ಬಂಟ್ವಾಳ: ಆಟಿ ಅಮಾವಾಸ್ಯೆಯ ಪ್ರಯುಕ್ತ ಪುರಾಣ ಪ್ರಸಿದ್ದ ಕ್ಷೇತ್ರವಾದ ನರಹರಿ ಶ್ರೀ ಸದಾಶಿವ ದೇವಸ್ಥಾನ ಮತ್ತು ಕಾರಿಂಜ ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಭಕ್ತಾಧಿಗಳು ಬೆಳಗ್ಗಿನಿಂದಲೇ ವಿಶೇಷ ತೀರ್ಥ ಸ್ನಾನದಲ್ಲಿ ಪಾಲ್ಗೊಂಡರು.
ಮುಂಜಾನೆಯಿಂದಲೇ ನರಹರಿ ಸದಾಶಿವ ಕ್ಷೇತ್ರದಲ್ಲಿ ಅಪಾರ ಸಂಖ್ಯೆಯ ಭಕ್ತರು ಅಲ್ಲಿನ ಶಂಖ, ಚಕ್ರ, ಗದಾ, ಪದ್ಮ ಗಳೆಂಬ ತೀರ್ಥಕೆರೆಗಳಿಗೆ ಅಡಿಕೆ ಹಾಗೂ ವೀಳ್ಯದೆಲೆ ಅರ್ಪಿಸಿ ವಿಶೇಷ ತೀರ್ಥಸ್ನಾನ ಮಾಡಿದರು. ಉಬ್ಬಸ ನಿವಾರಣೆಗಾಗಿ ಹುರಿ ಹಗ್ಗವನ್ನು ದೇವರಿಗೆ ಅರ್ಪಿಸುವ ಸೇವೆ ಇಲ್ಲಿ ವಿಶೇಷವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹುರಿಹಗ್ಗವನ್ನು ಕ್ಷೇತ್ರಕ್ಕೆ ಸಮರ್ಪಿಸಿದರು.
ಮಾಜಿ, ಶಾಸಕ,ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ, ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಪ್ರಶಾಂತ್ ಮಾರ್ಲಾ ಮೊದಲಾದವರು ಉಪಸ್ಥಿತರಿದ್ದರು.
ಕಾರಿಂಜ ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಭಕ್ತರು ದೇವರ ದರ್ಶನ ಪಡೆದು ಆಟಿಅಮವಾಸ್ಯೆಯ ತೀರ್ಥ ಸ್ಥಾನ ಮಿಂದು ಪುನೀತರಾದರು. ಶ್ರೀ ಕ್ಷೇತ್ರದಲ್ಲಿ ಗದಾತೀರ್ಥ, ಉಂಗುಷ್ಠ ತೀರ್ಥ ಹಾಗೂ ಜಾನುತೀರ್ಥಗಳಲ್ಲಿ ಸಹಸ್ರಾರು ಭಕ್ತರು ತೀರ್ಥ ಸ್ಥಾನ ಮಾಡಿದರು . ಮಧ್ಯಾಹ್ನದವರೆಗೂ ಕ್ಷೇತ್ರದ ಆರಾಧ್ಯ ಮೂರ್ತಿಯಾದ ಶಿವ-ಪಾರ್ವತಿಯರ ದರ್ಶನ ಪಡೆಯಲು ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು.
ಆಟಿ ಅಮಾವಾಸ್ಯೆಯ ದಿನದಂದು ನೂತನ ವಧುವರರು ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವುದು ಇಲ್ಲಿನ ವಿಶೇಷತೆಯಾಗಿದ್ದು, ಮಂಗಳವಾರವೂ ಹೆಚ್ಚಿನ ಸಂಖ್ಯೆಯಲ್ಲಿ ವಧುವರರು ಕ್ಷೇತ್ರವನ್ನು ಸಂದರ್ಶಿಸಿದರು. ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದ ಆಡಳಿತ ಸಮಿತಿ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಿತ್ತು. ಆಟಿ ಅಮಾವಾಸೆಯ ಪ್ರಯುಕ್ತ ಕೆ.ಎಸ್.ಆರ್.ಟಿ.ಸಿ. ವತಿಯಿಂದ ವಿಶೇಷ ಬಸ್ಸಿನ ಸೌಕರ್ಯ ಒದಗಿಸಲಾಗಿತ್ತು.
Click this button or press Ctrl+G to toggle between Kannada and English