ಮಂಗಳೂರು : ಇತರೆ ರಾಜ್ಯಗಳು ಹಾಗೂ ಕರ್ನಾಟಕದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ವಹಿಸುತ್ತಿರುವ ಹಾಸ್ಟೆಲ್ ಗಳು ಅತ್ಯುತ್ತಮವಾಗಿವೆಯೆಂದು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಸದಸ್ಯರಾದ ಮಾನ್ಯ ಶ್ರೀ ಎಂ.ಶಿವಣ್ಣ ಅವರು ತಮ್ಮ ಅಭಿಪ್ರಾಯ ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪರಿಶಿಷ್ಟ ಜಾತಿಯವರಿಗೆ ಸಂವಿಧಾನಾತ್ಮಕವಾಗಿ ವಿವಿಧ ಇಲಾಖೆಗಳ ಮುಖೇನ ನೀಡಲಾಗಿರುವ ವಿವಿಧ ಸವಲತ್ತುಗಳ ಅನುಷ್ಟಾನ ಪ್ರಗತಿ ಪರಿಶೀಲನೆ ನಡೆಸಿ ತಮ್ಮ ಅಭಿಪ್ರಾಯ ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 32 ವಿದ್ಯಾರ್ಥಿ ನಿಲಯಗಳು ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿದ್ದು,ಇವುಗಳಲ್ಲಿ 3018 ವಿದ್ಯಾರ್ಥಿಗಳಿಗೆ ಅವಕಾಶವಿದ್ದು. 2615 ವಿದ್ಯಾರ್ಥಿಗಳು ಸೌಲಭ್ಯ ಪಡೆಯುತ್ತಿದ್ದಾರೆ. 30 ವಿದ್ಯಾರ್ಥಿ ನಿಲಯಗಳು ಇಲಾಖೆಯ ಸ್ವಂತ ಕಟ್ಟಡ ಹೊಂದಿವೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅರುಣ್ ಪುರ್ಟಾಡೋ ಮಾನ್ಯ ಸದಸ್ಯರಿಗೆ ಮಾಹಿತಿ ಒದಗಿಸಿ,2012-13 ನೇ ಸಾಲಿನಲ್ಲಿ ಈ ವಿದ್ಯಾರ್ಥಿ ನಿಲಯಗಳಲ್ಲಿ ಕಲಿಯುತ್ತಿದ್ದ 191 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗಿದುರಿಂದ ಅವರಲ್ಲಿ 161 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡಾ 84.29 ಫಲಿತಾಂಶ ಬಂದಿದೆ.
ಪಿಯುಸಿ ಪರೀಕ್ಷೆಗೆ 52 ವಿದ್ಯಾರ್ಥಿಗಳು ಹಾಜರಾಗಿದ್ದು ಅವರಲ್ಲಿ 48 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 92 ರಷ್ಟು ಫಲಿತಾಂಶ ಬಂದಿದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಿವಣ್ಣನವರು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಇಂಗ್ಲೀಷ್ ಹಾಗೂ ಗಣಿತ ವಿಷಯಗಳಲ್ಲಿ ಸ್ವಲ್ಪ ಹಿಂದಿದ್ದು, ಅಂತಹ ವಿದ್ಯಾರ್ಥಿಗಳಿಗೆ ವಿಶೇಷ ಟ್ಯೂಷನ್ ಮೂಲಕ ಎರಡೂ ವಿಷಯಗಳನ್ನು ಕಲಿಸುವಂತೆ ಹಾಗೂ ವಿದ್ಯಾರ್ಥಿ ನಿಲಯದ ಮಕ್ಕಳಿಗೆ ಉತ್ತಮ ಹಾಸಿಗೆ ಹಾಗೂ ಹೊದಿಕೆಗಳನ್ನು ಸರಬರಾಜು ಮಾಡುವಂತೆ ತಿಳಿಸಿದರು.
ಸ್ಥಳೀಯ ಸಂಸ್ಥೆಗಳ ಅನುದಾನದಲ್ಲಿ ಪರಿಶಿಷ್ಟರಿಗಾಗಿ ಮೀಸಲಿರುವ ಶೇಕಡಾ 22.75 ಅನುದಾನವನ್ನು ಆಯಾ ಸ್ಥಳೀಯ ಸಂಸ್ಥೆಗಳ ಪರಿಶಿಷ್ಟ ಕಾಲೊನಿಗಳಲ್ಲಿ ರಸ್ತೆ, ಚರಂಡಿ,ಶಾಲಾ ಕಟ್ಟಡ ಇನ್ನಿತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮಾತ್ರ ಬಳಸಬೇಕೆಂದು ಶಿವಣ್ಣನವರು ಅಧಿಕಾರಿಗಳಿಗೆ ತಿಳಿಸಿದರು. ಜಿಲ್ಲೆಯಲ್ಲಿರುವ ಸ್ಥಳೀಯ ಸಂಸ್ಥೆಗಳು ಶೇಕಡಾ 22.75 ರ ಅನುದಾನದಲ್ಲಿ ಶೇಕಡಾ 62.08 ರಷ್ಟು 1249.87 ಲಕ್ಷದಲ್ಲಿ ರೂ.775.95 ಲಕ್ಷ ಅನುದಾನ ವೆಚ್ಚ ಮಾಡಲಾಗಿದೆ. ಅದೇ ರೀತಿ ಗ್ರಾಮ ಪಂಚಾಯತ್ಗಳ ಅನುದಾನದಲ್ಲಿ ಮೀಸಲಿಟ್ಟಿರುವ ಶೇಕಡಾ 25 ಅನುದಾನ 2,09,00,984 ರೂ.ಗಳಲ್ಲಿ ರೂ.1,75,18,961 ರೂ.ಗಳನ್ನು ವೆಚ್ಚ ಮಾಡುವ ಮೂಲಕ ಶೇಕಡಾ 84 ಸಾಧನೆ ಮಾಡಲಾಗಿದೆ. ಒಂದನೇ ತರಗತಿಯಿಂದ ಎಂಟನೇ ತರಗತಿಗಳಲ್ಲಿ ಕಲಿಯುತ್ತಿರುವ 11,117 ಪ್ರೀ ಮೆಟ್ರಿಕ್ ವಿದ್ಯಾರ್ಥಿಗಳಿಗೆ ರೂ.36.94 ಲಕ್ಷ,9 ಮತ್ತು 10ನೇ ತರಗತಿಯಲ್ಲಿ ಕಲಿಯುತ್ತಿರುವ 3108 ವಿದ್ಯಾರ್ಥಿಗಳಿಗೆ ರೂ.65.12 ಲಕ್ಷ ಹಾಗೂ 4368 ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳಿಗೆ ರೂ.353.62 ಲಕ್ಷ ಪೋಸ್ಟ್ ಮೆಟ್ರಿಕ್ ವೇತನ ಮಂಜೂರು ಮಾಡುವ ಮೂಲಕ ಒಟ್ಟು 18593 ವಿದ್ಯಾರ್ಥಿಗಳಿಗೆ 455.68 ಲಕ್ಷ ರೂ.ಗಳ ವಿದ್ಯಾರ್ಥಿ ವೇತನ ವಿತರಿಸಲಾಗಿದೆ ಎಂದು ಸಮಾಜ ಕಲ್ಯಾಣಾಧಿಕಾರಿ ಸಭೆಗೆ ತಿಳಿಸಿದರು.
ವಿಶೇಷ ಘಟಕ ಯೋಜನೆಯಡಿ ಜಿಲ್ಲೆಯಲ್ಲಿ ಕೃಷಿ,ಶಿಕ್ಷಣ,ಖಾದಿ ಗ್ರಾಮೋದ್ಯೋಗ,ಸಣ್ಣ ನೀರಾವರಿ,ಪ್ರವಾಸೋದ್ಯಮ,ಲೋಕೋಪಯೋಗಿ ಸೇರಿದಂತೆ ಇತರೆ ಇಲಾಖೆಗಳು ಶೇಕಡಾ 100 ರಷ್ಟು ಪ್ರಗತಿ ಸಾಧಿಸಿರುವ ಬಗ್ಗೆ ಮಾನ್ಯ ಸದಸ್ಯ ಶಿವಣ್ಣನವರು ಪ್ರಶಂಸಿಸಿದರು.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಶಿಷ್ಟರ ಮೇಲೆ ಅತೀ ಕಡಿಮೆ ದೌರ್ಜನ್ಯ ಮೊಕದ್ದಮೆಗಳು ದಾಖಲಾಗಿದ್ದು, ಜಿಲ್ಲೆಯು ಸುಶಿಕ್ಷಿತರಿಂದ ಕೂಡಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಶ್ರೀ ಶಿವಣ್ಣ ಜಿಲ್ಲೆಯ ಜನತೆಗೆ ಅಭಿನಂದಿಸಿದರು.
ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ 946 ಫಲಾನುಭವಿಗಳಿಗೆ ಮಂಜೂರಾಗಿದ್ದ ಸಾಲವನ್ನು ಮನ್ನಾ ಮಾಡಲಾಗಿದೆ ಎಂದರು. ಸಭೆಯಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ರಾಜ್ಯ ಘಟಕದ ನಿರ್ದೇಶಕಿ ಶ್ರೀಮತಿ.ಪಿ.ಗಿರಿಜಾ , ಸಹಾಯಕ ನಿರ್ದೇಶಕಿ ಶ್ರೀಮತಿ ಶೀಲಾನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಎನ್.ಪ್ರಕಾಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀಮತಿ ತುಳಸಿ ಮದ್ದಿನೇನಿ, ಜಿಲ್ಲಾ ಪೋಲೀಸ್ ಅಧೀಕ್ಷಕ ಅಭಿಷೇಕ್ ಗೋಯಲ್ ಮುಂತಾದವರು ಹಾಜರಿದ್ದರು.
Click this button or press Ctrl+G to toggle between Kannada and English