ಮಂಗಳೂರು : ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಹಾಗೂ ದಸರಾ ಸೇರಿದಂತೆ ಸಾಲು ಸಾಲು ಹಬ್ಬಗಳು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳುವಂತೆ ಶಾಸಕ ವೇದವ್ಯಾಸ ಕಾಮತ್ ಅವರು ಜಿಲ್ಲಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ನಗರದ ಸಂಪರ್ಕ ರಸ್ತೆಗಳ ನಿರ್ಮಾಣ ಹಾಗೂ ದುರಸ್ತಿ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು, ಶೋಭಾಯಾತ್ರೆ ಸಾಗುವ ಮಾರ್ಗಗಳ ರಸ್ತೆ ವಿಭಜಕ ಹಾಗೂ ಫುಟ್ಪಾತ್ಗಳಿಗೆ ಬಣ್ಣ ಬಳಿಯುವುದು, ಸೂಕ್ತ ದಾರಿದೀಪ ಮತ್ತು ವಿದ್ಯುತ್ ಅಲಂಕಾರದ ವ್ಯವಸ್ಥೆ ಮಾಡುವುದು ಅವರ ಪ್ರಮುಖ ಬೇಡಿಕೆಯಾಗಿದೆ. ಇದಲ್ಲದೆ, ರಸ್ತೆ ಬದಿಯ ಕಸ ಹಾಗೂ ಮಣ್ಣನ್ನು ತೆರವುಗೊಳಿಸುವುದು, ಶೋಭಾಯಾತ್ರೆಗೆ ಅಡ್ಡಿಯಾಗುವ ಮರದ ಗೆಲ್ಲುಗಳನ್ನು ಅರಣ್ಯ ಇಲಾಖೆಯ ನಿಯಮಾವಳಿಗಳಂತೆ ಕತ್ತರಿಸುವುದು ಮತ್ತು ಹಬ್ಬ ಮುಗಿದ ನಂತರ ಅಂಗಡಿ-ಮಳಿಗೆಯವರು ಬಿಟ್ಟುಹೋಗುವ ಅನಗತ್ಯ ವಸ್ತುಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಶೇಷವಾಗಿ ಕೊಟ್ಟಾರ ಚೌಕಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ, ಉರ್ವ, ಲಾಲ್ಭಾಗ್, ಕೆಎಸ್ಆರ್ಟಿಸಿ ಜಂಕ್ಷನ್, ಕುದ್ರೋಳಿ ದೇವಸ್ಥಾನದ ಆವರಣ, ಸೂಟರ್ಪೇಟೆ, ಅಶೋಕನಗರ, ಗೋವಿಂದ ಪೈ ವೃತ್ತ, ಕಾರ್ ಸ್ಟ್ರೀಟ್, ಡೊಂಗರಕೇರಿ, ಮಂಗಳಾದೇವಿ, ಎಮ್ಮೆಕೆರೆ ಕ್ರಾಸ್, ಬೋಳಾರ ಹಾಗೂ ದೇವರಪದವು-ಅಂಬೇಡ್ಕರ್ ಕಾಲೋನಿ ಸೇರಿದಂತೆ ನಗರದ ಪ್ರಮುಖ ಪ್ರದೇಶಗಳಲ್ಲಿ ಈ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ವಿಳಂಬವಿಲ್ಲದೆ ಶೀಘ್ರವಾಗಿ ಕೈಗೊಳ್ಳಬೇಕೆಂದು ಶಾಸಕರು ಒತ್ತಾಯಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









