ಮಂಗಳೂರು : ಸುಳ್ಯ ತಾಲೂಕಿನ ಯೇನೆಕಲ್ ಗ್ರಾಮದ ಮಂಜುನಾಥ್ ಅವರ ಪರಿಶ್ರಮದ ಹೆಜ್ಜೆಗಳ ಸಾಕ್ಷ್ಯ ಚಿತ್ರದ ಬಿಡುಗಡೆ ಸಮಾರಂಭವು ಶನಿವಾರ ನಗರದ ಎಸ್‌ಡಿಸಿಸಿ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ನೆರವೇರಿತು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಸಾಕ್ಷ್ಯ ಚಿತ್ರವನ್ನು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ರಾಜೇಂದ್ರ ಕುಮಾರ್ ಅವರು ಮಂಜುನಾಥನ ಮುಂದಿನ ವಿಧ್ಯಾಭ್ಯಾಸಕ್ಕಾಗಿ ಎಸ್.ಡಿ.ಸಿ.ಸಿ ಬ್ಯಾಂಕ್ ವತಿಯಿಂದ ರೂ. 50 ಸಾವಿರ ಸಹಾಯ ಧನವನ್ನು ನೀಡಿದರು.
ಯಾವೂದೇ ಸೌಲತ್ತುಗಳಿಲ್ಲದ ಒಂದು ಹಳ್ಳಿಯಲ್ಲಿ ಹುಟ್ಟಿ, ತನ್ನ ಕಡು ಬಡತನವನ್ನು ಲೆಕ್ಕಿಸದೆ, ಇಷ್ಟು ಚಿಕ್ಕ ಪ್ರಾಯದಲ್ಲಿ ವಿಜ್ನಾನಿಯಾಗುವ ಬಯಕೆಯನ್ನು ಹೊಂದಿರುವ ಮಂಜುನಾಥನ ಸಾಧನೆ ಅಧ್ಬುತ ಎಂದು ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು .
ಕಡು ಬಡತನದಲ್ಲಿ ಓದಿ ಭುವನೇಶ್ವರದ ಐಐಟಿಗೆ ಅಯ್ಕೆಯಾದ ಹಳ್ಳಿ ಹುಡುಗ ಮಂಜುನಾಥನ ಮುಂದಿನ ಎಲ್ಲಾ ಸಾಧನೆಗಳಿಗೆ ಪೂರ್ಣ ಸಹಕಾರ ನೀಡುವುದಾಗಿ ರಾಜೇಂದ್ರ ಕುಮಾರ್ ಹೇಳಿದರು.
ಅನುಗ್ರಹ ಎಜುಕೇಶನ್ ಟ್ರಸ್ಟ್ ಕುಕ್ಕೆ ಸುಬ್ರಹ್ಮಣ್ಯ ಇದರ ಅಧ್ಯಕ್ಷ ಗಣೇಶ್ ಪ್ರಸಾದ್ ಅವರು ಮಂಜುನಾಥ್ ತನ್ನ ವಿಧ್ಯಾಬ್ಯಾಸಕ್ಕಾಗಿ ಅಗತ್ಯವಿರುವ ಸೌಲತ್ತುಗಳನ್ನು ತಾನೇ ರೂಪಿಸಿಕೊಂಡು, ಶಿಕ್ಷಕರಲ್ಲಿ ಪ್ರತಿಯೊಂದು ವಿಷಯದ ಬಗ್ಗೆ ಕೇಳಿ ತಿಳಿದು ಕೊಳ್ಳುವ ಮನೋಭಾವವನ್ನು ಬೆಳೆಸಿಕೊಂಡು ಬಂದಿದ್ದಾನೆ ಎಂದು ಮಂಜುನಾಥ್ ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು.
ಹಳ್ಳಿಯ ಜೀವನ ಶೈಲಿಯನ್ನು ಮೈಗೂಡಿಸಿಕೊಂಡು ಹಳ್ಳಿಯಲ್ಲಿ ಎಲ್ಲಾ ತರದ ಕೆಲಸಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾನೆ. ಮಾತ್ರವಲ್ಲದೇ ತಮ್ಮ ಗ್ರಾಮದಲ್ಲಿ ಪ್ರತಿಯೊಬ್ಬರ ಮನಗೆದ್ದು, ಎಲ್ಲರ ಪಾಲಿಗೆ ಮನೆಯ ಮಗನಾಗಿ ಗುರುತಿಸಿಕೊಂಡಿದ್ದಾನೆ ಎಂದು ಟ್ರಸ್ಟ್‌ನ ಉಪಾಧ್ಯಕ್ಷ ಶಿವರಾಮ ಯೇನೆಕಲ್ ಅವರು ಮಂಜುನಾಥ್ ಸಾಧನೆಗಳನ್ನು ಹೇಳಿದರು.
ತಮ್ಮಲ್ಲರ ಪ್ರೋತ್ಸಾಹಕ್ಕೆ ಚಿರಋಣಿಯಾಗಿದ್ದೇನೆ. ತಾವೆಲ್ಲಾ ನನ್ನ ಮೇಲೆ ಇಟ್ಟಿರುವ ಭರವಸೆಯನ್ನು ಸುಳ್ಳು ಮಾಡದೇ ಸತತ ಸಾಧನೆಗಳ ಮೂಲಕ ಜಿಲ್ಲೆಗೆ ಹೆಸರು ತರುವಂತಹ ಉತ್ತಮ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತೇನೆ ಎಂದು ಮಂಜುನಾಥ್ ಅವರು ಹೇಳಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸ್ವಾಗತಿಸಿ, ಪ್ರಸ್ತಾವನೆಗೈದರು.
Click this button or press Ctrl+G to toggle between Kannada and English