ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮಾಸಿಕ ಎಸ್‌ಸಿ/ಎಸ್‌ಟಿ ಸಭೆ

4:05 PM, Monday, July 25th, 2011
Share
1 Star2 Stars3 Stars4 Stars5 Stars
(No Ratings Yet)
Loading...
 SC ST Meetingಮಂಗಳೂರು : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮಾಸಿಕ ಎಸ್‌ಸಿ/ಎಸ್‌ಟಿ ಸಭೆಯು, ಪೊಲೀಸ್ ಕಮಿಷನರೇಟ್ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧೀಕ್ಷಕ ಸರ್ವೋತ್ತಮ ಪೈ ಅವರು ದಲಿತ ದೌರ್ಜನ್ಯ ಕಾಯ್ದೆಯಡಿ ದಾಖಲಾದ ದೂರುದಾರರು ಮತ್ತು ಸಾಕ್ಷಿದಾರರಿಗೆ ಮೀಸಲಿಟ್ಟ ಹಣ ಬಳಕೆಯಾಗದೆ ವ್ಯರ್ಥವಾಗಿದೆ, ದಲಿತ ದೌರ್ಜನ್ಯ ಕಾಯ್ದೆಯಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿ ಸಿದಂತೆ ನ್ಯಾಯಾಲಯಕ್ಕೆ ಹಾಜರಾಗುವ ಎಲ್ಲ ದೂರುದಾರರು ಮತ್ತು ಸಾಕ್ಷಿದಾರರಿಗೆ ಹಣವನ್ನು ಮೀಸಲಿಡಲಾಗಿದೆ. ತಹಶೀಲ್ದಾರರ್‌ಗೆ ಸೂಕ್ತ ದಾಖಲೆ ಪತ್ರ ಸಲ್ಲಿಸಿ ಆ ಹಣವನ್ನು ಪಡೆಯಬಹುದಾಗಿದೆ. ಆದರೆ, ಜಿಲ್ಲೆಯ ದಲಿತರು ಇದನ್ನು ಸದುಪಯೋಗಪಡಿಸುತ್ತಿಲ್ಲ. ಹಾಗಾಗಿ ಈ ಹಣ ಬಳಕೆಯಾಗದೆ ಸರಕಾರದ ಖಜಾನೆಗೆ ಮರಳಿ ಸೇರುತ್ತಿವೆ ಎಂದು ಪೈ ತಿಳಿಸಿದರು.

ಸಭೆಯಲ್ಲಿ ದಲಿತ ಸಂಘಟನೆಯ ವಿವಿಧ ಮುಖಂಡರು ಮಾತನಾಡಿ ದಲಿತರಿಗೆ ಆಗುವ ಅನ್ಯಾಯದ ಬಗ್ಗೆ ದ್ವನಿ ಎತ್ತಿದರು. ಪಾವೂರು ಗ್ರಾಮದ ಇನ್ನೋಳಿ ಸಮೀಪ ಮಿನಿ ಅಂಬೇಡ್ಕರ್ ಭವನವಿದೆ. ಆದರೆ, ಅದರ ಹೆಸರನ್ನು ಅಲ್ಲಿ ನಮೂದಿಸಿಲ್ಲ. ಅಲ್ಲದೆ ಅಲ್ಲಿ ಸರಕಾರಿ ಶಾಲೆಯ ತರಗತಿಗಳನ್ನು ನಡೆಸುವುದರಿಂದ ದಲಿತರ ಕಾರ್ಯಕ್ರಮ ನಡೆಸಲು ಅಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಜರಗಿಸಬೇಕು , ಸೂಟರ್‌ಪೇಟೆಯ ಕೃಷ್ಣಪ್ಪ ದೂರು ನೀಡಲು ಪಾಂಡೇಶ್ವರ ಠಾಣೆಗೆ ಹೋದಾಗ ಎಸ್ಸೈ ಭಾರತಿ ದೂರನ್ನು ಸ್ವೀಕರಿಸದೆ 300 ರೂ. ಹಣ ವಸೂಲಿ ಮಾಡಿದ್ದಾರೆ. ಆದರೆ, ಅದಕ್ಕೆ ರಶೀದಿ ನೀಡಿಲ್ಲ. ಅಲ್ಲದೆ, ಅವಾಚ್ಯ ಶಬ್ದದಿಂದ ಬೈದು ಲಾಕಪ್‌ಗೆ ತಳ್ಳುವುದಾಗಿ ಬೆದರಿ ಸಿದ್ದಾರೆ ಎಂದು ದಲಿತ ಸಂಘಟನೆಯ ಎಸ್.ಪಿ.ಆನಂದ ಆರೋಪಿಸಿದರು.

ಪಣಂಬೂರಿನಲ್ಲಿ ಲಾರಿ ಚಾಲಕ ಲಕ್ಷ್ಮಣ್‌ಗೆ ಅಲ್ಲಿ ಕರ್ತವ್ಯ ನಿರತ ಪೊಲೀಸರು ಹಲ್ಲೆ ನಡೆಸಿದ್ದಾರೆ. ದೂರು ಕೊಟ್ಟ ಕೆಲವು ದಿನದ ಬಳಿಕ ಪ್ರಕರಣವನ್ನು ರಾಜಿಯಲ್ಲಿ ಮುಕ್ತಾಯಗೊಳಿಸಲಾಗಿದೆ. ದೂರುದಾರರ ಗಮನಕ್ಕೆ ತಾರದೆ ಆ ಪ್ರಕರಣ ಹೇಗೆ ರಾಜಿಯಲ್ಲಿ ಮುಕ್ತಾಯಗೊಳಿಸಲಾಗಿದೆ ಎಂದು ದಲಿತ ಸಂಘಟನೆಯ ಪಿ. ಕೇಶವ ಪ್ರಶ್ನಿಸಿದರು.

ಜೂನ್.5ರಂದು ನಗರದ ಪುರ ಭವನದಲ್ಲಿ ಹಮ್ಮಿಕೊಂಡ ಜಿಲ್ಲಾ ಸಮಾವೇಶಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಆಮಂತ್ರಿಸಿದ್ದೆವು. ಸಭೆಗೆ ಹಾಜರಾಗುವ ಭರವಸೆಯೂ ಸಿಕ್ಕಿತ್ತು. ಆದರೆ, ನಾವು ಕಾದದ್ದೇ ಬಂತು. ಬರಲಿಕ್ಕೆ ಅಸಾಧ್ಯ ಎಂದಾದಲ್ಲಿ ಒಂದು ಮಾತನ್ನು ನಮಗೆ ತಿಳಿಸಬಹುದಿತ್ತು. ನಾವು ನಮ್ಮ ಸಭೆಯನ್ನು ಕ್ಲಪ್ತ ಸಮಯಕ್ಕೆ ಶುರುಮಾಡುತ್ತಿದ್ದೆವು ಎಂದು ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಕೃಷ್ಣ ಸೂಟರ್‌ಪೇಟೆ ಬೇಸರ ವ್ಯಕ್ತಪಡಿಸಿದರು.

ಆದಿ ದ್ರಾವಿಡರ ಮೇಲೆ ದಲಿತ ಎಂಬ ಶಬ್ದ ಬಳಕೆಗೆ ಹೇರಿಕೆ ಬೇಡ. ಅಲ್ಲದೆ, ಹರಿಜನ ಎಂಬ ಶಬ್ದದ ಬದಲು ಪರಿಶಿಷ್ಟ ಜಾತಿ ಎಂದು ಬಳಸಲು ಕ್ರಮ ಜರಗಿಸಬೇಕು ಎಂದು ಆದಿ ದ್ರಾವಿಡ ಸೇವಾ ಸಮಾಜದ ಸಂಘದ ರಾಮ್ ಕುಮಾರ್ ಪಿ. ಆಗ್ರಹಿಸಿದರು.

ಸಭೆಯಲ್ಲಿ ಡಿಸಿಪಿಗಳಾದ ಮುತ್ತೂರಾಯ ಮತ್ತು ಧರ್ಮಯ್ಯ, ಎಸಿಪಿಗಳಾದ ರವೀಂದ್ರ ಗಡದಿ, ಪುಟ್ಟಮಾದಯ್ಯ, ಇನ್ಸ್‌ಪೆಕ್ಟರ್‌ಗಳಾದ ತಿಲಕಚಂದ್ರ, ಬೆಳ್ಳಿಯಪ್ಪ, ವೆಲೆಂಟಿನ್ ಡಿಸೋಜ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English