ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯ ಸಂಪೂರ್ಣ ವಿವರ

5:20 PM, Monday, March 25th, 2013
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ 7 ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಸುಳ್ಯ ಹೊರತುಪಡಿಸಿ ಉಳಿದೆಡೆ ಬಿಜೆಪಿ ಧೂಳೀಪಟವಾಗಿದೆ. ಜೆಡಿಎಸ್, ಸಿಪಿಎಂ, ಎಸ್ ಡಿಪಿಐ ಖಾತೆ ತೆರೆದಿದ್ದರೆ ಹೊಸ ಪಕ್ಷಗಳಾದ ಕೆಜೆಪಿ, ಡಬ್ಲುಪಿಐ, ಬಿಎಸ್ಆರ್ ಹಳೆ ಪಕ್ಷಗಳಾದ ಜೆಡಿಯು, ಸಿಪಿಐ, ಐಎಂಎಲ್ ಖಾತೆ ತೆರೆಯುವಲ್ಲಿ ವಿಫಲವಾಗಿದೆ.

ಜಿಲ್ಲೆಯ 189 ಸ್ಥಾನಗಳ ಪೈಕಿ ಕಾಂಗ್ರೆಸ್ 108, ಬಿಜೆಪಿ 63, ಜೆಡಿಎಸ್ 6, ಎಸ್ ಡಿಪಿಐ 5, ಸಿಪಿಎಂ 2 ಹಾಗು ಪಕ್ಷೇತರರು 4 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ.

ರಾಜ್ಯ ಬಿಜೆಪಿ ಸರಕಾರದ ದುರಾಡಳಿತ, ಭ್ರಷ್ಟಾಚಾರ, ಹಗರಣಗಳ ಸರಮಾಲೆ, ಆಂತರಿಕ ಕಚ್ಚಾಟ, ಸ್ವಜನ ಪಕ್ಷಪಾತದ ಛಾಯೆ ದಕ್ಷಿಣ ಕನ್ನಡ ಜಿಲ್ಲೆಯ ಮತದಾರರ ಮೇಲೆ ಪ್ರಭವ ಬೀರಿರುವುದು ವಿಶೇಷ. ಕಾಂಗ್ರೆಸ್ ಹೆಚ್ಚಿನ ಎಲ್ಲಾ ಕಡೆ ಹೊಸ ಮುಖಗಳನ್ನು ಪರಿಚಯಿಸಿರುವುದು ಪಕ್ಷಕ್ಕೆ ಲಾಭವನ್ನು ತಂದು ಕೊಟ್ಟಿದೆ. ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ಜನರು ಬದಲಾವಣೆಯನ್ನು ಬಯಸಿರುವುದು ಫಲಿತಾಂಶ ಸಾಕ್ಷಿಯಾಗಿದೆ.

ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರಿಗೆ ಈ ಚುನಾವಣೆ ಸವಾಲಾಗಿತ್ತು. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲವು ಸಾಧಿಸಿರುವುದು ಪೂಜಾರಿಯ ಹುಮ್ಮಸ್ಸು ಹೆಚ್ಚಿಸಿದ್ದರೆ, ತವರು ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಾಗಿರುವುದು ಸದಾನಂದ ಗೌಡರ ವರ್ಛಸ್ಸಿಗೆ ಹೊಡೆತ ಬಿದ್ದಂತಾಗಿದೆ.

ಈ ಹಿಂದೆ ಬಿಜೆಪಿ ಜನರ ಭಾವನೆಯನ್ನು ಕೆರಳಿಸಿ ಅಧಿಕಾರದ ರುಚಿ ಕಂಡಿದೆ ಎಂಬ ಆರೋಪವಿತ್ತು. ಇದೀಗ ಅದರ ದುರಾಡಳಿತ ಶಾಪವಾಗಿ ಪರಿಣಮಿಸಿದೆ ಎಂಬ ಮಾತು ಕೇಳಿ ಬರುತ್ತಿದೆ. ಕಾಂಗ್ರೆಸ್ ಕೂಡ ಬಿಜೆಪಿಯ ವೈಫಲ್ಯವನ್ನೇ ಅಸ್ತ್ರವನ್ನಾಗಿಸಿತ್ತು.

* ಮಂಗಳೂರು ಮಹಾನಗರ ಪಾಲಿಕೆ : 60 ವಾರ್ಡ್ಗಳಲ್ಲಿ ಕಾಂಗ್ರೆಸ್ 35, ಬಿಜೆಪಿ 20, ಜೆಡಿಎಸ್ 2, ಎಸ್ ಡಿಪಿಐ 1, ಸಿಪಿಎಂ 1, ಪಕ್ಷೇತರ 1 ಗೆಲುವು ಸಾಧಿಸಿದೆ. ಇಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಸಾಧಿಸಿದೆ.

* ಪುತ್ತೂರು : ಪುರಸಭೆಯ 27 ವಾರ್ಡ್ ಗಳಲ್ಲಿ ಕಾಂಗ್ರೆಸ್ 15, ಬಿಜೆಪಿ 12ರಲ್ಲಿ ಗೆಲವು ಸಾಧಿಸಿದೆ.

* ಉಳ್ಳಾಲ: ಪುರಸಭೆಯ 27 ವಾರ್ಡ್ ಗಳಲ್ಲಿ ಕಾಂಗ್ರೆಸ್ 17, ಬಿಜೆಪಿ 7, ಎಸ್ ಡಿಪಿಐ 1 ಮತ್ತು ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

* ಬಂಟ್ವಾಳ : ಪುರಸಭೆಯ 23 ವಾರ್ಡ್ ಗಳಲ್ಲಿ ಕಾಂಗ್ರೆಸ್ 13, ಬಿಜೆಪಿ 5, ಎಸ್ ಡಿಪಿಐ 3, ಜೆಡಿಎಸ್ 1 ಹಾಗು ಒಬ್ಬ ಪಕ್ಷೇತರ ಗೆಲುವು ಸಾಧಿಸಿದ್ದಾರೆ.

* ಬೆಳ್ತಂಗಡಿ: ಪಟ್ಟಣ ಪಂಚಾಯತ್ನ 11 ವಾರ್ಡ್ ಗಳಲ್ಲಿ ಕಾಂಗ್ರೆಸ್ 9 ಮತ್ತು ಬಿಜೆಪಿ 2 ಗೆಲುವು ಸಾಧಿಸಿದೆ.

* ಸುಳ್ಯ : ಪಟ್ಟಣ ಪಂಚಾಯತ್ನ 18 ವಾರ್ಡ್ ಗಳಲ್ಲಿ ಬಿಜೆಪಿ 12, ಕಾಂಗ್ರೆಸ್ 5, ಎಸ್ ಡಿಪಿಐ 1 ಗೆಲುವು ಸಾಧಿಸಿದೆ.

ಮನಪಾ ಮತ್ತೆ  ಕಾಂಗ್ರೆಸ್ ತೆಕ್ಕೆಗೆ

* 60 ವಾರ್ಡ್ ಗಳಲ್ಲಿ 35ರಲ್ಲಿ ಕಾಂಗ್ರೆಸ್ ಗೆ ಭರ್ಜರಿ ಜಯ

* 20 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡ ಬಿಜೆಪಿ * 1 ಪಕ್ಷೇತರ

* 1 ಸ್ಥಾನ ಉಳಿಸಿಕೊಂಡ ಸಿಪಿಎಂ * ಜೆಡಿಎಸ್ ಗೆ 2 ಸ್ಥಾನ

* ಖಾತೆ ತೆರೆದ ಎಸ್ ಡಿಪಿಐ *  ಕೆಜೆಪಿಗೆ ಮುಖಭಂಗ

ತೀವ್ರ ಕುತೂಹಲ ಕೆರಳಿಸಿದ್ದ ಮಂಗಳೂರು ಮಹಾನಗರ ಪಾಲಿಕೆಯ 60 ಸ್ಥಾನಗಳಲ್ಲಿ 35 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ 5ನೆ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧತೆ ನಡೆಸಿದೆ.

2007ರ ಚುನಾವಣೆಯಲ್ಲಿ ಮನಪಾದಲ್ಲಿ ಬಹುಮತ ಪಡೆದು ಅಧಿಕಾರ ನಡೆಸಿದ್ದ ಬಿಜೆಪಿ ಈ ಬಾರಿ ಕೇವಲ 20 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ತರಾತುರಿಯಲ್ಲಿ ಈ ಬಾರಿಯ ಚುನಾವಣೆ ಘೋಷಣೆಯಾಗಿದ್ದರೂ ವಾರ್ಡ್  ಮಟ್ಟಗಳಲ್ಲಿ ಬಿಜೆಪಿ ಕಾರ್ಯಕರ್ತರ ಪ್ರಚಾರ ಕಾರ್ಯ ಫಲ ನೀಡಿಲ್ಲ. ಕಳೆದ ಬಾರಿಯ ಚುನಾವಣೆಯ ಸಂದರ್ಭ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ತುಳಸಿ ಕಟ್ಟೆಗೂ ತೆರಿಗೆ ವಿಧಿಸಲಿದೆ ಎಂದು ಸ್ವಯಂ ಘೋಷಿತ ಆಸ್ತಿ ತೆರಿಗೆ ವಿರುದ್ಧ ಧ್ವನಿ ಎತ್ತಿ ಮತ ಯಾಚಿಸಿದ್ದ ಬಿಜೆಪಿ ತನ್ನ  ಅಧಿಕಾರಾವಧಿಯಲ್ಲಿ  ಸ್ವಯಂ ಘೋಷಿತ ಆಸ್ತಿ ತೆರಿಗೆ, ನೀರಿನ ದರ ಹೆಚ್ಚಳದ ಮೂಲಕ ಜನರ ವಿರೋಧಕ್ಕೆ ಕಾರಣವಾಗಿತ್ತು. ಕಳೆದ ಚುನಾವಣೆಯಲ್ಲಿ ಬಿಜೆಪಿ 34 ಸ್ಥಾನಗಳೊಂದಿಗೆ ಅಧಿಕಾರದ ಗದ್ದುಗೆ ಹಿಡಿದಿದ್ದರೆ, 20 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಪ್ರಮುಖ ಪ್ರತಿಪಕ್ಷವಾಗಿತ್ತು.

ಕಳೆದ ಬಾರಿ ಕುದ್ರೋಳಿ ವಾರ್ಡ್ ನ ಗೆಲುವಿನ ಮೂಲಕ  1 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಜೆಡಿಎಸ್ ಈ ಬಾರಿ 2 ಸ್ಥಾನಗಳೊಂದಿಗೆ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಂಡಿದೆ. ಕುದ್ರೋಳಿ ವಾರ್ಡ್ ನಂ. 43ರಲ್ಲಿ ಕಳೆದ ಬಾರಿ ಜಯಗಳಿಸಿದ್ದ ಜೆಡಿಎಸ್ ಅಭ್ಯರ್ಥಿ  ಅಬ್ದುಲ್ ಅಝೀಝ್ ಕುದ್ರೋಳಿ ಈ ಬಾರಿ ತಮ್ಮ ನಿಕಟ ಸ್ಪರ್ಧಿ ಕಾಂಗ್ರೆಸ್ ನ ಸಂಶುದ್ದೀನ್ ರನ್ನು 10 ಮತಗಳ ಅಂತರದಿಂದ ಸೋಲಿಸಿ ದ್ವಿತೀಯ ಬಾರಿಗೆ ಕಾರ್ಪೋರೇಟರ್ ಆಗಿದ್ದಾರೆ.

ಬಂದರು ವಾರ್ಡ್ ನಂ. 44ರಲ್ಲಿ ಜೆಡಿಎಸ್ ನ ರಮೀಝಾ ಬಾನು, ಕಳೆದ ಬಾರಿ ಜಯ ಗಳಿಸಿದ್ದ ಕಾಂಗ್ರೆಸ್ ಅಭ್ಯರ್ಥಿ  ಮಮತಾ ಶೆಣೈರನ್ನು 44 ಮತಗಳ ಅಂತರದಿಂದ ಸೋಲಿಸಿ ನೂತನ ಕಾರ್ಪೋರೇಟರ್ ಆಗಿ ಆಯ್ಕೆಯಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ ಬಜಾಲ್ ವಾರ್ಡ್ ನಂ. 53ರಿಂದ ಗೆದ್ದಿದ್ದ ಸಿಪಿಎಂನ ಅಭ್ಯರ್ಥಿ ಜಯಂತಿ ಬಿ. ಶೆಟ್ಟಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಎದುರು 690 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. ಹಾಗಿದ್ದರೂ, ಪಂಜಿಮೊಗರು ಕ್ಷೇತ್ರದಲ್ಲಿ ಕಳೆದ ಬಾರಿ 113 ಮತಗಳ ಅಂತರದಿಂದ ಸೋಲನುಭವಿಸಿದ್ದ ಸಿಪಿಎಂನ ಅಭ್ಯರ್ಥಿ ದಯಾನಂದ ಶೆಟ್ಟಿ ಈ ಬಾರಿ ಬಿಜೆಪಿಯ ಅಭ್ಯರ್ಥಿ ಹಾಗೂ ಕಳೆದ ಮನಪಾದಲ್ಲಿ  ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿದ್ದ ಶಾಂತಾ ಆರ್. ಅವರನ್ನು 271 ಮತಗಳಿಂದ ಸೋಲಿಸುವ ಮೂಲಕ ಪಾಲಿಕೆಯಲ್ಲಿ ಸಿಪಿಎಂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ.

ವಿಶೇಷವೆಂದರೆ, ಬಿಜೆಪಿ ಆಡಳಿತಾವಧಿಯ ಕೊನೆಯ ಒಂದು ವರ್ಷದ ಆಡಳಿತದಲ್ಲಿ ಮನಪಾ ಮೇಯರ್ ಸ್ಥಾನದ ಅದೃಷ್ಟವನ್ನು ಪಡೆದಿದ್ದ ಕಾಂಗ್ರೆಸ್ ಅಭ್ಯರ್ಥಿ ಗುಲ್ಜಾರ್ ಬಾನು ಅವರು ಈ ಬಾರಿ 635 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. ಈ ಮೂಲಕ ಮನಪಾದಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿರುವ ಎಸ್ಡಿಪಿಐನ ಅಯಾಝ್ ಕಾರ್ಪೋರೇಟರ್ ಆಗಿ ಆಯ್ಕೆಯಾಗಿದ್ದಾರೆ.

ಮನಪಾ ಚುನಾವಣೆಯ ಮತ್ತೊಂದು ವಿಶೇಷವೆಂದರೆ, ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ಸುರತ್ಕಲ್ ಪಶ್ಚಿಮ ವಾರ್ಡ್ ನಂ.1ರಲ್ಲಿ ಈ ಬಾರಿ ಬಿಜೆಪಿಯಿಂದ ಬಂಡಾಯವೆದ್ದು, ಪಕ್ಷೇತರರಾಗಿ ಸ್ಪರ್ಧಿಸಿದ್ದ ರೇವತಿ ಪುತ್ರನ್, ಬಿಜೆಪಿಯ ಕೇಶವ ಪುತ್ರನ್ರನ್ನು 140 ಮತಗಳ ಅಂತರದಿಂದ ಸೋಲಿಸಿ ಕಾರ್ಪೋರೇಟರ್ ಆಗಿ ದ್ವಿತೀಯ ಬಾರಿಗೆ ಆಯ್ಕೆಯಾಗಿದ್ದಾರೆ.

ಅತ್ಯಲ್ಪ ಮತಗಳ ಅಂತರದಿಂದ ಸೋತವರು….!

ಮನಪಾ ಚುನಾವಣೆಯಲ್ಲಿ ಕೆಲ ಅಭ್ಯರ್ಥಿ ಗಳು ನಿಕಟಪೂರ್ವ ಸ್ಪರ್ಧಿ ಗಳಿಂದ ಬೆರಳೆಣಿಕೆಯ ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ. ಪಣಂಬೂರು ಬೆಂಗ್ರೆ ವಾರ್ಡ್ ನಂ. 11ರಲ್ಲಿ ಬಿಜೆಪಿಯ ರಘುವೀರ್ 959 ಮತಗಳೊಂದಿಗೆ ತಮ್ಮ ನಿಕಟಪೂರ್ವ ಸ್ಪರ್ಧಿ ಕಾಂಗ್ರೆಸ್ ನ ಹರೀಶ್ಚಂದ್ರ ಅವರಿಂದ 11 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ. ಕಳೆದ ಬಾರಿ ಈ ವಾರ್ಡ್ ನಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಸಂತೋಷ್ ತಮ್ಮ ನಿಕಟಪೂರ್ವ ಸ್ಪರ್ಧಿ  ಬಿಜೆಪಿಯ ಕ್ಲಿಫರ್ಡ್ ಲೋಬೋ ಅವರ ಎದುರು 824 ಮತಗಳ ಅಂತರದಿಂದ  ಗೆಲುವು ಸಾಧಿಸಿ ಬಳಿಕ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಬಂಗ್ರ ಕೂಳೂರು ವಾರ್ಡ್ ನಂ. 16ರಲ್ಲಿ ಬಿಜೆಪಿಯ ಹರೀಶ್ ಎಂ. ಶೆಟ್ಟಿ 1860 ಮತಗಳನ್ನು ಪಡೆದು ಕಾಂಗ್ರೆಸ್ ನ ಕೆ. ಕೇಶವ ಸನಿಲ್ ಅವರನ್ನು 10 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕಳೆದ ಬಾರಿಯೂ ಬಿಜೆಪಿಯಿಂದ ಸ್ಪರ್ಧಿಸಿದ್ದ ಹರೀಶ್ ಎಂ. ಶೆಟ್ಟಿ  ಕಾಂಗ್ರೆಸ್ ನ ಕೆ. ಕೇಶವ ಸನಿಲ್ ಅವರ ಎದುರು 496 ಮತಗಳ ಅಂತರದಿಂದ ಜಯಗಳಿಸಿದ್ದರು.

ವಾರ್ಡ್ ನಂ. 43 ಕುದ್ರೋಳಿಯಲ್ಲಿಯೂ ಜೆಡಿಎಸ್ ಅಭ್ಯರ್ಥಿರ್ಥಿ ಅಬ್ದುಲ್ ಅಝೀಝ್ ರವರು ತನ್ನ ನಿಕಟಪೂರ್ವ ಸ್ಪರ್ಧಿ ಕಾಂಗ್ರೆಸ್ ನ ಸಂಶುದ್ದೀನ್ರ ಎದುರು 10 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ಅಬ್ದುಲ್ ಅಝೀಝ್ ಕಾಂಗ್ರೆಸ್ ಅಭ್ಯರ್ಥಿ ಬಿ. ಅಬೂಬಕರ್ ಅವರ ಎದುರು 574 ಮತಗಳ ಅಂತರದಿಂದ ಜಯಗಳಿಸಿದ್ದರು.

ವಾರ್ಡ್ 21 ಪದವು ಪಶ್ಚಿಮದಲ್ಲಿ ಕಳೆದ ಬಿಜೆಪಿ ಆಡಳಿತಾವಧಿಯಲ್ಲಿ ಉಪ ಮೇಯರ್ ಆಗಿದ್ದ ಬಿಜೆಪಿಯ  ಶಕೀಲಾ ಕಾವಾರನ್ನು ಈ ಬಾರಿ ಕಾಂಗ್ರೆಸ್ ನ ಅಖಿಲಾ ಆಳ್ವ 23 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕಳೆದ ಬಾರಿ ಶಕೀಲಾ ಕಾವ 2038 ಮತಗಳನ್ನು ಪಡೆದು ಕಾಂಗ್ರೆಸ್ ನ ಅನಿತಾ ರೆಜಿನಾ ಪಿಂಟೋರನ್ನು 554 ಮತಗಳ ಅಂತರದಿಂದ ಸೋಲಿಸಿದ್ದರು.

ವಾರ್ಡ್ ನಂ. 6 ಇಡ್ಯಾ ಪೂರ್ವದಲ್ಲಿ ಬಿಜೆಪಿಯ ಗುಣಶೇಖರ ಶೆಟ್ಟಿ ಕಾಂಗ್ರೆಸ್ ನ ಹರೀಶ್ ಕೆ. ಸುರತ್ಕಲ್ ವಿರುದ್ಧ 39 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಹರೀಶ್ ಕೆ. ಸುರತ್ಕಲ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಯ ಸುನಿಲ್ ಕುಮಾರ್ ವಿರುದ್ಧ 184 ಮತಗಳ ಅಂತರದಿಂದ ಜಯಗಳಿಸಿದ್ದರು.

ವಾರ್ಡ್ ನಂ. 44 ಬಂದರಿನಲ್ಲಿ ಕಳೆದ ಬಾರಿ ಕಾಂಗ್ರೆಸ್ ನ ಮಮತಾ ಶೆಣೈ ತಮ್ಮ ನಿಕಟ ಸ್ಪರ್ಧಿ ಬಿಜೆಪಿಯ ವಿದ್ಯಾ ಕುಡ್ವಾರನ್ನು 102 ಮತಗಳ ಅಂತರದಿಂದ ಸೋಲಿಸಿ ಕಾರ್ಪೋರೇಟರ್ ಆಗಿದ್ದರೆ, ಈ ಬಾರಿ ಜೆಡಿಎಸ್ ನ ರಮೀಝಾ ಬಾನುರವರು ಮಮತಾ ಶೆಣೈರನ್ನು 44 ಮತಗಳಿಂದ ಸೋಲಿಸಿ ಮನಪಾ ಪ್ರವೇಶಿಸಿದ್ದಾರೆ.

ವಾರ್ಡ್  ನಂ.27ರಲ್ಲಿ ಬೋಳೂರಿನಲ್ಲಿ ಕಾಂಗ್ರೆಸ್ ನ ಲತಾ ಸಾಲಿಯಾನ್ ಬಿಜೆಪಿಯ ಸರೋಜಿನಿ ಕೋಟ್ಯಾನ್ರನ್ನು 56 ಮತಗಳ ಅಂತರದಿಂದ ಸೋಲಿಸಿ ಮನಪಾ ಪ್ರವೇಶಿಸಿದ್ದಾರೆ. ಕಳೆದ ಬಾರಿ ಈ ವಾರ್ಡ್ ನಲ್ಲಿ ಸರೋಜಿನಿ ಕೋಟ್ಯಾನ್ ಕಾಂಗ್ರೆಸ್ ನ ಗೀತಾ ವಿ. ಸುಕುಮಾರ್ ಎದುರು  550 ಮತಗಳ ಅಂತರದಿಂದ ಗೆದ್ದಿದ್ದರು.

ವಾರ್ಡ್ ನಂ. 54 ಜಪ್ಪಿನಮೊಗರುವಿನಲ್ಲಿ ಕಳೆದ ಬಾರಿ ಸಿಪಿಎಂ ಅಭ್ಯರ್ಥಿ ದಿನೇಶ್ ಅಂಚನ್ ಎದುರು 25 ಮತಗಳ ಅಂತರದಿಂದ ಗೆದ್ದಿದ್ದ ಕಾಂಗ್ರೆಸ್ ಅಭ್ಯರ್ಥಿ ನಾಗೇಂದ್ರ ಕುಮಾರ್ ಈ ಬಾರಿ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಇಲ್ಲಿ ಬಿಜೆಪಿಯ ಸುರೇಂದ್ರ ಅವರು 1403 ಮತಗಳನ್ನು ಪಡೆದು  ಸಿಪಿಎಂನ ಉದಯಚಂದ್ರ ಅವರ ಎದುರು 66 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.

ವಾರ್ಡ್ ನಂ. 2 ಸುರತ್ಕಲ್ ಪೂರ್ವದಲ್ಲಿ ಕಳೆದ ಬಾರಿ ಕಾಂಗ್ರೆಸ್ ನ ಅರುಣಾರನ್ನು 955 ಮತಗಳ ಅಂತರದಿಂದ ಸೋಲಿಸಿ ಕಾರ್ಪೋರೇಟರ್ ಆಗಿದ್ದ ಸುಮಿತ್ರಾ ಅವರು ಈ ಬಾರಿ ಕಾಂಗ್ರೆಸ್ ನ ಪ್ರಿಯಾಂಕ ಅವರನ್ನು 41ಮತಗಳ ಅಂತರದಿಂದ ಸೋಲಿಸಿ ದ್ವಿತೀಯ ಬಾರಿಗೆ ಮನಪಾ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಾರ್ಡ್ ನಂ. 3 ಕಾಟಿಪಳ್ಳ ಪೂರ್ವದಲ್ಲಿ ಕಾಂಗ್ರೆಸ್ ನ ಬಶೀರ್ ಅಹ್ಮದ್ ಬಿಜೆಪಿಯ ಹೊನ್ನಯ್ಯ ಕೋಟ್ಯಾನ್ ರ ಎದುರು 56 ಮತಗಳ ಅಂತರಿಂದ ಗೆಲುವು ಸಾಧಿಸಿ ಮತ್ತೆ ಮನಪಾದಲ್ಲಿ ತನ್ನ ಸ್ಥಾನವನ್ನು ಕಾಯ್ದಿರಿಸಿಕೊಂಡಿದ್ದಾರೆ. ಕಳೆದ ಬಾರಿ ಬಶೀರ್ ಅಹ್ಮದ್ ಬಿಜೆಪಿಯ ಲಕ್ಷ್ಮಣ ಆಚಾರ್ ಎದುರು 81 ಮತಗಳ ಅಂತರದಿಂದ ಗೆದ್ದಿದ್ದರು.

ವಾರ್ಡ್ ನಂ. 4 ಕಾಟಿಪಳ್ಳ ಕೃಷ್ಣಾಪುರದಲ್ಲಿ ಕಳೆದ ಬಾರಿ ಕಾಂಗ್ರೆಸ್ ನ ಖಾದರ್ ಎಸ್.ಎ. ವಿರುದ್ಧ 183 ಮತಗಳ ಅಂತರದಿಂದ ಗೆಲುವು ಪಡೆದು ಕಾರ್ಪೋರೇಟರ್ ಆಗಿದ್ದ ತಿಲಕ್ ರಾಜ್ ಈ ಬಾರಿ ಖಾದರ್ ವಿರುದ್ಧ 72 ಮತಗಳ ಅಂತರದಿಂದ ಗೆದ್ದಿದ್ದಾರೆ.

* ಅರ್ಧಕ್ಕರ್ಧ ಹೊಸ ಮುಖಗಳು *ಬಿಜೆಪಿಗೆ ಕೆಜೆಪಿ ಹೊಡೆತ

ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್ ಗಳಲ್ಲಿ ಒಟ್ಟು 243 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅದರಲ್ಲಿ ಕಾಂಗ್ರೆಸ್ ನಿಂದ 19, ಬಿಜೆಪಿಯಿಂದ 8, ಜೆಡಿಎಸ್, ಎಸ್ ಡಿಪಿಐ, ಸಿಪಿಐಎಂ ಪಕ್ಷದಿಂದ ತಲಾ ಒಬ್ಬರು ಸೇರಿದಂತೆ ಒಟ್ಟು 30 ಮಂದಿ ಮೊದಲ ಬಾರಿಗೆ ಕಾರ್ಪೋರೇಟರ್ ಆಗಿ ಚುನಾಯಿತರಾಗಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ತಲಾ 60 ಅಭ್ಯರ್ಥಿ ಗಳನ್ನು ಕಣಕ್ಕಿಳಿಸಿತ್ತು. ಅದರಲ್ಲಿ ಕಾಂಗ್ರೆಸ್ 35 ಮತ್ತು ಬಿಜೆಪಿ 20 ಸ್ಥಾನದಲ್ಲಿ ಗೆದ್ದಿದೆ. ಜೆಡಿಎಸ್ 48 ಸ್ಥಾನದಲ್ಲಿ ಸ್ಪರ್ಧಿ ಸಿತ್ತು. ಆ ಪೈಕಿ 2ರಲ್ಲಿ ಗೆಲುವು ಸಾಧಿಸಿದೆ. ಸಿಪಿಐ 1, ಜೆಡಿಯು 2, ಬಿಎಸ್ಆರ್ 14, ಕೆಜೆಪಿ 6, ಡಬ್ಲುಪಿಐ 6, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ 1ರಲ್ಲಿ ಸ್ಪರ್ಧಿಸಿದ್ದು ಎಲ್ಲಾ ಕಡೆ ಸೋಲುಂಡಿದೆ. ಸಿಪಿಐಎಂ 14ರಲ್ಲಿ 1 ಮತ್ತು ಎಸ್ ಡಿಪಿಐ 8ರಲ್ಲಿ 1 ಗೆಲುವು ಸಾಧಿಸಿದೆ. ಕೆಲವು ಕಡೆ ಬಿಜೆಪಿ ಗೆಲುವಿಗೆ ಕೆಜೆಪಿ ಅಡ್ಡಿಯಾಗಿದೆ. ತನ್ಮಧ್ಯೆ ಕೆಜೆಪಿ ನಾಯಕಿ ಮರಿಯಮ್ಮ ಥಾಮಸ್ ರ ಸೋಲು ಪಕ್ಷಕ್ಕೆ ಹೊಡೆತ ನೀಡಿದೆ.

ಗೆದ್ದ ಪ್ರಮುಖರು

* ರೇವತಿ ಪುತ್ರನ್ : ಎರಡು ಬಾರಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದ ಸುರತ್ಕಲ್ ಪಶ್ಚಿಮ 1ನೆ ವಾರ್ಡ್ ನ ರೇವತಿ ಪುತ್ರನ್ ಗೆ ಈ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಹಾಗಾಗಿ ರೇವತಿ ಪಕ್ಷೇತರರಾಗಿ ಸ್ಪರ್ಧಿಸಿ 140 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

* ಗಣೇಶ್ ಹೊಸಬೆಟ್ಟು : ಕಳೆದ ಬಾರಿ ಬಿಜೆಪಿಯಿಂದ ಗೆದ್ದು ಮೊದಲ ಅವಧಿಯಲ್ಲಿ ಮೇಯರ್ ಆಗಿದ್ದ ಗಣೇಶ್ ಹೊಸಬೆಟ್ಟು ಈ ಬಾರಿ ಮತ್ತೆ ಗೆಲುವಿನ ನಗೆ ಬೀರಿದ್ದಾರೆ.

* ಕೆ. ಹರಿನಾಥ್ :
ಮೂರು ಬಾರಿ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದ್ದ ಹರಿನಾಥ್ ಒಮ್ಮೆ ಉಪ ಮೇಯರ್ ಕೂಡ ಆಗಿದ್ದರು. ಇದೀಗ ನಾಲ್ಕನೆ ಬಾರಿ ಗೆಲವು ಸಾಧಿಸಿದ್ದಾರೆ.

* ಶಶಿಧರ ಹೆಗ್ಡೆ : ಮೂರು ಬಾರಿ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದ್ದ ಕೆ. ಶಶಿಧರ ಹೆಗ್ಡೆ ಮೇಯರ್ ಕೂಡ ಆಗಿದ್ದರು. ಇದೀಗ ನಾಲ್ಕನೆ ಬಾರಿ ಗೆಲುವು ಸಾಧಿಸಿದ್ದಾರೆ.

* ಮಹಾಬಲ ಮಾರ್ಲ : ಎರಡು ಬಾರಿ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದ್ದ ಮಹಾಬಲ ಮಾರ್ಲ ಕಳೆದ ಬಾರಿ ಸೋತಿದ್ದರು. ಈ ಬಾರಿ ಮತ್ತೆ ಗೆಲುವಿನ ನಗೆ ಬೀರಿದ್ದಾರೆ.

* ಲ್ಯಾನ್ಸಿ ಲಾಟ್ ಪಿಂಟೊ :
ಸತತ ನಾಲ್ಕು ಸಲ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದ್ದ ಲ್ಯಾನ್ಸಿ ಲಾಟ್ ಪಿಂಟೊ ಹಿಂದೊಮ್ಮೆ ಉಪಮೇಯರ್ ಆಗಿದ್ದರು. ಮಂಗಳೂರು ವಿಧಾನ ಸಭ ಚುನಾವಣೆಯಲ್ಲಿ ಸ್ಪರ್ಧಿಸಿ ಗಮನ ಸೆಳೆದಿದ್ದರು.

* ಪ್ರೇಮಾನಂದ ಶೆಟ್ಟಿ : ಸತತ ಮೂರು ಬಾರಿ ಬಿಜೆಪಿಯಿಂದ ಗೆದ್ದಿದ್ದ ಪ್ರೇಮಾನಂದ ಶೆಟ್ಟಿ ಇದೀಗ ಮತ್ತೆ ಗೆಲುವು ಸಾಧಿಸಿದ್ದಾರೆ.

* ಸುಧೀರ್ ಶೆಟ್ಟಿ : 52ನೆ ಕಣ್ಣೂರು ವಾರ್ಡ್ ನಿಂದ ಕಳೆದ ಬಾರಿ ಹಮೀದ್ ಕಣ್ಣೂರ್ ರ ಎದುರು ಕೇವಲ 19 ಮತಗಳ ಅಂತರದಿಂದ ಗೆದ್ದಿದ್ದ ಸುಧೀರ್ ಶೆಟ್ಟಿ ಕಣ್ಣೂರು ಈ ಬಾರಿ 824 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಎಸ್ ಡಿಪಿಐ ಕಾಂಗ್ರೆಸ್ ನ ಮತಕ್ಕೆ ಲಗ್ಗೆ ಹಾಕಿರುವುದು ಸುಧೀರ್ ರ ಗೆಲುವಿಗೆ ಕಾರಣ ಎಂದು ಹೇಳಲಾಗುತ್ತಿದೆ.

* ಅಪ್ಪಿ : ಎರಡು ಬಾರಿ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದ್ದ ಅಪ್ಪಿ `ಹುದ್ದೆಯ ವಿವಾದ’ದ ಮಧ್ಯೆಯೂ ಮೂರನೆ ಬಾರಿ ಸಾಮಾನ್ಯ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.

ಸೋತ ಪ್ರಮುಖರು

* ಗುಲ್ಜಾರ್ ಬಾನು : ಬಿಜೆಪಿಯ ಬಹುಮತದ ನಡುವೆಯೂ ಅನಿರೀಕ್ಷಿತವಾಗಿ ಮೇಯರ್ ಆಗಿ ಆಯ್ಕೆಯಾಗಿದ್ದ ಗುಲ್ಜಾರ್ ಬಾನು ಈ ಬಾರಿ ಎಸ್ ಡಿಪಿಐ ಅಭ್ಯರ್ಥಿ ಅಯಾಝ್ ವಿರುದ್ಧ ಸೋಲುಂಡಿದ್ದಾರೆ.

* ಬಿಜೆಪಿ ಮುಖ್ಯ ಸಚೇತಕರಾಗಿ ಗುರುತಿಸಲ್ಪಟ್ಟಿದ್ದ ರಂಗನಾಥ್ ಕಿಣಿ ಈ ಬಾರಿ  ಕಾಂಗ್ರೆಸ್ ನ ಎ.ಸಿ. ವಿನಯರಾಜ್ ಎದುರು ಸೋಲುಂಡಿದ್ದಾರೆ.

* ಜಪ್ಪಿನಮೊಗರು 54ನೆ ವಾರ್ಡ್ ನಲ್ಲಿ ಕಳೆದ ಬಾರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ನ ನಾಗೇಂದ್ರ ಕುಮಾರ್ಗೆ ಈ ಬಾರಿ ಸೋಲಾಗಿದೆ. ಅಲ್ಲಿ ಬಿಜೆಪಿಯ ಹೊಸ ಮುಖ ಸುರೇಂದ್ರ ಗೆಲುವು ಸಾಧಿಸಿದ್ದಾರೆ.

* ಕಳೆದ ಬಾರಿ ಗೆಲವು ಸಾಧಿಸಿದ್ದ ಪ್ರೇಮಾ ಮುರಳೀಧರ್ಗೆ ಈ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಹಾಗಾಗಿ ಪ್ರೇಮಾ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಮತದಾರರು ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ.

* ಕಂಕನಾಡಿ 49ನೆ ವಾರ್ಡ್ ನಿಂದ ಕಳೆದ ಬಾರಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದ ಹಿಂದೂ ಯುವ ಸೇನೆಯ ಪ್ರಮುಖ ಬಾಸ್ಕರ ಚಂದ್ರ ಶೆಟ್ಟಿ ಅವರನ್ನು ಯುವ ಕಾಂಗ್ರೆಸ್ಸಿಗ ಪ್ರವೀಣ್ ಚಂದ್ರ ಆಳ್ವ ಸೋಲಿಸಿದ್ದಾರೆ.

* ಕಳೆದ ಬಾರಿ ಬಿಜೆಪಿಯಿಂದ ಗೆದ್ದು ಉಪಮೇಯರ್ ಆಗಿದ್ದ ಶಕೀಲಾ ಕಾವ ಹಾಗು ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿದ್ದ ಶಾಂತ ಆರ್. ಈ ಬಾರಿ ಸೋಲುಂಡಿದ್ದಾರೆ.

* ಬಿಜೆಪಿ ಹಾಗು ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದು ಈ ಬಾರಿ ಮಾಜಿ ಕೆಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಮರಿಯಮ್ಮ ಥಾಮಸ್ ಗೆ ಸೋಲಾಗಿದೆ.

* ಮೊದಲು ಕಾಂಗ್ರೆಸ್ ಬಳಿಕ ಬಿಜೆಪಿಯಿಂದ ಗೆದ್ದು ಈ ಬಾರಿ ಮತ್ತೆ ಕಾಂಗ್ರೆಸ್ ಸೇರಿ ಕೊನೆಯ ಕ್ಷಣದಲ್ಲಿ ಟಿಕೆಟ್ ತಪ್ಪಿದ ಸಿಟ್ಟಿನಿಂದ ಕಾಂಗ್ರೆಸ್ ನಿಂದ ಹೊರನಡೆದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಜೇಮ್ಸ್ ಡಿಸೋಜರಿಗೆ ಮತದಾರರು ಸೋಲಿನ ಹಾದಿ ತೋರಿಸಿದ್ದಾರೆ.

* ಮೊದಲು ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆದ್ದು ಬಳಿಕ ಕಾಂಗ್ರೆಸ್ ನಿಂದ ಟಿಕೆಟ್ ನಿರಾಕರಿಸಲ್ಪಟ್ಟು ಪಕ್ಷೇತರರಾಗಿ ಸ್ಪರ್ಧಿಸಿದ್ದರೂ ಸೋಲುಂಡಿದ್ದ ವಿಶ್ವನಾಥ್ ರಿಗೆ ಕಾಂಗ್ರೆಸ್ ಈ ಬಾರಿ ಟಿಕೆಟ್ ನೀಡಿದೆ. ಆದರೆ, ಮತದಾರರು ಅವರನ್ನು ಸೋಲಿಸಿದ್ದಾರೆ. ಕಾಪರ್ಪೋರೇಟರ್ ಆಗಿದ್ದ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷನಾಗಿ ಗುತ್ತಿಗೆದಾರರಿಗೆ ಮೂಗುದಾರ ಹಾಕಿದ್ದ ವಿಶ್ವನಾಥ್ ಅಧಿಕಾರ ಇರಲಿ, ಇಲ್ಲದಿರಲಿ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಸೋಲು ಕಾಂಗ್ರೆಸಿಗರಿಗೆ ಅರಗಿಸಿಕೊಳ್ಳಲಾಗದ್ದು.

* ಕಳೆದ ಬಾರಿ ಸಿಪಿಎಂನಿಂದ ಗೆದ್ದು ಮನಪಾದಲ್ಲಿ ಗಟ್ಟಿ ಧ್ವನಿಯಾಗಿದ್ದ ಜಯಂತಿ ಶೆಟ್ಟಿಗೆ ಈ ಬಾರಿ ಸೋಲಾಗಿರುವುದು ವಿಪರ್ಯಾಸ.

* ಹೋಮ್ ಸ್ಟೇ ದಾಳಿ ಸಂದರ್ಭ ಪಕ್ಷದ ಪ್ರಮುಖರು ನೆರವಿಗೆ ಬಂದಿಲ್ಲ ಎಂದು ಬೇಸರಿಸಿ ಬಿಜೆಪಿಯಿಂದ ಹೊರ ಬಂದು ಜೆಡಿಎಸ್ ಸೇರಿದ್ದ ಮೋಹನ್ ಪಡೀಲ್ ಗೆ ಸೋಲಾಗಿದೆ.

ಅಣ್ಣನಿಗೆ ಜಯ-ತಮ್ಮನಿಗೆ ಸೋಲು

* 43ನೆ ಕುದ್ರೋಳಿ ವಾರ್ಡ್ ನಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಅಝೀಝ್ ಕುದ್ರೋಳಿ ತನ್ನ ಸಹೋದರ ಬಿಜೆಪಿಯ ಅನ್ವರ್ ರೀಕೋರನ್ನು ಸೋಲಿಸಿದ್ದಾರೆ. ಜೆಡಿಎಸ್ ನ ಅಝೀಝ್ ಮತ್ತು ಕಾಂಗ್ರೆಸ್ ನ ಸಂಶುದ್ದೀನ್ ಮಧ್ಯೆ ತೀವ್ರ ಹಣಾಹಣಿಯಿತ್ತು. ಮತ ಎಣಿಕೆ ವೇಳೆ ಜೆಡಿಎಸ್ ಮತ್ತು ಬಿಜೆಪಿ ಏಜೆಂಟರು 268 ಮತಗಳ ಸಂಖ್ಯೆಯನ್ನು ಗುರುತಿಸಿ ಬರೆದರೆ, ಕಾಂಗ್ರೆಸ್ ಏಜೆಂಟ್ 218 ಮತ ಎಂದು ದಾಖಲಿಸಿದ್ದರು. ಈ ಬಗ್ಗೆ ಕಾಂಗ್ರೆಸ್ ಆಕ್ಷೇಪಣೆ ಸಲ್ಲಿಸಿ ಮರು ಎಣಿಕೆಗೆ ಆಗ್ರಹಿಸಿ ಅರ್ಜಿಸಲ್ಲಿಸಿದ್ದರೂ ಮನಪಾ ಚುನಾವಣಾ ವೀಕ್ಷಕ ಎ.ಕೆ.ಮೊನ್ನಪ್ಪ ಅದನ್ನು ತಿರಸ್ಕರಿಸಿದರು.

ಕಳೆದ ಅವಧಿಯಲ್ಲಿ ನಾನು ಮಾಡಿದ ಜನಪರ ಕೆಲಸಗಳನ್ನು ಗುರುತಿಸಿ ಮತದಾರರು ಆಶೀರ್ವಾದಿಸಿದ್ದಾರೆ. ನನ್ನ ಗೆಲುವಿಗೆ ಪಕ್ಷದ ಕಾರ್ಯಕರ್ತರು, ಮತದಾರರು ಕಾರಣ. ಮುಂದೆಯೂ ನನ್ನ ಸೇವೆ ಮುಂದುವರಿಸುತ್ತೇನೆ ಎಂದು ಅಝೀಝ್ ಹೇಳಿಕೊಂಡಿದ್ದಾರೆ.

ಬಜಾಲ್ : ಅಕ್ಕ ಪಕ್ಕ ಮೂವರು ಕಾರ್ಪೋರೇಟರ್ ಗಳು!

ನಗರ ಹೊರವಲಯದ ಪಕ್ಕಲಡ್ಕ ಸಮೀಪದ ಬಜಾಲ್ನಲ್ಲಿ ಮೂವರು ಕಾಪರ್ಪೋರೇಟರ್ ಗಳಿರುವುದು ಈ ಬಾರಿಯ ವಿಶೇಷ. ಇಬ್ಬರು ಕಾಂಗ್ರೆಸ್ ಹಾಗು ಒಬ್ಬರು ಬಿಜೆಪಿಯಿಂದ ಗೆದ್ದಿದ್ದಾರೆ. ಕಾಂಗ್ರೆಸ್ ನಿಂದ 53ನೆ ಬಜಾಲ್ ವಾರ್ಡ್ ನಲ್ಲಿ ಸುಮಯ್ಯ ಗೆದ್ದಿದ್ದರೆ, ಅದೇ ವಾರ್ಡ್ ನ ಮತ್ತು ಸುಮಯ್ಯರ ಮನೆ ಸಮೀಪದಲ್ಲೇ ಇರುವ ರವೂಫ್ 47ನೆ ಮಿಲಾಗ್ರಿಸ್ ವಾರ್ಡ್ ನಿಂದ ಗೆದ್ದಿದ್ದಾರೆ. ಬಜಾಲ್ ವಾರ್ಡ್ ನವರೇ ಆದ ವಿಜಯ ಕುಮಾರ್ ಶೆಟ್ಟಿ 50ನೆ ಅಳಪೆ ದಕ್ಷಿಣ ವಾರ್ಡ್ ನಿಂದ ಬಿಜೆಪಿಯಿಂದ ಗೆದ್ದಿದ್ದಾರೆ. ಹೀಗೆ ಒಂದೇ ಊರಿನ ಮೂವರು ಮನಪಾ ಜನಪ್ರತಿನಿಧಿಯಾಗಿರುವುದು ವಿಶೇಷ.

ಮಾಜಿ ಮೇಯರ್ ರ ಪತ್ನಿ

* 35ನೆ ಪದವು ಸೆಂಟ್ರಲ್ ನಿಂದ ಗೆಲುವು ಸಾಧಿಸಿರುವ ಕೆ. ಝುಬೇದ ಮಾಜಿ  ಮೇಯರ್ ಅಝೀಝ್ರ ಪತ್ನಿ.

ಅಶ್ರಫ್ ರಾಜಿನಾಮೆ

* ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ 20 ವಾರ್ಡ್ ನಲ್ಲಿ ಕಾಂಗ್ರೆಸ್ 13ರಲ್ಲಿ ಗೆಲುವು ಸಾಧಿಸಿದೆ. ಆದರೆ, ತನ್ನ ವಾರ್ಡ್  (44ನೆ ಬಂದರ್)ನಲ್ಲಿ ಕಾಂಗ್ರೆಸ್ ಗೆ ಸೋಲಾಗಿದೆ. ಹಾಗಾಗಿ ನೈತಿಕ ಹೊಣೆ ಹೊತ್ತು ತಾನು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದೇನೆ ಎಂದು ಮಾಜಿ ಮೇಯರ್ ಕೆ. ಅಶ್ರಫ್ ತಿಳಿಸಿದ್ದಾರೆ.

ಗುಲ್ಜಾರ್ ಗೆ ಮುಖಭಂಗ

* ಕಳೆದ ಬಾರಿ ಅನಿರೀಕ್ಷಿತವಾಗಿ ಮೇಯರ್ ಸ್ಥಾನ ಅಲಂಕರಿಸಿದ್ದ ಕಾಂಗ್ರೆಸ್ ನ ಗುಲ್ಜಾರ್ ಬಾನು ಅವರಿಗೆ ಈ ಬಾರಿ ತೀವ್ರ ಮುಖಭಂಗವಾಗಿದೆ. ಎಸ್ ಡಿಪಿಐ ಪಕ್ಷದಿಂದ ಸ್ಪರ್ಧಿಸಿದ್ದ ಅಯಾಝ್ ಈ ಹಿಂದೆ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಆದರೆ, ಜೆಡಿಎಸ್ ಟಿಕೆಟ್ ಇಕ್ಬಾಲ್ ರ ಪಾಲಾಯಿತು. ಇದರಿಂದ ಅಸಮಾಧಾನಗೊಂಡ ಅಯಾಝ್ ಪಕ್ಷೇತರರಾಗಿ ಸ್ಪರ್ಧಿಸಿ 838 ಮತ ಪಡೆದಿದ್ದರು. ಬಳಿಕ ಎಸ್ ಡಿಪಿಐ ಪಕ್ಷ ಸೇರಿ ಕೃಷ್ಣಾಪುರ ವಲಯ ಸಮಿತಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿ ಇದೀಗ ಗುಲ್ಜಾರ್ ಬಾನು ಅವರನ್ನು ಸೋಲಿಸುವ ಮೂಲಕ ಎಸ್ಡಿಪಿಐ ಖಾತೆ ತೆರೆಯುವಂತೆ ಮಾಡಿದ್ದಾರೆ.

ಕಳೆದ ಮೂರು ವರ್ಷದಿಂದ ಪಕ್ಷದ ಕಾರ್ಯಕರ್ತರು ಜನರ ಸಮಸ್ಯೆಗೆ ಸ್ಪಂದಿಸಿದ್ದರು. ಗುಲ್ಜಾರ್ ಬಾನು ಮೇಯರ್ ಆಗಿದ್ದರೂ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿರಲಿಲ್ಲ. ಮತದಾರರು ನಮ್ಮ ಕೆಲಸ ನೋಡಿ ನನ್ನನ್ನು ಗೆಲ್ಲಿಸಿದ್ದಾರೆ ಎಂದು ಅಯಾಝ್ ಪ್ರತಿಕ್ರಿಯೆ ನೀಡಿದ್ದಾರೆ.

ಅಪ್ಪಿ ಆಯ್ಕೆ ವಿರುದ್ಧ ಜೆಡಿಎಸ್ ನ್ಯಾಯಾಲಯಕ್ಕೆ

ಮಂಗಳೂರು ಮಹಾನಗರ ಪಾಲಿಕೆಯ 59ನೆ ಜಪ್ಪು ವಾರ್ಡ್ ನಿಂದ ಗೆಲುವು ಸಾಧಿಸಿರುವ ಕಾಂಗ್ರೆಸ್ ನ ಅಪ್ಪಿ ಆಯ್ಕೆ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ಚಿಂತನೆ ನಡೆಸಲಾಗಿದೆ ಎಂದು ಜೆಡಿಎಸ್ ನಾಯಕ ಎಂ.ಜಿ. ಹೆಗ್ಡೆ ತಿಳಿಸಿದ್ದಾರೆ.

ಪರಿಶೀಲನೆ ಸಂದರ್ಭ ನಾಮಪತ್ರ ತಿರಸ್ಕರಿಸುವಂತೆ ಜಾತ್ಯತೀತ ಜನತಾದಳ ನಾಯಕರು ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿ ಪಟ್ಟು ಹಿಡಿದಿದ್ದರೂ ಅದಕ್ಕೆ ಸ್ಪಂದನೆ ಸಿಕ್ಕಿರಲಿಲ್ಲ. ಆವಾಗ ಪ್ರತಿಕ್ರಿಯೆ ನೀಡಿದ್ದ ಜೆಡಿಎಸ್ ಮುಖಂಡರು `ಈಗ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರೆ ಸದ್ರಿ ವಾರ್ಡ್ ಚುನಾವಣೆ ಮುಂದೂಡುವ ಸಾಧ್ಯತೆಯಿದೆ. ಹಾಗಾಗಿ ಅಪ್ಪಿ ಆಯ್ಕೆಯಾದರೆ, ಅದರ ವಿರುದ್ಧ ನ್ಯಾಯಾಲಯದ ಮೆಟ್ಟಲೇರುವೆವು’ ಎಂದಿದ್ದರು.

1985-87ರವರೆಗೆ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟಲ್ ನಲ್ಲಿ ಅಪ್ಪಿ ಅಡುಗೆ ಸಹಾಯಕರಾಗಿದ್ದು, ದುರ್ನಡತೆ ಕಾರಣಗಳಿಂದ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು ಎಂದು ಜೆಡಿಎಸ್ ನಾಯಕರು ಆರೋಪಿಸಿದ್ದರು. ಆದರೆ ಕಾಂಗ್ರೆಸ್ಸಿಗರು ಇದಕ್ಕೆ ಆಕ್ಷೇಪ ಸಲ್ಲಿಸಿದ್ದರು. ಚುನಾವಣಾಧಿಕಾರಿ ಜೆಡಿಎಸ್ ನಾಯಕರ ಮನವಿಯನ್ನು ತಿರಸ್ಕರಿಸಿದ್ದರು.

ಇದೀಗ ಅಪ್ಪಿ ಚುನಾಯಿತರಾಗಿದ್ದಾರೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂ.ಜಿ. ಹೆಗ್ಡೆ `ಅಪ್ಪಿ ವಿರುದ್ಧ ನಾವು ಈ ಹಿಂದೆಯೇ ಚುನಾವಣಾ ಆಯೋಗಕ್ಕೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದೆವು. ಅದಕ್ಕೆ ಪ್ರತಿಕ್ರಿಯೆ ಬಂದಿಲ್ಲ. ಅದರ ಪ್ರತಿ ಕೈ ಸೇರಿದೊಡನೆ ನ್ಯಾಯಾಲಯದ ಮೊರೆ ಹೋಗಲಾಗುವುದು’ ಎಂದು ತಿಳಿಸಿದ್ದಾರೆ.

ಮಂಗಳೂರು : ಮೇಯರ್ – ಉಪ ಮೇಯರ್ ಯಾರು?

ಮಂಗಳೂರು ಮಹಾನಗರ ಪಾಲಿಕೆಯ 6ನೆ ಅವಧಿಯ ಮೇಯರ್-ಉಪಮೇಯರ್ ಯಾರು ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಿಗೆ ಬಲವಾಗಿ ಕಾಡುತ್ತಿದೆ. ಅದಕ್ಕೂ ಮೊದಲು ರಾಜ್ಯ ಸರಕಾರ ಮೇಯರ್-ಉಪಮೇಯರ್ ಸ್ಥಾನದ ಮೀಸಲಾತಿ ಪ್ರಕಟಿಸಬೇಕು. ಬಳಿಕ ಈ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಆದರೆ ರಾಜ್ಯ ವಿಧಾನ ಸಭೆಯ ಚುನಾವಣೆಗೆ ಸಂಬಂಧಿಸಿದಂತೆ ಆಯೋಗ ನೀತಿ ಸಂಹಿತೆ ಪ್ರಕಟಿಸಿದರೆ ಮೇಯರ್- ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದರೂ ಚುನಾವಣೆ ನಡೆಸುವಂತಿಲ್ಲ.

ನೀತಿ ಸಂಹಿತೆ ಮುಗಿದ ಬಳಿಕ ಕಾರ್ಪೋರೇಟರ್ ಗಳು ಸಭೆ ಸೇರಿ ಮೇಯರ್- ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸಬಹುದಾಗಿದೆ. ಮೊದಲ ಸಭೆ ಸೇರಿದ ದಿನದಿಂದ ಚುನಾಯಿತ ಪ್ರತಿನಿಧಿಗಳು `ಕಾರ್ಪೋರೇಟರ್’ಗಳಿಗೆ ಲಭ್ಯವಾಗುವ ಎಲ್ಲ ಸೌಲಭ್ಯಗಳನ್ನು ಪಡೆಯಲಿದ್ದಾರೆ. ಅಲ್ಲದೆ ಆ ಸಭೆಯ ದಿನದಿಂದ 5 ವರ್ಷದ ಅವಧಿಯ ಲೆಕ್ಕಾಚಾರ ಆರಂಭಗೊಳ್ಳಲಿದೆ.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ 35, ಬಿಜೆಪಿ 20, ಜೆಡಿಎಸ್ 2, ಎಸ್ಡಿಪಿಐ 1, ಸಿಪಿಎಂ 1, ಪಕ್ಷೇತರ 1 (ಬಿಜೆಪಿ ಬಂಡಾಯ) ಸ್ಥಾನ ಗೆದ್ದಿದ್ದು, ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೇಯರ್-ಉಪಮೇಯರ್ ಆಗಲಿದ್ದಾರೆ.

6 ಬಾರಿ ಗೆದ್ದ ಈ ಹಿಂದೆ ಉಪಮೇಯರ್ ಕೂಡ ಆಗಿದ್ದ ಲ್ಯಾನ್ಸಿ ಲಾಟ್ ಪಿಂಟೋ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಮಾಜಿ ಉಪಮೇಯರ್ ಹರಿನಾಥ್, ನವೀನ್, ಡಿಸೋಜ,ಭಸ್ಕರ ಕೆ. ಜೆಸಿಂತ ವಿಜಯ ಆಲ್ಫ್ರೆಡ್, ಅಬ್ದುಲ್ ರವೂಫ್, ಮಹಾಬಲ ಮಾರ್ಲ,ಅಪ್ಪಿ,ಅಶೋಕ್ ಕುಮಾರ್ ಡಿ.ಕೆ., ದೀಪಕ್ ಪೂಜಾರಿಯ  ಹೆಸರು ಮೇಯರ್ -ಉಪಮೇಯರ್ ಸ್ಥಾನಕ್ಕೆ ಕೇಳಿ ಬರುತ್ತಿದೆ.ಆದರೆ ಎಲ್ಲವೂ ಮೀಸಲಾತಿಯನ್ನು ಅನ್ವಯಿಸಿ ಲಾಬಿ ನಡೆಯಲಿದೆ.

ಮೊದಲ ಬಾರಿ ಕಾರ್ಪೋರೇಟರ್ ಆದವರು

1. 5ನೆ ವಾರ್ಡ್ ನ ಅಯಾಝ್ (ಎಸ್ ಡಿಪಿಐ)
2. 6ನೆ ವಾರ್ಡ್ ನ ಗುಣಶೇಖರ್ ಶೆಟ್ಟಿ (ಬಿಜೆಪಿ)
3. 8ನೆ ವಾರ್ಡ್ ನ ಪ್ರತಿಭ ಕುಳಾಯಿ (ಕಾಂಗ್ರೆಸ್)
4. 10ನೆ ವಾರ್ಡ್ ನ ಪುರುಷೋತ್ತಮ ಪೂಜಾರಿ (ಕಾಂಗ್ರೆಸ್)
5. 11ನೆ ವಾರ್ಡ್ ನ ರಘುವೀರ್ (ಬಿಜೆಪಿ)
6. 12ನೆ ವಾರ್ಡ್ ನ ದಯಾನಂದ ಶೆಟ್ಟಿ (ಸಿಪಿಎಂ)
7. 20ನೆ ವಾರ್ಡ್ ನ ಹೇಮಲತ ಸಾಲ್ಯಾನ್ (ಬಿಜೆಪಿ)
8. 21ನೆ ವಾರ್ಡ್ ನ ಅಖಿಲ ಆಳ್ವ (ಕಾಂಗ್ರೆಸ್)
9. 23ನೆ ವಾರ್ಡ್ ನ ಕೆ. ರಾಜೇಶ್ (ಬಿಜೆಪಿ)
10. 24ನೆ ವಾರ್ಡ್ ನ  ರಜನೀಶ್ (ಕಾಂಗ್ರೆಸ್)
11. 26ನೆ ವಾರ್ಡ್ ನ ರಾಧಾಕೃಷ್ಣ (ಕಾಂಗ್ರೆಸ್)
12. 27ನೆ ವಾರ್ಡ್ ನ ಲತಾ ಸಾಲ್ಯಾನ್ (ಕಾಂಗ್ರೆಸ್)
13. 28ನೆ ವಾರ್ಡ್ ನ ಜಯಂತ ಆಚಾರ್ (ಬಿಜೆಪಿ)
14. 30ನೆ ವಾರ್ಡ್ ನ ಪ್ರಕಾಶ್ ಬಿ. ಸಾಲ್ಯಾನ್ (ಕಾಂಗ್ರೆಸ್)
15. 34ನೆ ವಾರ್ಡ್ ನ ಸಬಿತ ಮಿಸ್ಕಿತ್ (ಕಾಂಗ್ರೆಸ್)
16. 35ನೆ ವಾರ್ಡ್ ನ ಕೆ. ಝುಬೈದ (ಕಾಂಗ್ರೆಸ್)
17. 37ನೆ ವಾರ್ಡ್ ನ ಕೇಶವ (ಕಾಂಗ್ರೆಸ್)
18. 40ನೆ ವಾರ್ಡ್ ನ ಎ.ಸಿ. ವಿನಯರಾಜ್ (ಕಾಂಗ್ರೆಸ್)
19. 41ನೆ ವಾರ್ಡ್ ನ ಪೂರ್ಣಿಮಾ (ಬಿಜೆಪಿ)
20. 44ನೆ ವಾರ್ಡ್ ನ ರಮೀಝಾ ಬಾನು (ಜೆಡಿಎಸ್)
21. 45ನೆ ವಾರ್ಡ್ ನ ಅಬ್ದುಲ್ ಲತೀಫ್  (ಕಾಂಗ್ರೆಸ್)
22. 48ನೆ ವಾರ್ಡ್ ನ ಗ್ರೆಟ್ಟಾ ಆಶಾ ಡಿಸಿಲ್ವ (ಕಾಂಗ್ರೆಸ್)
23. 49ನೆ ವಾರ್ಡ್ ನ ಟಿ. ಪ್ರವೀಣ್ ಚಂದ್ರ ಆಳ್ವ (ಕಾಂಗ್ರೆಸ್)
24. 51ನೆ ವಾರ್ಡ್ ನ ಬಿ. ಪ್ರಕಾಶ್ (ಕಾಂಗ್ರೆಸ್)
25. 53ನೆ ವಾರ್ಡ್ ನ ಸುಮಯ್ಯ (ಕಾಂಗ್ರೆಸ್)
26. 54ನೆ ವಾರ್ಡ್ ನ ಸುರೇಂದ್ರ (ಬಿಜೆಪಿ)
27. 55ನೆ ವಾರ್ಡ್ ನ ಶೈಲಜಾ (ಕಾಂಗ್ರೆಸ್)
28. 57ನೆ ವಾರ್ಡ್ ನ ಕವಿತ (ಕಾಂಗ್ರೆಸ್)
29. 58ನೆ ವಾರ್ಡ್ ನ ರತಿಕಲ (ಕಾಂಗ್ರೆಸ್)
30. 60ನೆ ವಾರ್ಡ್ ನ ಮೀರ ಕರ್ಕೇರ (ಬಿಜೆಪಿ)

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English