ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಂಗಳೂರು ಹಾಗೂ ಜಿಲ್ಲಾ ಚೈಲ್ಡ್ ಲೇಬರ್ ಪ್ರಾಜೆಕ್ಟ್ ಸೊಸೈಟಿ, ಕಾರ್ಮಿಕ ಇಲಾಖೆ ಇವುಗಳ ಆಶ್ರಯದಲ್ಲಿ ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯಿದೆ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲೆಯಾದ್ಯಂತ ಚಲಿಸುವ ಜನಜಾಗೃತಿ ರಥಕ್ಕೆ ಬುಧವಾರ ಜಿಲ್ಲಾಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಎನ್. ಪ್ರಕಾಶ್ ಚಾಲನೆ ನೀಡಿದರು.
ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಅನ್ವಯ 14 ವರ್ಷದೊಳಗಿನ ಮಕ್ಕಳನ್ನು ದುಡಿಸುವುದು ಅಪರಾಧ. ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ಮಾಲೀಕರಿಗೆ 10,000 ರಿಂದ 20,000 ರೂ.ವರೆಗೆ ದಂಡ ಹಾಗೂ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು. ಈ ಬಗ್ಗೆ ಜಾಗೃತಿ ಮೂಡಿಸಲು ಜನಜಾಗೃತಿ ರಥವು ಮಾರ್ಚ್ 21ರಂದು ಮೂಡುಬಿದಿರೆ ಗ್ರಾಮಾಂತರ, 22, 23ರಂದು ಬಂಟ್ವಾಳ, 24, 25ರಂದು ಪುತ್ತೂರು, 26, 27ರಂದು ಸುಳ್ಯ ಹಾಗೂ 28, 29ರಂದು ಬೆಳ್ತಂಗಡಿ ತಾಲೂಕಿನಲ್ಲಿ ಸಂಚರಿಸಲಿದ್ದು, ಶಿಕ್ಷಣ ಮಕ್ಕಳ ಜನ್ಮ ಸಿದ್ಧ ಹಕ್ಕು, ಬಾಲ ಕಾರ್ಮಿಕ ಪದ್ಧತಿ ಅಳಿಯಲಿ, ಮಕ್ಕಳ ದುಡಿತ ಭವಿಷ್ಯಕ್ಕೆ ಚ್ಯುತಿ, ಕೆಲಸ ಸಾಕು ಶಿಕ್ಷಣ ಬೇಕು, ಶಿಕ್ಷಣವಿಲ್ಲದ ಬಾಳು ಅಂಧಕಾರದ ಗೋಳು ಎಂಬ ಧ್ಯೇಯ ವಾಕ್ಯಗಳೊಂದಿಗೆ ಜಿಲ್ಲೆಯಾದ್ಯಂತ 10 ದಿನಗಳ ಕಾಲ ಸಂಚರಿಸಲಿದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್, ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಡಾ. ಹರೀಶ್ ಕುಮಾರ್, ಅಪರ ಜಿಲ್ಲಾಧಿಕಾರಿ ದಯಾನಂದ್.ಕೆ.ಎ., ಕಾರ್ಮಿಕ ಆಯುಕ್ತ ಡಾ. ಬಾಲಕಷ್ಣ, ಕಾರ್ಮಿಕ ಅಧಿಕಾರಿಗಳಾದ ಆನಂದಮೂರ್ತಿ, ಕುಮಾರ್ ಜ್ಞಾನೇಶ್, ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಶ್ರೀನಿವಾಸ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English