ಮಂಗಳೂರು : ದ.ಕ ಜಿಲ್ಲಾ ದಿವೈಎಫ್ಐ ಸಮಿತಿ ವತಿಯಿಂದ ಹೊಟೇಲ್ ಗಳಲ್ಲಿ ಆಹಾರ, ಪಾನೀಯಗಳ ಬೆಲೆಗಳ ಬೆಲೆ ನಿಯಂತ್ರಿಸಲು ಏಕರೂಪದ ದರ ಪದ್ಧತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಸಮೀಪದ ಹೊಟೇಲ್‌ಗಳ ಮುಂಭಾಗ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ , ಹೊಟೇಲ್, ಉಪಹಾರ ಗೃಹಗಳಲ್ಲಿ ಆಹಾರ, ಪಾನೀಯಗಳ ಬೆಲೆ ವಿಪರೀತ ಏರಿಕೆಯಿಂದಾಗಿ ಮದ್ಯಮ ವರ್ಗದ ಜನರು ಕಷ್ಟಪದುವಂತಾಗಿದೆ. ಜಿಲ್ಲಾಡಳಿತ ಹೊಟೇಲ್, ಬೆಲೆಗಳನ್ನು ನಿಯಂತ್ರಣ ಮಾಡಿ , ಏಕರೂಪದ ದರ ಪದ್ಧತಿ ಜಾರಿಗೆ ತರಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಸಾಮಾನ್ಯ ನೌಕರರು, ಆಟೋ, ಬಸ್ ಮುಂತಾದ ಸಾರಿಗೆ ಕ್ಷೇತ್ರದ ನೌಕರರು ಸೇರಿದಂತೆ ಜನಸಾಮಾನ್ಯರು ಅವಲಂಭಿಸಿರುವ ಉಪಹಾರ ಗೃಹಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಜನಸಾಮಾನ್ಯರಿಗೆ ಕೈಗೆಟುಕದಷ್ಟು ದುಬಾರಿಯಾಗಿದೆ. ಅದಲ್ಲದೆ ಒಂದೊಂದು ಹೊಟೇಲ್‌ಗಳಲ್ಲಿ ಒಂದೊಂದು ರೀತಿಯ ದರ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಈ ರೀತಿಯ ವಿಪರೀತ ದರ ಏರಿಕೆ, ಅಸಮಾನತೆಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಮುಂದಾಗಬೇಕು . ಪಕ್ಕದ ಕೇರಳ, ತಮಿಳ್ನಾಡುಗಳಲ್ಲಿ ಸರಕಾರವೇ ಹೊಟೇಲ್‌ಗಳನ್ನು ತೆರೆದು ಕಡಿಮೆ ದರದಲ್ಲಿ ಜನಸಾಮಾನ್ಯರಿಗೆ ಆಹಾರ, ಪಾನೀಯಗಳನ್ನು ಪೂರೈಸುತ್ತಿದೆ. ಕರ್ನಾಟಕ ಸರಕಾರವೂ ಕಡಿಮೆ ದರದ ಹೊಟೇಲ್‌ಗಳನ್ನು ತೆರೆಯಬೇಕು ಎಂದು ಅಗ್ರಹಿಸಿದರು.
ಡಿ.ವೈ.ಎಫ್.ಐ ದ.ಕ ಜಿಲ್ಲಾ ಸಮಿತಿ ಕಾರ್ಯದರ್ಶಿ ದಯಾನಂದ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಮಹಾಬಲ ಟಿ, ಉಪಾಧ್ಯಕ್ಷರಾದ ಸೀತಾರಾಂ ಶೆಟ್ಟಿ ಮೂಡುಬಿದ್ರಿ, ಅಶೋಕ್ ಶೆಟ್ಟಿ ಚೆಂಬುಗುಡ್ಡೆ, ಸಂತೋಶ್ ಬಜಾಲ್, ಸೋನಿಯಾ ಪಂಜಿಮೊಗೆರ್, ಹಾಗೂ ಡಿ.ವೈ.ಎಫ್.ಐ ನ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Click this button or press Ctrl+G to toggle between Kannada and English