ಬೆಂಗಳೂರು: ಬಿಬಿಎಂಪಿಯ ನೂತನ ಮೇಯರ್ ಆಗಿ ಬಸವನಗುಡಿ ವಾರ್ಡ್ ಸದಸ್ಯ ಕಟ್ಟೆ ಸತ್ಯನಾರಾಯಣ, ಉಪಮೇಯರ್ ಆಗಿ ಬ್ಯಾಟರಾಯನಪುರ ವಾರ್ಡ್ ನ ಎನ್. ಇಂದಿರಾ ಅವಿರೋಧವಾಗಿ ಬುಧವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಸ್ಥಾನಗಳನ್ನು ಹಂಚಿಕೊಂಡವು. ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತ ಪಕ್ಷವಾಗಿದೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಬಸವನಗುಡಿ ವಾರ್ಡ್ ಸದಸ್ಯ ಕಟ್ಟೆ ಸತ್ಯನಾರಾಯಣ್ ಅವರ ಹೆಸರನ್ನು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಘೋಷಿಸಿದರು.
ಬೇರೆ ಅಭ್ಯರ್ಥಿಗಳು ಸ್ಪರ್ಧಿಸದ ಕಾರಣ ಅವರು ಮೇಯರ್ ಆಗಿ ಆಯ್ಕೆಯಾದರು. ಉಪ ಮೇಯರ್ ಸ್ಥಾನದ ಎಸ್ ಟಿ ವರ್ಗದ ಮಹಿಳೆಗೆ ಮೀಸಲಾಗಿತ್ತು. ಬಿಜೆಪಿಯಲ್ಲಿ ಎಸ್ ಟಿ ವರ್ಗದ ಮಹಿಳಾ ಸದಸ್ಯರು ಇಲ್ಲದ ಕಾರಣ, ಕಾಂಗ್ರೆಸ್ ಪಕ್ಷದ ಬ್ಯಾಟರಾಯನಪುರ ವಾರ್ಡ್ ಸದಸ್ಯೆ ಇಂದಿರಾ ಉಪ ಮೇಯರ್ ಆಗಿ ಆಯ್ಕೆಯಾದರು.ಇದರಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಮೇಯರ್ ಮತ್ತು ಉಪ ಮೇಯರ್ ಸ್ಥಾನವನ್ನು ಹಂಚಿಕೊಂಡಂತಾಗಿದೆ.
ಬಸವನಗುಡಿ ಕ್ಷೇತ್ರದಿಂದ ನಾಲ್ಕು ಬಾರಿ ಗೆಲುವು ಸಾಧಿಸಿರುವ ಕಟ್ಟೆ ಸತ್ಯನಾರಾಯಣ ಬಿಜೆಪಿಯ ಹಿರಿಯ ಬಿಬಿಎಂಪಿ ಸದಸ್ಯರಾಗಿದ್ದಾರೆ. ಆಡಳಿತ ಮತ್ತು ಪ್ರತಿಪಕ್ಷದ ನಾಯಕರಾಗಿ ಬಿಬಿಎಂಪಿಯಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ.
ಕಸದ ಸಮಸ್ಯೆ ನಿವಾರಣೆಗೆ ಆದ್ಯತೆ : ನಗರದ ಕಸದ ಸಮಸ್ಯೆ ನಿವಾರಣೆ ಮಾಡುವುದು ನನ್ನ ಮುಂದಿರುವ ದೊಡ್ಡ ಸವಾಲು ಎಂದು ನೂತನ ಮೇಯರ್ ಕಟ್ಟೆ ಸತ್ಯನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರದಿಂದ ಸಹಾಯ ಪಡೆದು ಬೆಂಗಳೂರನ್ನು ಕಸಮುಕ್ತ ನಗರವಾಗಿಸುವುದಾಗಿ ಘೋಷಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳಿಗೆ ನಿದ್ದೆ ಮಾಡಲು ಬಿಡೋಲ್ಲ. ನಗರದ ಕಸದ ಸಮಸ್ಯೆ ನಿವಾರಣೆ ಮಾಡಲು ಅನುದಾನ ನೀಡುವಂತೆ ಸರ್ಕಾರದ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದರೂ, ಬಿಬಿಎಂಪಿ ಮತ್ತು ಸರ್ಕಾರದ ನಡುವೆ ಸಮನ್ವಯತೆ ಕಾಪಾಡಿಕೊಂಡು ಹೋಗುತ್ತೇನೆ. ನಗರದ ಕಸ ಡಂಪಿಗ್ ಯಾರ್ಡ್ ತಲುಪುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ. ಪ್ರತಿ ವಾರ್ಡ್ ಮಟ್ಟದಲ್ಲಿ ಕಸ ಸಂಸ್ಕರಣಗೆ ಮಾಡಲು ಕ್ರಮ ಕೈಗೊಳ್ಳುತ್ತೇನೆ. ವಾರ್ಡ್ ಮಟ್ಟದಲ್ಲಿ ಕಸ ಸಂಸ್ಕರಣೆ ಮಾಡಲು ಘಟಕ ಸ್ಥಾಪಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಸತ್ಯನಾರಾಯಣ ಹೇಳಿದ್ದಾರೆ.
Click this button or press Ctrl+G to toggle between Kannada and English