ಮಂಗಳೂರು : ಮಂಗಳೂರು ಸಹಿತ ಕರ್ನಾಟಕದಲ್ಲಿ ಕಳೆದ ಐದು ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ಸುಖಶಾಂತಿ, ನೆಮ್ಮದಿ ನೆಲೆಸಿದೆ. ಹಿಂದೆ ಮಂಗಳೂರಿನಿಂದ ಕೋಮು ಗಲಭೆ, ಕರ್ಫ್ಯೂ ಸುದ್ದಿಗಳೆ ಕೇಳಿಬರುತ್ತಿದ್ದು ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಶಾಂತಿ ನೆಲೆಸಿಲ್ಲವೆ?, ಗಲಭೆ ನಿಂತು ಸಹೋದರ ಭಾವನೆಯನ್ನು ಸೃಷ್ಟಿ ಮಾಡಿಲ್ಲವೆ, ಬಿಜೆಪಿ ಆಡಳಿತಕ್ಕೆ ಬಂದರೆ ಸುಖ ಶಾಂತಿ ಸಾಧ್ಯ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದರು.
ಅವರು ನಗರದ ನೆಹರು ಮೈದಾನದಲ್ಲಿ ಗುರುವಾರ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಕನ್ನಡ ಭಾಷೆಯನ್ನು ಕಲಿತ್ತಿದ್ದರೆ, ಕನ್ನಡದಲ್ಲಿಯೇ ಮಾತನಾಡುತ್ತಿದ್ದೆ ಎಂದು ಹಿಂದಿಯಲ್ಲಿ ಭಾಷಣ ಆರಂಭಿಸಿದ ಮೋದಿಯವರು ಬಿಜೆಪಿ ಮತ ಯಾಚಿಸುವಾಗ ರಾಜ್ಯದಲ್ಲಿ ಕಳೆದ ಐದು ವರ್ಷದಲ್ಲಿ ಮಾಡಿರುವ ಸಾಧನೆಯ ಲೆಕ್ಕ ಕೊಡುತ್ತಿದ್ದೇವೆ. ಇದೇ ಮಾದರಿಯಲ್ಲಿ ಕೇಂದ್ರ ಸರ್ಕಾರ ಮಾಡಿರುವ ಸಾಧನೆಗಳ ಲೆಕ್ಕ ಕೊಡಲಿ, ಅಭಿವೃದ್ಧಿ ಮಾಡದ ಕೇಂದ್ರ ಸರ್ಕಾರ ಲೆಕ್ಕ ಕೊಡುವುದಾದರು ಹೇಗೆ ಎಂದು ಅವರು ಪ್ರಶ್ನಿಸಿದರು. ಭಾಷಣದುದ್ದಕ್ಕೂ ಪ್ರೇಕ್ಷಕರ ಬಳಿ ಪ್ರಶ್ನೆಗಳನ್ನು ಕೇಳುತ್ತಿದ್ದ ಅವರು ತಮ್ಮ ಮಾತಿನ ಮೂಲಕ ಒಂದೆಡೆ ದೇಶದ ಸಮಸ್ಯೆಗಳನ್ನು ವಿಶ್ಲೇಷಿಸುತ್ತಾ ಇನ್ನೊಂದೆಡೆ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು.
ಈ ಹಿಂದೆ ಅನೇಕ ಬಾರಿ ಮಂಗಳೂರಿಗೆ ಬಂದಿದ್ದನ್ನು ನೆನಪಿಸಿಕೊಂಡ ಮೋದಿ ಈ ಬಾರಿಯ ಇಲ್ಲಿನ ಪ್ರಗತಿ ತಮಗೆ ಅಪಾರ ಸಂತಸವನ್ನುಂಟುಮಾಡಿದೆ ಎಂದರು. ಈ ಸಂದರ್ಭ ಅವರು ಕರಾವಳಿಯ ಅಡಕೆ ಕೃಷಿಕರು ಸಂಕಷ್ಟದಲ್ಲಿದ್ದಾಗ ಬಿಜೆಪಿ ಮುಖಂಡರು ಗುಜರಾತ್ ಗೆ ಬಂದಿದ್ದು, ಕೂಡಲೇ ತೆರಿಗೆ ನೀತಿಯನ್ನು ಸಡಿಲಗೊಳಿಸಿ ಸಮಸ್ಯೆ ಪರಿಹರಿಸಿದ್ದಾಗಿ ಮತ್ತು ಇಲ್ಲಿನ ಅಡಿಕೆಯ ಗರಿಷ್ಟ ಖರೀದಿಯನ್ನು ಗುಜರಾತ್ ನಡೆಸುತ್ತದೆ ಎಂದರು.
ಸ್ಥಳಿಯ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾದ ಬಗ್ಗೆ ಪ್ರಸ್ತಾಪಿಸಿದ ಅವರು ಬಿಜೆಪಿ ಬಗ್ಗೆ ಮತದಾರರಿಗೆ ಕೋಪವಿದ್ದು ಅದನ್ನು ಸ್ಥಳೀಯ ಚುನಾವಣೆಯಲ್ಲಿ ತೋರ್ಪಡಿಸಿದ್ದರು. ಆದರೆ ಇದೀಗ ಕೋಪ ಶಮನವಾಗಿದ್ದು ಈ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು. ಜನತೆಗೆ ಕಾಂಗ್ರೆಸ್‌ನ ಒಡೆದು ಆಳುವ ಧೋರಣೆಯ ‘ಓಟ್ ಬ್ಯಾಂಕ್ ರಾಜನೀತಿ’ ಬೇಕೇ ? ಬಿಜೆಪಿಯ ಸಮಷ್ಠಿಯ ಹಿತಾಸಕ್ತಿ ‘ವಿಕಾಸ್‌ಕೀ ರಾಜನೀತಿ’ ಬೇಕೇ? ಎಂದು ನರೇಂದ್ರ ಮೋದಿ ಪ್ರಶ್ನಿಸಿದರು. ಕರ್ನಾಟಕ ಮತ್ತು ಹಿಂದೂಸ್ಥಾನದ ರಕ್ಷಣೆಗಾಗಿ ಕಾಂಗ್ರೆಸ್ ಸಂಪೂರ್ಣ ನಿರ್ಮೂಲನವಾಗಬೇಕು. ಮತದಾರರು ಜಾಗೃತರಾಗಿದ್ದಾರೆ. ಬಿಜೆಪಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಎಂದು ಕೋರಿದರು.
ಕಾಂಗ್ರೆಸ್ ಪಕ್ಷ ತಮ್ಮ ಮುಂದಿನ ಮುಖ್ಯಮಂತ್ರಿ ಹೆಸರು ಘೋಷಿಸಲು ಸಿದ್ಧ ಇಲ್ಲ. ಚುನಾವಣೆಗೆ ಮೊದಲೇ ಗೊಂದಲ ಇರುವ ಪಕ್ಷದಲ್ಲಿ ಚುನಾವಣೆ ನಂತರ ಎಂತಹ ಪರಿಸ್ಥಿತಿ ಇರಬಹುದು ಎಂಬುದನ್ನು ನೀವೇ ಊಹಿಸಿಕೊಳ್ಳಿ. ಕಾಂಗ್ರೆಸ್-ಬಿಜೆಪಿಯನ್ನು ತುಲನೆ ಮಾಡಿಕೊಂಡು, ದೇಶ ಯಾರ ಕೈಯಲ್ಲಿ ಕೊಟ್ಟರೆ ಸುರಕ್ಷಿತ ಎಂಬುದನ್ನು ನಿರ್ಧರಿಸಿಕೊಳ್ಳಿ ಎಂದು ಜನರನ್ನು ಪ್ರಶ್ನಿಸಿದರು.
ಕಾಂಗ್ರೆಸ್ ಸಚಿವ ಜನಾರ್ಧನ ಪೂಜಾರಿಯವರ ಮಾತಿಗೆ ತಿರುಗೇಟು ನೀಡಿದ ಮೋದಿ ಕಾಂಗ್ರೆಸ್ ನ ನಾಯಕರೊಬ್ಬರು ಮೋದಿ ಮಂಗಳೂರಿಗೆ ಬರುವುದಿಲ್ಲ, ತಾಕತ್ತಿದ್ದರೆ ಮಂಗಳುರಿಗೆ ಬರಲಿ ಎಂದಿದ್ದರು ಆದರೆ ನಾನೀಗ ಇಲ್ಲಿಗೆ ಬಂದಿದ್ದೇನೆ. ಕಾಂಗ್ರೆಸ್ಸಿಗರು ಹೇಳುವ ಪ್ರತಿ ಮಾತು ಸುಳ್ಳಾಗಲಿದ್ದು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎನ್ನುತ್ತಿದ್ದಾರೆ ಆದರೆ ಈ ಬಾರಿ ಅದು ಕೂಡ ಸುಳ್ಳಾಗಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಎಸ್.ಅಂಗರ, ಅಭ್ಯರ್ಥಿ ಉಮಾನಾಥ ಕೋಟ್ಯಾನ್, ಮುಖಂಡರಾದ ಪ್ರತಾಪ್‌ಸಿಂಹ ನಾಯಕ್, ಬಿ. ನಾಗರಾಜ ಶೆಟ್ಟಿ, ವಿಧಾನಸಭೆ ಚುನಾವಣೆ ಅಭ್ಯರ್ಥಿಗಳಾದ ಜೆ. ಕೃಷ್ಣ ಪಾಲೆಮಾರ್, ಎನ್. ಯೋಗೀಶ್ ಭಟ್, ಚಂದ್ರಹಾಸ್ ಉಳ್ಳಾಲ್, ರಾಜೇಶ್ ನಾಯ್ಕ, ಸಂಜೀವ ಮಟಂದೂರು, ರಂಜನ್ ಗೌಡ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಮಲ್ಲಿಕಾ ಪ್ರಸಾದ್ ಭಂಡಾರಿ, ಮೋನಪ್ಪ ಭಂಡಾರಿ, ಗಣೇಶ್ ಕಾರ್ಣಿಕ್, ಮುಂಖಂಡರಾದ ಸುಲೋಚನಾ ಜಿ.ಕೆ. ಭಟ್, ಉದಯಕುಮಾರ್ ಶೆಟ್ಟಿ, ಸತೀಶ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English