ಮಂಗಳೂರು ವಿವಿ: ಬೋಧಕರ ಪುನಶ್ಚೇತನಾ ಕಾರ್ಯಾಗಾರ ಮುಕ್ತಾಯ

8:14 PM, Wednesday, March 6th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಗಣಕ ವಿಜ್ಞಾನ ವಿಭಾಗದಲ್ಲಿ, ಎ.ಐ.ಸಿ.ಟಿ.ಇ. – ಎ.ಟಿ.ಎ.ಎಲ್ ಸಹಯೋಗದೊಂದಿಗೆ ಆಯೋಜಿಸಲಾದ, ಒಂದು ವಾರದ “ಎಲಿವೇಟಿಂಗ್ ಹೆಲ್ತ್ ಕೇರ್ ಥ್ರೂ ಡೀಪ್ ಲರ್ನಿಂಗ್ : ಇನ್ನೋವೇಶನ್ಸ್ ಇನ್ ಮೆಡಿಕಲ್ ಇಮೇಜ್ ಪ್ರೊಸೆಸಿಂಗ್” ಎಂಬ ಬೋಧಕರ ಪುನಶ್ಚಾತನ ಕಾರ್ಯಾಗಾರದ ಸಮಾರೋಪ ಸಮಾರಂಭ ಐ.ಬಿ.ಎಂ. ಸೆಂಟರ್ ಆಫ್ ಎಕ್ಸಲೆನ್ಸ್ ಹಾಲ್ ನಲ್ಲಿ ಇತ್ತೀಚೆಗೆ ನಡೆಯಿತು.

ಮುಖ್ಯ ಅತಿಥಿ, ಸಂಪನ್ಮೂಲ ವ್ಯಕ್ತಿ ಡಾ. ದಿನೇಶ್ ಆರ್ (ಸ್ಯಾಮ್ ಸಂಗ್, ಬೆಂಗಳೂರು) ಮಾತನಾಡಿ, ಕೃತಕ ಬುದ್ದಿಮತ್ತೆ ಹಾಗೂ ಯಂತ್ರಕಲಿಕೆ ಕುರಿತ ಆಳವಾದ ಸಂಶೋಧನೆ ಹೇಗೆ ವೈದ್ಯಕೀಯ ಕ್ಷೇತ್ರದಲ್ಲಿ, ಜನರ ಬದುಕಲ್ಲಿ ಸುಧಾರಣೆ ತಂದಿದೆ ಎಂಬುದನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಗಣಕ ವಿಜ್ಞಾನ ವಿಭಾಗದ ಅಧ್ಯಕ್ಷ ಪ್ರೊ.ಮಂಜಯ್ಯ ಡಿ.ಎಚ್. ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಆಧುನಿಕ ಸಂಶೋಧನೆಗೆ ಲಭ್ಯವಿರುವ ತಂತ್ರಜ್ಞಾನಗಳು ಮತ್ತು ಅವು ಎದುರಿಸುತ್ತಿರುವ ನೈತಿಕ ಸವಾಲುಗಳ ಬಗ್ಗೆ ತಿಳಿಸಿಕೊಟ್ಟರು.

ಕಾರ್ಯಾಗಾರದ ಆಯೋಜಕ ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಬಿ.ಎಚ್ ಶೇಖರ್ ಆರು ದಿನಗಳ ಕಾರ್ಯಗಾರದ ವರದಿ ಮಂಡಿಸಿ, ಉತ್ತಮ ಗುಣಮಟ್ಟದ ಹಾಗೂ ಸಮಾಜಮುಖಿ ಸಂಶೋಧನೆ ಮಾಡುವಂತೆ ಸಂಶೋಧನಾರ್ಥಿಗಳನ್ನು ಪ್ರೋತ್ಸಾಹಿಸಿದರು. ಒಂದು ವಾರದ ಬೋಧಕರ ಪುನಶ್ಚೇತನಾ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ನೆರೆರಾಜ್ಯಗಳ ಪ್ರತಿಷ್ಠಿತ ಕಾಲೇಜುಗಳಿಂದ ಸುಮಾರು 40 ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರಸಿದ್ಧ ವಿಶ್ವವಿದ್ಯಾನಿಲಯಗಳು, ಐಐಟಿ, ಎನ್‌ಐಟಿ, ಸಾಫ್ಟ್ ವೇರ್ ಕಂಪನಿಗಳು ಮತ್ತು ವೈದ್ಯಕೀಯ ಕಾಲೇಜುಗಳ ಸಂಪನ್ಮೂಲ ವ್ಯಕ್ತಿಗಳ ಉಪನ್ಯಾಸದ ಜೊತೆಗೆ ಪ್ರಾಯೋಗಿಕ ತರಗತಿಗಳು ಹಾಗೂ ಉದ್ಯಮ ಭೇಟಿಯನ್ನು ಆಯೋಜಿಸಲಾಗಿತ್ತು. ಇಲ್ಲಿ ದೊರೆತ ಜ್ಞಾನ ಹಾಗೂ ಅನುಭವ ನಮಗೆ ಮುಂದಿನ ಸಂಶೋಧನೆಗೆ ದಾರಿ ದೀಪವಾಗಲಿದೆ ಎಂದು ಸಂಶೋಧನಾರ್ಥಿಗಳು ಅಭಿಪ್ರಾಯಪಟ್ಟರು.

ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಪ್ರೊ. ಎಚ್. ಎಲ್. ಶಶಿರೇಖಾ ಸ್ವಾಗತಿಸಿದರು. ವಿಭಾಗದ ಸಂಶೋಧನಾ ವಿದ್ಯಾರ್ಥಿ ಶ್ರೀಮತಿ ಶಾಜಿಯಾ ವಂದಿಸಿದರು. ವಿಶ್ವವಿದ್ಯಾನಿಲಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ಪಿಲಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪಿ.ಎ ಇಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲೆ ಡಾ.ಶರ್ಮಿಳಾ ಕುಮಾರಿ ಮೊದಲಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English