ಮಂಗಳೂರು : ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ಅಸಮರ್ಥ ವ್ಯಕ್ತಿಯಾಗಿದ್ದು, ಅವರ ಸಿದ್ದಾಂತಗಳು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಅಪಾಯಕಾರಿಯಾಗಿರದೆ ಎಲ್ಲಾ ಸಮುದಾಯಗಳಿಗೂ ಅಪಾಯಕಾರಿಯಾಗಿದೆ. ಮೋದಿ ತನ್ನ ಹುಸಿ ಮಾತುಗಳಿಂದ ದೇಶವನ್ನು ಮೋಸ ಮಾಡಲು ಪ್ರಯತ್ನಿಸುತ್ತಿದ್ದಾರೆ , ಮೋದಿ ಓರ್ವ ‘ಸುಳ್ಳಿನ ಸರದಾರ’ ಎಂದು ಕಾಂಗ್ರೆಸ್ ಮುಖಂಡ ಬಿ. ಜನಾರ್ಧನ ಪೂಜಾರಿ ಹೇಳಿದ್ದಾರೆ.
ಮಂಗಳವಾರ ಕಾಂಗ್ರೆಸ್ಸ್ ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರ ಸಿದ್ದಾಂತಗಳಿಗೆ ಬಿಜೆಪಿಯ ಉನ್ನತ ಮಟ್ಟದ ನಾಯಕರಿಂದಲೇ ವಿರೋಧ ವ್ಯಕ್ತವಾಗಿದೆ. ಅಡ್ವಾಣಿಯವರು ಕೂಡ ಮೋದಿ ಅಯ್ಕೆಯನ್ನು ಬಲವಾಗಿ ವಿರೋಧಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಗೋದ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಮಾದ್ಯಮವೊಂದಕ್ಕೆ ಹೇಳಿಕೆ ನೀಡುವ ಸಂದರ್ಭದಲ್ಲಿ ನರೇಂದ್ರ ಮೋದಿಯವರು ನಾಯಿಮರಿಯ ಉದಾಹರಣೆಯನ್ನು ನೀಡಿರುವುದು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತಾಗಿದೆ ಎಂದು ಅರೋಪಿಸಿದರು.
ಮೋದಿಯವರನ್ನು ಪ್ರಧಾನಿ ಹುದ್ದೆಗೇರಲು ಭಾರತದ ಪ್ರಜ್ಞಾವಂತ ನಾಗರಿಕರು ಅವಕಾಶ ಮಾಡಿಕೊಡುವುದಿಲ್ಲ ಎಂಬ ನಂಬಿಕೆ ನನಗಿದೆ. ಕರ್ನಾಟಕದ ಬಿಜೆಪಿ ಮುಖಂಡರು ಮೋದಿಯನ್ನು ವಿಧಾನ ಸಭಾ ಚುನಾವಣೆಯ ಪ್ರಚಾರಕ್ಕೆ ಕರೆದುಕೊಂಡು ಬಂದು ತಮ್ಮ ಸಮಾಧಿಯನ್ನು ತಾವೇ ತೋಡಿಕೊಂಡರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇದೇ ಪುನರಾವರ್ತನೆಯಾಗಲಿದೆ ಎಂದು ಜನಾರ್ಧನ ಪೂಜಾರಿ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಜಾತ್ಯಾತೀತತೆಯ ಬುರ್ಖಾ ಹಾಕಿಕೊಂಡಿದೆ ಎಂಬ ನರೇಂದ್ರ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಪೂಜಾರಿ ಇಂತಹ ಹೇಳಿಕೆಗಳೇ ಅಲ್ಪಸಂಖ್ಯಾತರ ಬಗ್ಗೆ ಮೋದಿಗಿರುವ ಅಸಡ್ಡೆಯನ್ನ ಎತ್ತಿತೋರಿಸುತ್ತದೆ. ಮಾತ್ರವಲ್ಲದೇ ಮೋದಿಯವರು ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಈ ಮಾತನ್ನು ಆಡಿರುವುದು ಸ್ಪಷ್ಟವಾಗುತ್ತದೆ ಎಂದರು.
ಬಿಜೆಪಿ ಇನ್ನು ಮುಂದೆ ಅಧಿಕಾರಕ್ಕೆ ಬರುವುದಿಲ್ಲ ಎಂದು ತಿಳಿದು ಹತಾಶಾವಾಗಿದೆ. ಅದಕ್ಕಾಗಿ ಮೋದಿಯವರನ್ನು ಮುಂದಿಟ್ಟುಕೊಂಡು ದೇಶದಲ್ಲಿ ಧರ್ಮ ವಿಭಜನೆ ಮಾಡುವ ಮೂಲಕ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತದೆ ಎಂದು ಅರೋಪಿಸಿದರು.
ಕಾಂಗ್ರಸ್ ಮುಖಂಡರಾದ ಸದಾಶಿವ ಉಳ್ಳಾಲ್, ಹರಿಕೃಷ್ಣ ಬಂಟ್ವಾಳ್, ಕೃಪಾ ಅಮರ್ ಆಳ್ವ, ಅರುಣ್ ಕುವೆಲ್ಲೊ, ಕಳ್ಳಿಗೆ ತಾರನಾಥ ಶೆಟ್ಟಿ, ಶಶಿಧರ್ ಹೆಗ್ಡೆ, ಟಿ.ಕೆ.ಸುದೀರ್, ಎಸಿ ಭಂಡಾರಿ, ಮಹಾಬಲ ಮಾರ್ಲ, ಕ್ರುಪಾ ಆಳ್ವಾ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English