ಮಂಗಳೂರು : ಮಂಗಳೂರಿನ ಜಮಿಯತುಲ್ ಸಾ-ಅದಾ (ಮಾಂಸ ವ್ಯಾಪಾರಸ್ತರ ಸಂಘ) ವತಿಯಿಂದ 1ರಿಂದ 10ನೆ ತರಗತಿಯ ವರೆಗಿನ 900 ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸುವ ಕಾರ್ಯಕ್ರಮ ಇಂದು ಕುದ್ರೋಳಿಯ ಏಒನ್ ಬಾಗ್ ನಲ್ಲಿರುವ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂದರ್ ಠಾಣೆಯ ಇನ್ಸ್ ಪೆಕ್ಟರ್ ವಿ.ಟಿ. ಸುಬ್ರಹ್ಮಣ್ಯ ಮಾತನಾಡಿ, ಓದು ಬರಹ ಇಲ್ಲದ ವ್ಯಕ್ತಿಗೆ ಕಾನೂನಿನ ಅರಿವು ಇರುವುದಿಲ್ಲ. ಇಂತಹವರು ಸಮಾಜದಲ್ಲಿ ತಪ್ಪು ಹೆಜ್ಜೆಗಳನ್ನು ಇಡುತ್ತಾರೆ. ಜ್ಞಾನವೇ ಆಸ್ತಿ, ಅದನ್ನು ಗಳಿಸಲು ಶ್ರಮಿಸಿರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಎಐಸಿಸಿ ಸದಸ್ಯ ಪಿ.ವಿ.ಮೋಹನ್ ಮಾತನಾಡಿ, ಜ್ಞಾನ ಸಂಪಾದನೆಗಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಮಾಂಸ ವ್ಯಾಪಾರಸ್ಥರ ಸಂಘದ ರಾಜ್ಯ ಉಪಾಧ್ಯಕ್ಷ ಅಲಿ ಹಸನ್, ಪುಸ್ತಕ ವಿತರಣೆಯಲ್ಲಿ ಗ್ರಾಮೀಣ ಮತ್ತು ಆಂಗ್ಲ ಮಾಧ್ಯಮೇತರ ವಿದ್ಯಾರ್ಥಿಗಳಿಗೆ ಆಧ್ಯತೆ ನೀಡಲಾಗಿದೆ. ಸಾಮಾಜಿಕ ಜವಾಬ್ದಾರಿಯ ಕೆಲಸವನ್ನು ನಮ್ಮ ಸಂಘಟನೆ ಮಾಡುತ್ತಿದೆ ಎಂದರು.
ಕುದ್ರೋಳಿ ವಾರ್ಡ್ ಕಾರ್ಪೋರೇಟರ್ ಅಝೀಝ್ ಕುದ್ರೋಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಟೋ ಚಾಲಕರ ಸಂಘದ ನಾಯಕ ಪ್ರಕಾಶ್, ಅಮಲು ಚಿಕಿತ್ಸಾ ಶಿಬಿರದ ಆಡಳಿತಾಧಿಕಾರಿ ಲಬಿಯಾ ಲೋಬೊ, ಜಮಿಯತುಲ್ ಸಾ-ಅದಾ ಸಂಘಟನೆ ಪ್ರಮುಖ ಜಿ.ಅಬ್ದುಲ್ ಖಾದರ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English