ಉಲ್ಲಾಳ : ಅಪರಿಚಿತ ದುಷ್ಕರ್ಮಿಗಳು ಸೆಪ್ಟಂಬರ್ 4ರ ತಡರಾತ್ರಿ 10:30ರ ಸುಮಾರಿಗೆ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತ, ಮಡ್ಯಾರ್-ನಡಾರು ನಿವಾಸಿ ನೀಲು ಯಾನೆ ನೀಲಯ ಎಂಬಾತನನ್ನು ಮಡ್ಯಾರು ದೇವಸ್ಥಾನದ ಸಮೀಪ ಬರ್ಭರಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರು ಸಮೀಪದ ಮಾಡೂರು ಜಂಕ್ಷನ್‍ನಲ್ಲಿ ಎಂದಿನಂತೆ ನಿನ್ನೆ ರಾತ್ರಿ 10 ಗಂಟೆಯವರೆಗೆ ತನ್ನ ಗೆಳೆಯರೊಂದಿಗೆ ನೀಲು ಯಾನೆ ನೀಲಯ ಇದ್ದ. ಬಳಿಕ ತನ್ನ ಆಲ್ಟೋ ಕಾರ್‍ನಲ್ಲಿ ಗೆಳೆಯ ಧೀರಜ್ ಎಂಬಾತನನ್ನು ಆತನ ಮನೆಗೆ ಬಿಟ್ಟುಬಂದಿದ್ದ. ಈ ವೇಳೆ ಮತ್ತೋರ್ವ ಗೆಳೆಯ ನೀಲಯನ ಕಾರನ್ನು ನಿಲ್ಲಿಸಿ `ನಿನ್ನ ಮನೆಯ ಬಳಿ ನಾಲ್ಕೈದು ಮಂದಿ ನಿಮ್ಮನ್ನು ಕಾದು ಕುಳಿತಿದ್ದಾರೆ, ಯಾವುದಕ್ಕೂ ಎಚ್ಚರಿಕೆಯಿಂದ ಇರು’ ಎಂದು ಎಚ್ಚರಿಕೆ ನೀಡಿ ತೆರಳಿದ್ದ. ನೀಲಯ ತನ್ನ ಕಾರ್‍ನಲ್ಲಿ ಕಾದು ಕುಳಿತವರು ಯಾರೆಂದು ತಿಳಿಯಲು ಘಟನಾಸ್ಥಳಕ್ಕೆ ಹೋಗಿದ್ದ ಎನ್ನಲಾಗಿದೆ. ಅಷ್ಟರಲ್ಲಿ ಸನ್ನದ್ಧವಾಗಿದ್ದ ಹಂತಕ ಪಡೆ ನೀಲಯನನ್ನು ಪತ್ತೆಹಚ್ಚಿದ್ದು, ಕಾರ್‍ನಿಂದ ಇಳಿಸಿ ಬರ್ಬರವಾಗಿ ಮಾರಕಾಸ್ತ್ರಗಳಿಂದ ಕಡಿದು ಪರಾರಿಯಾಗಿದೆ. ಎದೆ, ತಲೆ, ಕೈ ಹಾಗೂ ಹೊಟ್ಟೆಯ ಭಾಗಕ್ಕೆ ಮಾರಣಾಂತಿಕ ಏಟು ಬಿದ್ದು ಗಂಭೀರ ಸ್ಥಿತಿಯಲ್ಲಿದ್ದ ನೀಲಯ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ನೀಲಯ ಸಂಚರಿಸುತ್ತಿದ್ದ ಕಾರ್‍ನ ಹಿಂದೆ ಸಂಪತ್ ಮತ್ತು ದಿನೇಶ್ ಎಂಬವರು ಬೈಕ್‍ನಲ್ಲಿ ಬರುತ್ತಿದ್ದು, ಘಟನೆಯನ್ನು ಕಣ್ಣಾರೆ ಕಂಡ ಅವರು ಉಳ್ಳಾಲ ಠಾಣೆಗೆ ತೆರಳಿ ದೂರು ನೀಡಿದ್ದಾರೆ.ಮಡ್ಯಾರ್ ನಿವಾಸಿಗಳೇ ಆಗಿರುವ ಸಂತು ಯಾನೆ ಸಂತೋಷ್, ಚಿದು ಯಾನೆ ಚಿದಾನಂದ, ಜಗ್ಗ ಯಾನೆ ಜಗದೀಶ್, ತಲಪಾಡಿ ನಿವಾಸಿ ಕೃಷ್ಣ ಎಂಬವರು ಕೃತ್ಯವೆಸಗಿದ್ದಾರೆ ಎಂದು ದೂರಿನಲ್ಲಿ ಎನ್ನಲಾಗಿದೆ.
ಮರಣೋತ್ತರ ಪರೀಕ್ಷೆಗಾಗಿ ಶವವನ್ನು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ.
ನೀಲಯ ಕೊಲೆಯಾದ ಸ್ಥಳಕ್ಕೆ ಆರೋಗ್ಯ ಸಚಿವ ಯು.ಟಿ. ಖಾದರ್ ತಡರಾತ್ರಿಯೇ ಭೇಟಿ ನೀಡಿದ್ದರು. ಎಸಿಪಿ ಕವಿತಾ ಅವರು ಇತರೆ ಪೊಲೀಸ್ ಅಧಿಕಾರಿಗಳೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Click this button or press Ctrl+G to toggle between Kannada and English