯಾ| ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ರಮೇಶ್, ದ.ಕ. ಜಿಲ್ಲಾಧಿಕಾರಿ ಎನ್. ಪ್ರಕಾಶ್, ಐಜಿಪಿ ಪ್ರತಾಪ್ ರೆಡ್ಡಿ, ಪೊಲೀಸ್ ವರಿಷ್ಠಾಧಿಕಾರಿ ಮನೀಷ್ ಕರ್ಬೀಕರ್, ಮಂಗಳೂರು ಪಾಲಿಕೆ ಆಯುಕ್ತ ಡಾ| ಹರೀಶ್ ಕುಮಾರ್, ಎಸ್‌ಇಝಡ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ರಾಮಚಂದ್ರ ಭಂಡಾರ್ಕರ್, ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ಶಕುಂತಳಾ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English