ಮಲ್ಪೆ: ಮಲ್ಪೆ ಬೀಚ್ ಕಡಲತೀರದಲ್ಲಿ ಮೀನು ಹಿಡಿಯುವುದನ್ನು ನೋಡಲು ಹೋಗಿದ್ದ ಬಾಲಕಿಯೊರ್ವಳ ಮೇಲೆ ಏಳೆಂಟು ನಾಯಿಗಳು ದಾಳಿ ನಡೆಸಿ ಗಂಭೀರಗಾಯಗೊಳಿಸಿದ ಘಟನೆ ಶನಿವಾರ ಸಂಜೆ ನಡೆದಿದೆ. ಬಾಲಕಿಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಲ್ಪೆ ಕೊಳದಲ್ಲಿ ವಾಸವಾಗಿರುವ ಪ್ರಕಾಶ್ ಅವರ ಮಗಳು ಸೌಂದರ್ಯ (6) ನಾಯಿ ದಾಳಿಗೆ ಒಳಗಾದ ಮಗು. ತಾಯಿಯ ಹಿಂದೆ ನಡೆದು ಹೋಗುತ್ತಿದ್ದ ಮಗುವಿನ ಮೇಲೆ ಸುಮಾರು 7-8 ನಾಯಿಗಳು ಏಕಾಏಕಿ ದಾಳಿ ನಡೆಸಿ ಬೆನ್ನು, ತೊಡೆ ಮತ್ತು ಕಾಲುಗಳಿಗೆ ಕಚ್ಚಿ ತೀವ್ರ ಗಾಯಗೊಳಿಸಿದೆ. ಈ ಸಂದರ್ಭ ಸಮೀಪದಲ್ಲಿದ್ದ ಸ್ಥಳೀಯರಾದ ಬಾಬು ಸಾಲಿಯಾನ್, ಶಶಿಧರ ಕುಂದರ್, ಸುರೇಶ್ ಮೈಂದನ್ ತತ್‌ಕ್ಷಣ ಧಾವಿಸಿ ಬಂದು ನಾಯಿ ಹಿಡಿತದಿಂದ ಮಗುವನ್ನು ಬೇರ್ಪಡಿಸಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನೂರಾರು ಬೀದಿ ನಾಯಿಗಳು ಮಲ್ಪೆ ಬೀಚ್‌ನಲ್ಲಿ ಕಳೆದ ಕೆಲವು ಸಮಯಗಳಿಂದ ಓಡಾಡಿಕೊಂಡಿರುವುದು ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿದೆ. ಇದೇ ವಾರದಲ್ಲಿ ಪೊಲೀಸ್ ಪೇದೆಯೊಬ್ಬರ ಮೇಲೂ ನಾಯಿ ದಾಳಿ ನಡೆಸಿ ಅವರನ್ನು ಓಡಿಸಿತ್ತು.
ಬೀಚ್‌ನಲ್ಲಿ ನಾಯಿಗಳ ಹಾವಳಿ ಹೆಚ್ಚುತ್ತಿದ್ದು ಅವುಗಳ ನಿಯಂತ್ರಣಕ್ಕೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Click this button or press Ctrl+G to toggle between Kannada and English