ಬೆಳ್ತಂಗಡಿ : ಬೆಳ್ತಂಗಡಿ ಶಾಸಕ ವಸಂತ ಬಂಗೇರ ಅವರು ವಿಧಾನಸಭೆಯಲ್ಲಿ ಮೇ 30ರಂದು ತುಳುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅದರೆ, ಆ ಸಂದರ್ಭದಲ್ಲಿ ಹಂಗಾಮಿ ಸ್ಪೀಕರ್ ಆಗಿದ್ದ ಮಾಲೀಕಯ್ಯ ಗುತ್ತೇದಾರ್ ಅವರು ತುಳುಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಲ್ಲ. ನೀವು ತುಳು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಅದು ಅಸಿಂಧುವಾಗಲಿದೆ ಎಂದಿದ್ದರು.
ಶಾಸಕ ವಸಂತ ಬಂಗೇರ ಅವರು ತುಳು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಭಾಷೆಯ ಅಸ್ತಿತ್ವ ಹಾಗೂ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ. ಇದು ತುಳುವರ ಸ್ವಾಭಿಮಾನಕ್ಕೆ ಸಿಕ್ಕ ಗೌರವವಾಗಿದೆ. ಕಾನೂನು ಪ್ರಕಾರ ಬಂಗೇರ ಅವರು ತಪ್ಪ್ಪು ಎಸಗಿದ್ದಾರೆ ಎಂದು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಲ್ಲ ಎಂದು ಸ್ಪೀಕರ್ ಹೇಳಿರುವುದು ತುಳುವರ ಭಾಷಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ತುಳುನಾಡ್ ಒಕ್ಕೂಟ ಕಿಡಿಕಾರಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಉಮಾನಾಥ ಎ. ಕೋಟ್ಯಾನ್ ಅವರು ಬಂಗೇರ ಅವರ ಕ್ರಮವನ್ನು ಸಮರ್ಥಿಸಿದ್ದರು. ಮೂರು ಜಿಲ್ಲೆಗಳ 75 ಲಕ್ಷ ಮಂದಿಯ ಮಾತೃಭಾಷೆ. ಮರಾಠಿ ಭಾಷೆಯ ಪ್ರತಿಜ್ಞೆಗೆ ಅವರು ಆಕ್ಷೇಪ ವ್ಯಕ್ತಪಡಿಸಬೇಕಿತ್ತು. ತುಳುವಿಗೆ ಸಾಂವಿಧಾನಿಕ ಮಾನ್ಯತೆ ಸಿಕ್ಕಿಲ್ಲ ಎಂದಾದರೆ, ಅದು ಆಡಳಿತದ ವಿಳಂಬ ಎಂದು ಪ್ರತಿಕ್ರಿಯಿಸಿದ್ದರು. ಸಂಸದ ನಳೀನ್ ಕುಮಾರ್ ಕಟೀಲ್ ಕೂಡಾ ಇದಕ್ಕೆ ದನಿಗೂಡಿಸಿದ್ದಾರೆ.
ಈ ಹಿಂದೆ ಡಿ.ವಿ. ಸದಾನಂದ ಗೌಡರು ಸಂಸತ್ತಿನಲ್ಲಿ ತುಳುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಲು ಮುಂದಾದಾಗಲೂ ಇದೇ ಸಮಸ್ಯೆ ಉಂಟಾಗಿತ್ತು.
ಕೇರಳ ವಿಧಾನಸಭೆಯಲ್ಲಿ ಮಂಜೇಶ್ವರ ಶಾಸಕರು ತುಳುವಿನಲ್ಲೇ ಪ್ರಮಾಣವಚನ ಸ್ವೀಕರಿಸಿದ್ದಾರೆ ಹಾಗೂ ಅದು ಸಿಂಧುವಾಗಿದೆ ಎಂಬುದು ಗಮನಾರ್ಹ.
ಚಾರಿತ್ರಿಕ, ಸಾಂಸ್ಕೃತಿಕ, ಸಾಹಿತ್ಯಿಕ ಹಿನ್ನೆಲೆ ಇರುವ ತುಳುವಿಗೆ ಸಾಂವಿಧಾನಿಕ ಮಾನ್ಯತೆ ಸಿಗಲೇಬೇಕಾದ ಅನಿವಾರ್ಯತೆ ಈಗ ಎದುರಾಗಿದೆ.
ವಿಧಾನಸಭೆ ಕಲಾಪ ಆರಂಭವಾಗುವ ಅರ್ಧ ಗಂಟೆ ಮೊದಲೇ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬ ಮನವಿ ಪತ್ರವನ್ನು ನಾನು ಸ್ಪೀಕರ್ ಅವರಿಗೆ ಕಳುಹಿಸಿಕೊಟ್ಟಿದ್ದೆ. ಬಳಿಕ ತುಳುವಿನಲ್ಲೇ ಪ್ರಮಾಣವಚನ ಓದಿದೆ. ಆಕ್ಷೇಪ ಬಂದ ಕಾರಣ ಇನ್ನೇನು ಮಾಡಬೇಕೆಂದು ಕೇಳಿದೆ. ಮತ್ತೊಮ್ಮೆ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವಂತೆ ಸೂಚಿಸಿದರು. ಅದರ ಪ್ರಕಾರ ನಡೆದುಕೊಂಡೆ. ನಾನು ತುಳುನಾಡಿನವನಾದ ಕಾರಣ ತುಳುವಿನಲ್ಲಿ ಪ್ರಮಾಣವಚನ ಸ್ವೀಕರಿಸಲು ನಿರ್ಧರಿಸಿದೆ. ಹಿಂದೆ 1983ರಲ್ಲಿ ಮೊದಲ ಬಾರಿ ಶಾಸಕಾಗಿದ್ದಾಗಲೂ ತುಳುವಿನಲ್ಲೇ ಪ್ರಮಾಣವಚನ ಸ್ವೀಕರಿಸಿದ್ದೆ. ಆಗ ಬಾರದ ಆಕ್ಷೇಪ ಈಗೇಕೆ ಎಂದು ಕೇಳಿದೆ. ಆದರೆ ನಿಯಮ ಪ್ರಕಾರ ಸಾಧ್ಯವಿಲ್ಲ ಎಂದು ಸ್ಪೀಕರ್ ಉತ್ತರಿಸಿದರು
ತುಳುವರು ಬಹುಕಾಲದಿಂದ ಕಾಯುತ್ತಿರುವ ಎಂಟನೇ ಪರಿಚ್ಛೇದಕ್ಕೆ ತುಳು ಭಾಷೆ ಸೇರ್ಪಡೆ ಬೇಡಿಕೆ ಶೀಘ್ರದಲ್ಲಿ ಈಡೇರುವ ಕಾಲ ಸನ್ನಿಹಿತವಾಗಿದೆ. ಸದ್ಯದಲ್ಲೇ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ತುಳು ಭಾಷೆ ಸೇರ್ಪಡೆಯಾಗಲಿದೆ ಎಂದು ಕೇಂದ್ರ ಸಚಿವ ಎಂ ವೀರಪ್ಪ ಮೊಯ್ಲಿ ಭರವಸೆ ನೀಡಿದ್ದಾರೆ.
Click this button or press Ctrl+G to toggle between Kannada and English