ಮಂಗಳೂರು : ಪೊಲೀಸರು ಕಾನೂನಿನ ಬಗ್ಗೆ ಸ್ಪಷ್ಟ ಜ್ಞಾನ ಹೊಂದುವುದು ಆವಶ್ಯ. ಆಗ ಯಾವುದೇ ಕ್ಲಿಷ್ಟಕರ ಸನ್ನಿವೇಶಗಳನ್ನು ಸುಲಲಿತವಾಗಿ ನಿಭಾಯಿಸಲು ಸಾಧ್ಯ. ಇಲ್ಲವಾದರೆ ಮುಜುಗರದ ಸಂದರ್ಭ ಎದುರಿಸಬೇಕಾಗುತ್ತದೆ ಎಂದು ನಿವೃತ್ತ ಪೊಲೀಸ್ ಉಪಾಧೀಕ್ಷಕ ವಿಶ್ವನಾಥ ಪಂಡಿತ್ ಹೇಳಿದರು. ಅವರು ಮಂಗಳವಾರ ನಗರದ ಡಿ.ಎ.ಆರ್. ಪೊಲೀಸ್ ಕವಾಯತು ಮೈದಾನದಲ್ಲಿ ಜರಗಿದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ಹಾಗೂ ಕಲ್ಯಾಣ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಿವೃತ್ತರಾದ 61 ಪೊಲೀಸ್ ಅಧಿಕಾರಿಗಳು ಹಾಗೂ ಸಿಬಂದಿಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು. ನಿವೃತ್ತ ಪೊಲೀಸರ ಕಲ್ಯಾಣ ಕಾರ್ಯಕ್ರಮಕ್ಕಾಗಿ ಇರುವ ಪೊಲೀಸ್ ಧ್ವಜವನ್ನು ವಿಶ್ವನಾಥ ಪಂಡಿತ್ ಈ ಸಂದರ್ಭ ಬಿಡುಗಡೆಗೊಳಿಸಿದರು.
ಪೊಲೀಸ್ ಇಲಾಖೆ ಜತೆ ಸಾರ್ವಜನಿಕರು ಸಹಕಾರ ನೀಡಿದಾಗ ಅಧಿಕಾರಿಗಳು ಮತ್ತಷ್ಟು ಪರಿಣಾಮಕಾರಿ ಮತ್ತು ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ ಹೇಳಿದರು.
ಮಂಗಳೂರು ಪೊಲೀಸ್ ಕಮಿಷನರ್ ಮನೀಶ್ ಖರ್ಬಿಕರ್, ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಅಭಿಷೇಕ್ ಗೋಯೆಲ್, ಕೆಎಸ್‌ಆರ್‌ಪಿ ಕಮಾಂಡೆಂಟ್ ರಾಮದಾಸ್ ಗೌಡ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English