ಬೆಂಗಳೂರು : ಸಾರಿಗೆ ಇಲಾಖೆ ವಾಹನಗಳಿಗೆ ಕೆಂಪು ದೀಪ ಅಳವಡಿಸಿಕೊಳ್ಳಲು ಹೊಸ ಅಧಿಸೂಚನೆಯನ್ನು ಹೊರಡಿಸಿದೆ. ಅದರಂತೆ ಕೇವಲ ಕೆಂಪು ದೀಪ ಅಳವಡಿಸಲು ಅವಕಾಶವಿರುವುದು ಅತಿಗಣ್ಯರಿಗೆ ಮಾತ್ರ.
ಸುಪ್ರೀಂ ಕೋರ್ಟ್ 2010ರಲ್ಲೇ ಈ ಕುರಿತು ಆದೇಶ ಹೊರಡಿಸಿದ್ದರೂ ಹಿಂದಿನ ಸರ್ಕಾರ ಈ ನಿಟ್ಟಿನಲ್ಲಿ ಮೇಲ್ನೋಟಕ್ಕೆ ಆದೇಶ ಹೊರಡಿಸಿ ಸುಮ್ಮನಾಗಿತ್ತು. ಆ ಆದೇಶಗಳಲ್ಲೇ ಕೆಲವು ಲೋಪಗಳಿದ್ದುದರಿಂದ ಬೇಕಾಬಿಟ್ಟಿ ಕೆಂಪು ದೀಪ ಬಳಕೆಗೆ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ.
ಸಾರಿಗೆ ಇಲಾಖೆ ಇದೀಗ ಕೆಂಪು ದೀಪ ಅಳವಡಿಸುವ ಕುರಿತಂತೆ ಈ ಹಿಂದೆ ಹೊರಡಿಸಿದ್ದ ಎಲ್ಲಾ ಅಧಿಸೂಚನೆಗಳನ್ನು ಹಿಂದಕ್ಕೆ ಪಡೆದು ಹೊಸ ಆದೇಶ ಹೊರಡಿಸಿದೆ. ಈ ಮೂಲಕ ಯಾವ್ಯಾವ ಅತಿ ಗಣ್ಯ ವ್ಯಕ್ತಿಗಳು ಈ ಕೆಂಪು ದೀಪಗಳನ್ನು ತಮ್ಮ ವಾಹನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳಿದೆ.
ಸಾರಿಗೆ ಇಲಾಖೆ ಹೊರಡಿಸಿರುವ ಹೊಸ ಆದೇಶದಂತೆ ರಾಜ್ಯಪಾಲರು, ಮುಖ್ಯಮಂತ್ರಿಗಳು, ಮಂತ್ರಿಮಂಡಲದ ಸದಸ್ಯರು, ವಿಧಾನಸಭೆ ಅಧ್ಯಕ್ಷರು, ವಿಧಾನ ಪರಿಷತ್ ಸಭಾಪತಿಗಳು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹಾಗೂ ನ್ಯಾಯಮೂರ್ತಿಗಳು ಮಾತ್ರ ತಮ್ಮ ವಾಹನಗಳಲ್ಲಿ ಕೆಂಪು ದೀಪ ಬಳಸಬಹುದು.
ಆದರೆ, ಸಚಿವರ ಸ್ಥಾನಮಾನ ಹೊಂದಿರುವ ನಿಗಮ- ಮಂಡಳಿ, ಪ್ರಾಧಿಕಾರದ ಅಧ್ಯಕ್ಷರು, ಮುಖ್ಯಸ್ಥರು, ಹೈಕೋರ್ಟ್ ನ್ಯಾಯಮೂರ್ತಿಗಳ ಸ್ಥಾನಮಾನ ಹೊಂದಿರುವ ನ್ಯಾಯಮಂಡಳಿ, ಆಯೋಗಗಳ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಅಧಿಕೃತ ವಾಹನಗಳಲ್ಲಿ ಕೆಂಪು ದೀಪಗಳನ್ನು ಅಳವಡಿಸಿಕೊಳ್ಳುವಂತಿಲ್ಲ. ಅಷ್ಟೇ ಅಲ್ಲ, ಐಎಎಸ್, ಐಪಿಎಸ್ ಸೇರಿದಂತೆ ಯಾವುದೇ ಮೇಲಧಿಕಾರಿಗಳು, ಗಣ್ಯರು ಕೂಡ ಇದನ್ನು ಬಳಸುವಂತಿಲ್ಲ. ಇನ್ನೊಂದೆಡೆ ಪ್ರತಿಷ್ಠಿತ ವ್ಯಕ್ತಿಗಳ ಭದ್ರತೆಗೆ ಉಪಯೋಗಿಸುವ ಪೊಲೀಸ್ ಎಸ್ಕಾರ್ಟ್ಗಳು ಕೂಡ ಕೆಂಪು ದೀಪ ಬಳಸುವಂತಿಲ್ಲ. ಅದರ ಬದಲಾಗಿ ನೀಲಿ ಬಣ್ಣದ ದೀಪ ಅಳವಡಿಸಬೇಕು ಎಂದು ಸಾರಿಗೆ ಇಲಾಖೆ ಆದೇಶದಲ್ಲಿ ತಿಳಿಸಿದೆ.
Click this button or press Ctrl+G to toggle between Kannada and English