ಮಂಗಳೂರು : ಸಂಪೂರ್ಣ ಸಾಕ್ಷರ ಜಿಲ್ಲೆ; ಬುದ್ದಿವಂತರ ಜಿಲ್ಲೆ ಎಂದು ದಕ್ಷಿಣ ಕನ್ನಡ ಜಿಲ್ಲೆ ಹೆಸರಾಗಿದ್ದು ಇದರಲ್ಲಿ ಶಿಕ್ಷಕರ ಕೊಡುಗೆ ಅಪಾರ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರೂ ಆಗಿರುವ ಶ್ರೀ ಬಿ. ರಮಾನಾಥ ರೈ ಅವರು ಹೇಳಿದರು.
ಅವರಿಂದು ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆ ಹಾಗೂ ಗುರುವಂದನಾ ಸಮಾರಂಭವನ್ನು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪ ಸಭಾಂಗಣ, ಬಂಟ್ವಾಳದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿಕ್ಷಕರು ಸಮಾಜಕ್ಕೆ ಮಾದರಿಯಾಗಿರಬೇಕು. ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಹೊಣೆ ಹಿರಿದು ಮತ್ತು ಮಹತ್ವದ್ದು. ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ಶಿಕ್ಷಕರು ತಮ್ಮ ವೃತ್ತಿಯ ಬಗ್ಗೆ ಗೌರವ ಇರಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಕರಾಗಬೇಕೆಂದರು.
ಆರೋಗ್ಯ ಸಚಿವ ಶ್ರೀ ಯು ಟಿ ಖಾದರ್ ಅವರು ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಶಿಕ್ಷಕರ ದಿನಾಚರಣೆಯನ್ನು ಕೋಲಾರದಲ್ಲಿ ಆಚರಿಸದೆ ತಮ್ಮ ಶಿಕ್ಷಕರು ಹಾಗೂ ಭವಿಷ್ಯ ರೂಪಿಸಿದವರ ಮೇಲಿನ ಪ್ರೀತಿಯಿಂದ ತಮ್ಮ ಊರಲ್ಲಿ ಆಚರಿಸಿ, ಶಿಕ್ಷಕರ ಆಶೀರ್ವಾದ ಪಡೆಯಲು ಆಗಮಿಸಿರುವುದಾಗಿ ನುಡಿದರು. ಆರೋಗ್ಯ ಇಲಾಖೆಯಲ್ಲಿದ್ದರೂ ಶಿಕ್ಷಣ ಇಲಾಖೆ, ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ನಿಗಾ ಇರಿಸಲು ಶಾಲಾ ಆರೋಗ್ಯ ತಂಡವೊಂದನ್ನು ರಚಿಸಿದ್ದು ಈ ತಂಡದಲ್ಲಿ ಒಬ್ಬ ಡಾಕ್ಟರ್ ಮತ್ತು ದಾದಿ ಇರುತ್ತಾರೆ. ಇವರು ತಮ್ಮ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸುವರು. ಗಜೆಟೆಡ್ ಹುದ್ದೆ ಹೊರತುಪಡಿಸಿ ಸರ್ಕಾರಿ ನೌಕರರನ್ನು ಆರೋಗ್ಯ ಸಂಜೀವಿನಿ ವ್ಯಾಪ್ತಿಗೆ ಒಳಪಡಿಸಲಾಗುವುದು ಎಂದರು.
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ವರ್ಗಾವಣೆ ನೀತಿಯನ್ನು ರೂಪಿಸಲಾಗುವುದು; ಕೌನ್ಸಿಲಿಂಗ್ ವ್ಯವಸ್ಥೆಯನ್ನು ಉತ್ತಮಪಡಿಸಲಾಗುವುದಲ್ಲದೆ ಈ ಸಂಬಂಧ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದರು.
ಶೈಕ್ಷಣಿಕ ವ್ಯವಸ್ಥೆಗೆ ಪೂರಕವಾದ ಆರೋಗ್ಯ ಪರಿಸರ ನಿರ್ಮಾಣವೇ ಸರ್ಕಾರದ ಧ್ಯೇಯ ಎಂದ ಸಚಿವರು, ದೇಶದ ಭವಿಷ್ಯ ನಿರ್ಮಾಣ ಶಿಕ್ಷಕರ ಕೈಯ್ಯಲಿದ್ದು, ಅವರಿಗೆ ಎಲ್ಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.
ಸಮಾರಂಭದ ಸಂಪನ್ಮೂಲ ವ್ಯಕ್ತಿಗಳಾಗಿ ವಿಶೇಷ ಉಪನ್ಯಾಸ ನೀಡಿದ ವಿವೇಕಾನಂದ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ ಮಾಧವ ಭಟ್ ಅವರು ಮಾತನಾಡಿ, ಶಿಕ್ಷಕ ವೃತ್ತಿಗಿರುವ ಗೌರವ ಹಾಗೂ ಅಭಿಮಾನ ಇನ್ನಾವುದೇ ಕ್ಷೇತ್ರದಲ್ಲಿ ಇಲ್ಲ ಎಂದರು. ನಮ್ಮ ದೇಶದಲ್ಲಿ 660 ಮಿಲಿಯನ್ ವಿದ್ಯಾರ್ಥಿಗಳ ಸಂಪತ್ತಿದ್ದು ಈ ಸಂಪತ್ತಿನ ಸದ್ಬಳಕೆ ಮತ್ತು ಅವಕಾಶ ಸೃಷ್ಟಿಯಾಗಬೇಕಿದೆ ಎಂದರು.
ಇಂದು ವಿದ್ಯಾರ್ಥಿಗಳಲ್ಲಿರುವ ಸ್ಪರ್ಧಾ ಮನೋಭಾವ ಆರೋಗ್ಯಕರವಾಗಿಲ್ಲ. ಅನವಶ್ಯಕ ಒತ್ತಡ ಹಾಗೂ ಸ್ಪರ್ಧೆಗಳು ವಿದ್ಯಾರ್ಥಿಗಳನ್ನು ಬೆಳೆಯಲು ಬಿಡುತ್ತಿಲ್ಲ. ನಾವು ಯಶಸ್ಸಿನ ಸಂಭ್ರಮಾಚರಣೆಯನ್ನು ಮಾಡದೆ ಜೀವನವನ್ನು ಎದುರಿಸುವುದು ಹೇಗೆ ಎಂಬುದನ್ನು ವಿದ್ಯಾರ್ಥಿಗಳಿಗೆ ಕಲಿಸುವುದರ ಬಗ್ಗೆ ಶಿಕ್ಷಣದಲ್ಲಿ ಒತ್ತು ನೀಡಬೇಕೆಂದು ಅವರು ಹೇಳಿದರು.
ಕಷ್ಟದಲ್ಲಿರುವ ಸಂದೇಶ ಸುಖದಲ್ಲಿ ಇಲ್ಲ ಎಂಬುದನ್ನು ಮನಗಾಣಿಸುವ ಅಗತ್ಯ ಹಿಂದೆಂದಿಗಿಂತಲೂ ಇಂದಿನ ಅಗತ್ಯವಾಗಿದೆ ಎಂದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೆ. ಕೊರಗಪ್ಪ ನಾಯ್ಕ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲಲಿತಾ ಶಿವಪ್ಪ ನಾಯ್ಕ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಆಶಾ ತಿಮ್ಮಪ್ಪ, ಮಮತಾ ಗಟ್ಟಿ, ಶೈಲಜಾ ಭಟ್, ಎಂ ಎಸ್ ಮೊಹಮ್ಮದ್ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ದ.ಕ. ಜಿ.ಪಂ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ತುಳಸಿ ಮದ್ದಿನೇನಿ, ಕಾರ್ಯನಿರ್ವಹಣಾಧಿಕಾರಿ ಡಯಟ್ ನ ಪ್ರಾಂಶುಪಾಲರಾದ ಶ್ರೀ ಪಾಲಾಕ್ಷಪ್ಪ, ಬಂಟ್ವಾಳ ತಾಲೂಕು ಕಾರ್ಯನಿರ್ವಹಣಾಧಿಕಾರಿ ಶ್ರೀ ವಿಶ್ವನಾಥ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಶೇಷನಯನ ಕಾರಿಂಜ ಉಪಸ್ಥಿತರಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶ್ರೀ ಮೋಸೆಸ್ ಜಯಶೇಖರ್ ಸ್ವಾಗತಿಸಿದರು. ಈ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ವಿಜೇತ ಶಿಕ್ಷಕರು ಹಾಗೂ ತಾಲೂಕು ಮಟ್ಟದ ಪ್ರಶಸ್ತಿ ವಿಜೇತ ಶಿಕ್ಷಕರು ಹಾಗೂ ಕಳೆದ ಸಾಲಿನ ರಾಷ್ಟ್ರ ಮಟ್ಟದ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ವಿಜೇತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
Click this button or press Ctrl+G to toggle between Kannada and English