ಮಂಗಳೂರು : ಪೊಲೀಸರೇ ಪಾಸ್ ಪೋರ್ಟ್ ಅರ್ಜಿದಾರರ ಮನೆಗೆ ಭೇಟಿ ನೀಡಿ, ಅರ್ಜಿದಾರನ ಪೂರ್ವಾಪರತೆಯ ಬಗ್ಗೆ ತಿಳಿದುಕೊಂಡು ನಂತರ ಸಂಬಂಧಪಟ್ಟ ಇಲಾಖೆಗೆ ವರದಿ ಸಲ್ಲಿಸುವ ನಿಯಮ ಹಿಂದಿನಿಂದಲೂ ಜಾರಿಯಲ್ಲಿದೆ. ಆದರೆ ಇತ್ತೀಚೆಗೆ ಪಾಸ್‌ಪೋರ್ಟ್ ಅರ್ಜಿದಾರರು ವಾಸದ ಮನೆ ಎದುರು ನಿಂತು ಪೊಟೊ ತೆಗೆಯಬೇಕು, ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದಾಗ ಸಹಿ ಹಾಕಿದ ಸಾಕ್ಷಿದಾರರೇ ಪೊಲೀಸ್ ವಿಚಾರಣೆಯ ಸಂದರ್ಭದಲ್ಲೂ ಠಾಣೆಗೆ ಹಾಜರಾಗಬೇಕು ಎಂಬ ಕೆಲವು ಹೊಸ ಕ್ರಮಗಳನ್ನು ಪೊಲೀಸರು ಪ್ರಾರಂಭಿಸಿದ್ದಾರೆ ಇದರಿಂದ ಪಾಸ್ ಪೋರ್ಟ್ ಗೆ ಅರ್ಜಿ ದಾರರು ಅನಗತ್ಯ ಕಿರುಕುಳ ಅನುಭವಿಸುವಂತಾಗಿದೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಆರೋಪಿಸಿದರು.
ಅವರು ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪೊಲೀಸರೇ ಪಾಸ್ ಪೋರ್ಟ್ ಅರ್ಜಿದಾರರ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಬೇಕಿರುವುದು ನಿಯಮ ಆದರೆ ಈ ಹೊಸ ನಿಯಮಗಲಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಪಾಸ್‌ಪೋರ್ಟ್ ಕಚೇರಿಯ ಅಧಿಕಾರಿಗಳ ಬಳಿ ವಿಚಾರಿಸಿದಾಗ ಇಂತಹ ಯಾವುದೇ ನಿಯಮ ನಿರ್ದೇಶನ ಇಲ್ಲದಿರುವ ಬಗ್ಗೆ ಅವರು ತಿಳಿಸಿದ್ದಾರೆ.
ಆದ್ದರಿಂದ ಪಾಸ್‌ಪೋರ್ಟ್ ಅರ್ಜಿದಾರರಿಗೆ ಅನಗತ್ಯ ಕಿರುಕುಳ ನೀಡುವುದನ್ನು ಈ ಕೂಡಲೇ ಪೊಲೀಸರು ನಿಲ್ಲಿಸಬೇಕು. ಈ ಕುರಿತು ಪೊಲೀಸ್ ಕಮೀಷನರ್ ಹಾಗೂ ಬೆಂಗಳೂರಿನ ಪಾಸ್ ಪೋರ್ಟ್ ಕಚೇರಿಗೆ ದೂರು ನೀಡಲಾಗಿದೆ ಎಂದು ಖಾದರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಎನ್.ಎಸ್.ಕರೀಂ, ತಾಲೂಕು ಪಂಚಾಯತ್ ಸದಸ್ಯರಾದ ಮಹಮ್ಮದ್ ಮುಸ್ತಾಫ, ಕ್ಲಾರಾ ಕುವೆಲ್ಲೊ, ಕಾಂಗ್ರೆಸ್ ನಾಯಕರಾದ ಸುಧೀರ್ ಟಿ.ಕೆ., ಸಂತೋಷ್ ಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English