ಮತದಾರ ಬದಲಾಗುತ್ತಿದ್ದಾನೆ ಪಕ್ಷಗಳು ಎಚ್ಚರವಾಗಬೇಕಿದೆ

3:33 PM, Monday, March 25th, 2013
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶಗಳನ್ನು ನೋಡಿದರೆ ಮತದಾರ ಬದಲಾವಣೆಯನ್ನು ಬಯಸಿರುವುದು ಸ್ಪಷ್ಟವಾಗಿ ಎದ್ದುಕಾಣುತ್ತದೆ. ನಿರೀಕ್ಷೆಯಂತೆಯೇ ಆಡಳಿತರೂಢ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ನತ್ತ ಮತದಾರ ಒಲವು ತೋರಿದ್ದಾನೆ. ಹಣದ ಹೊಳೆಯೇ ಹರಿದರೂ ಮತದಾರ ಕೆಲವು ಕಡೆಯಾದರೂ ಅದರಿಂದ ಪ್ರಭಾವಿತನಾದಂತೆ ಕಾಣುತ್ತಿಲ್ಲ. ಹಲವು ಸ್ಥಳೀಯ ಸಂಸ್ಥೆಗಳ ಆಡಳಿತದಿಂದ ಬಿಜೆಪಿಯನ್ನು ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾನೆ.

ಸಂಘ ಪರಿವಾರದವರು ಅಟ್ಟಹಾಸದಿಂದ ಮೆರೆದ ದಕ್ಷಿಣ ಕನ್ನಡದಲ್ಲಿ ಜನರು ಬಿಜೆಪಿಯನ್ನು ಮಣ್ಣು ಮುಕ್ಕಿಸಿದ್ದಾರೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್  ಅವರ ಕ್ಷೇತ್ರದಲ್ಲಿಯೇ ಪಕ್ಷ ಮುಖಭಂಗ ಅನುಭವಿಸಿದೆ. ಬಿಜೆಪಿ ನಾಯಕರ ನಡುವಣ ಒಳಜಗಳ, ಮಿತಿಮೀರಿದ ಭ್ರಷ್ಟಾಚಾರ, ದುರಾಡಳಿತದಿಂದ ಮತದಾರ ಬೇಸತ್ತು ಅವರ ಪಕ್ಷದ ವಿರುದ್ಧವಾಗಿ ಮತ ನೀಡಿದಂತೆ ಕಾಣುತ್ತದೆ. ಬಿಜೆಪಿಯ ಹಾಲಿ ಶಾಸಕರ ಬಲ ಛಿದ್ರಗೊಂಡಿದೆ. ಅಷ್ಟೇ ಅಲ್ಲ ಬಿಜೆಪಿ ತೊರೆದು ಪ್ರತ್ಯೇಕ ಪಕ್ಷ ಕಟ್ಟಿಕೊಂಡ ರೆಡ್ಡಿ-ಶ್ರೀರಾಮುಲು ಅವರ ಭದ್ರಕೋಟೆಯಿಂದ ಬಳ್ಳಾರಿ ಬಿಡುಗಡೆ ಪಡೆದಿದೆ. ಕಾಂಗ್ರೆಸ್ ಪಕ್ಷ ಮತ್ತೆ ಅಲ್ಲಿ ಜೀವ ಪಡೆದಿದೆ.

ಬಿಜೆಪಿಯಿಂದ ಹೊರ ಹೋಗಿ ಪ್ರತ್ಯೇಕ ಪಕ್ಷ ರೂಪಿಸಿ ಅಧಿಕಾರದ ಕನಸು ಕಾಣುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಗೆಗೂ ಮತದಾರ ಹೇಳಿಕೊಳ್ಳುವಷ್ಟು ಒಲವು ತೋರಿಸಿಲ್ಲ. ನಿರೀಕ್ಷೆಯಂತೆಯೇ ಬಿ.ಎಸ್.ಯಡಿಯೂರಪ್ಪ ಮತ್ತು ಶ್ರೀರಾಮುಲು ಅವರು ಪ್ರತ್ಯೇಕ ಪಕ್ಷಗಳನ್ನು ರಚಿಸಿಕೊಂಡಿದ್ದರಿಂದಾಗಿ ಬಿಜೆಪಿ ಸಾಕಷ್ಟು ಸ್ಥಾನಗಳನ್ನು ಕಳೆದುಕೊಂಡಿದೆ. ಜೆಡಿಎಸ್ ತನ್ನ್ನ ಮೂಲ ಕ್ಷೇತ್ರಗಳಲ್ಲಿ ನೆಲೆ ಕುಸಿಯುತ್ತಿದ್ದರೂ ಉತ್ತರ ಕರ್ನಾಟಕ ಮತ್ತಿತರ ಕಡೆ ಹೊಸದಾಗಿ ನೆಲೆ ಸ್ಥಾಪಿಸಿಕೊಂಡಿದೆ. ಕಾಂಗ್ರೆಸ್ ಒಟ್ಟಾರೆಯಾಗಿ ತನ್ನ ಬಲ ವೃದ್ಧಿಸಿಕೊಂಡಿದ್ದರೂ ಆ ಪಕ್ಷಗಳ ಪ್ರಮುಖ ನಾಯಕರ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿರುವುದು ವಿಪರ್ಯಾಸ. ಆದರೆ ಕಾಂಗ್ರೆಸ್ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಂಡಿರುವುದು ಮಹತ್ವದ ಬೆಳವಣಿಗೆ.

ಸ್ಥಳೀಯಸಂಸ್ಥೆಗಳ ಮತದಾರರು ಮೂಲಭೂತವಾಗಿ ನಗರ ಮತ್ತು ಅರೆ ನಗರಪ್ರದೇಶಗಳಿಗೆ ಸೇರಿದ ವಿದ್ಯಾವಂತರು. ಅವರ ಆಯ್ಕೆ, ಆದ್ಯತೆ ಭಿನ್ನವಾಗಿರುತ್ತದೆ. ಸ್ಥಳೀಯ ವಿಷಯ ಮತ್ತು ಸ್ಪರ್ಧೆ ಯ ವರ್ಚಸ್ಸೇ ಮುಖ್ಯವಾಗುತ್ತದೆ. ಅಷ್ಟಕ್ಕೂ ರಾಜ್ಯದ ಒಟ್ಟು ಮತದಾರರಲ್ಲಿ ಈಗ ನಡೆದ ಸ್ಥಳೀಯ ಸಂಸ್ಥೆಗಳ ಮತದಾರರ ಸಂಖ್ಯೆ ಶೇ. 30 ಮಾತ್ರ. ಹೀಗಾಗಿ ಈ ಚುನಾವಣೆಗಳ ಫಲಿತಾಂಶಗಳನ್ನು ಮುಂದಿನ ವಿಧಾನ ಸಭೆ ಚುನಾವಣೆಗೆ ದಿಕ್ಸೂಚಿಯೆಂದು ಪರಿಗಣಿಸಬಾರದು ಎಂದು ಈ ಮೊದಲು ಬಹುಪಾಲು ರಾಜಕೀಯ ಪಕ್ಷಗಳ ನಾಯಕರು ವಾದಮಾಡುತ್ತಿದ್ದರು. ಆದರೆ ಈಗ ಹೆಚ್ಚು ಸ್ಥಾನ ಗಳಿಸಿದ ಕಾಂಗ್ರೆಸ್ ಗೆ ಈ ಫಲಿತಾಂಶ ದಿಕ್ಸೂಚಿಯಂತೆ ಕಾಣಿಸುತ್ತಿದೆ. ಆದರೆ ಸ್ಥಾನಗಳನ್ನು ಕಳೆದುಕೊಂಡ ಬಿಜೆಪಿಗೆ ಅದು ದಿಕ್ಸೂಚಿಯಲ್ಲ . ಇಂಥ ಪ್ರತಿಕ್ರಿಯೆ ಸಹಜವಾದುದೇ ಆಗಿದೆ. ಆದರೆ ವಾಸ್ತವವಾಗಿ ಮತದಾರನ ಹಿಂದೆ ಕೆಲಸ ಮಾಡಿರುವ ಆಡಳಿತ ವಿರೋಧೀ ಮನೋಭಾವ ನೋಡಿದರೆ ಈ ಫಲಿತಾಂಶಗಳು ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎನ್ನಿಸದಿರದು. ಇದೇನೇ ಇದ್ದರೂ ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇಂಥ ಕಡೆ ಅಧಿಕಾರ ಹಿಡಿಯಲು ರಾಜಕೀಯ ಪಕ್ಷಗಳು ಸಹಜವಾಗಿಯೇ ನಾನಾ ತಂತ್ರಗಳನ್ನು ಮಾಡುತ್ತವೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹಣ, ಜಾತಿ, ತೋಳ್ ಬಲದ ರಾಜಕೀಯವನ್ನು ಮತದಾರರು ತಿರಸ್ಕರಿಸುವ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರಾಜಕಾರಣಿಗಳು ಪಾಠ ಕಲಿತು ಇನ್ನಾದರೂ ಸರಿಯಾದ ದಾರಿಯನ್ನು ತುಳಿಯುವುದು ಒಳ್ಳೆಯದು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English