ಬಂಟ್ವಾಳ : ಪ್ರತಿಭಾ ಕಾರಂಜಿಯ ಹೆಸರಿನಲ್ಲಿ ಕಳೆದ ಹಲವು ವರ್ಷಗಳಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಶಿಕ್ಷಣ ಇಲಾಖೆ ಆಯೋಜಿಸುತ್ತಿದೆ.
ತುಳುನಾಡಿನ ಎಲ್ಲೆಡೆ ಭಾಷಾಭಿಮಾನ ಉಕ್ಕಿ ಹರಿಯುತ್ತಿದ್ದರೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮಾತ್ರ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮದಿಂದ ತುಳು ಭಾಷೆಯನ್ನು ದೂರವಿಟ್ಟಿದೆ. ಈ 29 ಸ್ಪರ್ಧೆಗಳ ಜೊತೆ ಜನಪದ ಗೀತೆ, ನೃತ್ಯ ಸ್ಪರ್ಧೆಗಳು ಇವೆ. ಆದರೆ, ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಶಾಲೆಗಳಿಗೆ ನೀಡಿರುವ ಸುತ್ತೋಲೆಯಲ್ಲಿ ಜನಪದ ಗೀತೆ ಹಾಗೂ ಜನಪದ ನೃತ್ಯಗಳಿಗೆ ಕನ್ನಡ ಭಾಷೆಯನ್ನು ಮಾತ್ರ ಆಯ್ದುಕೊಳ್ಳಲು ಸೂಚಿಸಿದೆ.
ಡಿಸಂಬರ್‌ನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಕಳೆದ ಅ. 31ರಂದು ಬೆಳ್ತಂಗಡಿಯಲ್ಲಿ ನಡೆದ ಪೂರ್ವ ತಯಾರಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳಂತೆ ಜಿಲ್ಲಾ ಉಪನಿರ್ದೇಶಕರು ಈ ಆದೇಶ ಹೊರಡಿಸಿದ್ದಾರೆ.
ಈ ಆದೇಶದಿಂದಾಗಿ ತುಳು ಜನಪದ ಕುಣಿತಗಳಿಗೆ ನಿರ್ಬಂಧ ಹೇರಿದಂತಾಗಿದೆ. ಈ ಹಿನ್ನೆಲೆಯಲ್ಲಿ ಇನ್ನು ಮಂದೆ ವಿದ್ಯಾರ್ಥಿ ತಂಡಗಳು ಉತ್ತರ ಕರ್ನಾಟಕ ಮೂಲದ ಜನಪದ ನೃತ್ಯಕ್ಕೆ ಮೊರೆಹೋಗಬೇಕಾಗಿದೆ. ತುಳು ಹಾಡುಗಳನ್ನು ಕನ್ನಡಕ್ಕೆ ಭಾಷಾಂತರಿಸಿ ನೃತ್ಯ ಪ್ರದರ್ಶಿಸಲೂ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ.
ಈಗಾಗಲೇ ಜಿಲ್ಲೆಯಲ್ಲಿ ಶಾಲಾ ಮಟ್ಟ ಹಾಗೂ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಮುಗಿದಿದ್ದು, ಬ್ಲಾಕ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಿಗೆ ಸಿದ್ಧತೆ ನಡೆಯುತ್ತಿದೆ.
ಎರಡು ವರ್ಷದ ಹಿಂದೆ ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ದ.ಕ. ಜಿಲ್ಲೆಯಲ್ಲಿ ಪ್ರಥಮ ಸ್ಥಾನಗಳಿಸಿದ್ದ ತುಳು ಜನಪದ ನೃತ್ಯವನ್ನು ವಿದ್ಯಾರ್ಥಿ ತಂಡ ಪ್ರದರ್ಶಿಸಿತ್ತು. ಆದರೆ, ಅಲ್ಲಿನ ತೀರ್ಪುಗಾರರು ಈ ನೃತ್ಯವನ್ನು, ತಂಡವನ್ನು ಅವಮಾನ ಗೊಳಿಸಿದ್ದರಂತೆ. ಹೀಗಾಗಿ ರಾಜ್ಯಮಟ್ಟವನ್ನು ದೃಷ್ಟಿಯಲ್ಲಿರಿಸಿಕೊಂಡು ಜಿಲ್ಲಾ ಮಟ್ಟದಲ್ಲಿ ತುಳು ಭಾಷೆಯ ಜನಪದ ಗೀತೆ ಹಾಗೂ ಜನಪದ ನೃತ್ಯಗಳನ್ನು ದೂರವಿಡಲಾಗಿದೆ ಎನ್ನುವುದು ಶಿಕ್ಷಣ ಇಲಾಖೆ ಸಮರ್ಥನೆ.
Click this button or press Ctrl+G to toggle between Kannada and English