ರೈತ ಸಂಘ ಒಕ್ಕೂಟದ ವತಿಯಿಂದ ಪ್ರತಿಭಟನೆ

4:59 PM, Thursday, December 5th, 2013
Share
1 Star2 Stars3 Stars4 Stars5 Stars
(4 rating, 6 votes)
Loading...

WTO

ಮಂಗಳೂರು: ದಕ್ಷಿಣ ಭಾರತ ರೈತ ಸಂಘ ಒಕ್ಕೂಟದ ವತಿಯಿಂದ ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯಲಿರುವ 33 ರಾಷ್ಟ್ರಗಳ 9ನೇ ಶೃಂಗಸಭೆಯಿಂದ ಭಾರತದ ಪ್ರತಿನಿಧಿಗಳು ಹೊರನಡೆಯಬೇಕು ಮತ್ತು ರೈತರ ಹಿತಾಸಕ್ತಿಯನ್ನು ಬಲಿಕೊಡುವ ಒಪ್ಪಂದಗಳಿಗೆ ಸಹಿ ಹಾಕಬಾರದು ಎಂದು ಆಗ್ರಹಿಸಿ ಮಂಗಳವಾರ ನವಮಂಗಳೂರು ಬಂದರು ಮಂಡಳಿ ಮುಂದೆ ಪ್ರತಿಭಟನೆ ನಡೆಯಿತು.

ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯ ರೈತ ಪ್ರತಿನಿಧಿಗಳು ಹಾಗೂ ರಾಜ್ಯದ ಮಂಡ್ಯ, ತುಮಕೂರು, ಕೊಡಗು ಗಡಿಭಾಗದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿ, ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಜಿ 33 ರಾಷ್ಟ್ರಗಳ ವಿಶ್ವವ್ಯಾಪಾರ ಒಕ್ಕೂಟದಿಂದ ಭಾರತ ಹೊರಬರುವುದು ಅಗತ್ಯ. ಕೃಷಿ ಉತ್ಪನ್ನಗಳನ್ನು ಆಮದು ಮಾಡುವ ಮೂಲಕ ದೇಶದ ರೈತರನ್ನು ಸರ್ಕಾರ ಬೀದಿಪಾಲು ಮಾಡಬಾರದು ಎಂದು ಆಗ್ರಹಿಸಿದರು.

ಡಬ್ಲ್ಯುಟಿಒ ಮಾದರಿಯ ಪ್ರಕಾರ ಸರ್ಕಾರ 1986ರ ಬೆಲೆಯಲ್ಲಿ ರೈತರಿಗೆ ಆಹಾರ ಉತ್ಪನ್ನಗಳನ್ನು ಖರೀದಿಸಿ ರೈತರಿಗೆ ಸಬ್ಸಿಡಿ ವಿತರಿಸಬೇಕು. ಆದರೆ ಈ ನಿಯಮ ರೈತ ವಿರೋಧಿಯಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದರೂ ಬಡತನ ಮತ್ತು ಹಸಿವಿನ ಪ್ರಮಾಣ ಕಡಿಮೆಯಾಗಿಲ್ಲ. ಇತ್ತೀಚೆಗಷ್ಟೆ ಸರ್ಕಾರ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಲು ಉತ್ಸುಕವಾಗಿದ್ದು, ಡಬ್ಲ್ಯುಟಿಒ ಒಪ್ಪಂದಗಳು ಈ ಆಹಾರ ಭದ್ರತಾ ಕಾಯಿದೆಯನ್ನು ನಿಯಂತ್ರಿಸಲಿವೆ.  ಇದರಿಂದ ರೈತರ ಜೀವನ ದಯನೀಯವಾಗಲಿದೆ ಎಂದು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಮುಖಂಡ ಕೆ. ಟಿ. ಗಂಗಾಧರನ್‌ ಅಭಿಪ್ರಾಯಪಟ್ಟರು.

ಅಡಿಕೆ, ಕಾಳುಮೆಣಸು, ಜೋಳ, ಶೇಂಗಾ ಮತ್ತು ಸಕ್ಕರೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ರೈತರಿಗೆ ನೀಡುವ ಸಬ್ಸಿಡಿ ಹಣದ ಮೇಲೆ ಡಬ್ಲ್ಯುಟಿಒ ನಿಯಂತ್ರಣ ಹೇರುತ್ತದೆ. ಅಂದರೆ ರೈತರಿಗೆ ದೊರೆಯಬಹುದಾದ 200 ಕೋಟಿ ಡಾಲರ್‌ ಸಬ್ಸಿಡಿ ಡಬ್ಲ್ಯುಟಿಒ ನಿಯಮದ ಉಲ್ಲಂಘನೆ ಎನಿಸಲಿದೆ. ವಿಪರ್ಯಾಸ ಎಂದರೆ ಅಮೆರಿಕ 1995ರಿಂದ 2015ರ ನಡುವಿನ ಅವಧಿಯಲ್ಲಿ ಕೃಷಿಗೆ ನೀಡುತ್ತಿರುವ ಸಬ್ಸಿಡಿಯನ್ನು 600 ಕೋಟಿ ಬಿಲಿಯನ್‌ ಡಾಲರ್‌ನಿಂದ 1,30, 000 ಕೋಟಿ ಬಿಲಿಯನ್‌ ಡಾಲರ್‌ಗೆ ಏರಿಸಿದೆ. ಅಲ್ಲಿ ವ್ಯಕ್ತಿಗೆ ವರ್ಷಕ್ಕೆ 385 ಕೆ.ಜಿ. ಆಹಾರ ನೀಡಿದರೆ, ಭಾರತದಲ್ಲಿ ಕೇವಲ 65 ಕೆ. ಜಿ. ಧಾನ್ಯ ನೀಡಲು ಉದ್ದೇಶಿಸಿದೆ. ಹಸಿದವರಿಗೆ ಉಣಿಸುವುದು ಡಬ್ಲ್ಯುಟಿಒ ನಿಯಮಗಳ ಉಲ್ಲಂಘನೆಯಾದರೆ ಅಂತಹ ನಿಯಮಗಳು ಬೇಕೇ ಎಂದು ಪ್ರಶ್ನಿಸಿದವರು ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿ ಪಾಟೀಲ್‌.

ಬೈಕಂಪಾಡಿಯ ಎಪಿಎಂಸಿ ಮುಂದೆ ಸಭೆ ಸೇರಿದ ರೈತರು ಇತ್ತೀಚೆಗೆ ಅಗಲಿದ ರೈತ ವಿಠಲ ಅರಬಾವಿ ಅವರಿಗೆ ನಮನ ಸಲ್ಲಿಸಿದರು.

ಬಳಿಕ ಮೆರವಣಿಗೆಯಲ್ಲಿ ಮಂಗಳೂರು ಬಂದರು ಹೆಬ್ಬಾಗಿಲಿಗಿನವರೆಗೆ ಜಾಥಾ ನಡೆಸಿದರು. ಬಂದರಿನ ಮುಂದೆ ಡಬ್ಲ್ಯುಟಿಒ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಹಾಯಕ ಆಯುಕ್ತ ಪ್ರಶಾಂತ್‌ ಅವರು ಬಂದು ರೈತರ ಮನವಿಯನ್ನು ಸ್ವೀಕರಿಸಿದರು. ಅಭಿವೃದ್ಧಿ ವಿರೋಧಿ ಪ್ಯಾಕೇಜನ್ನು ಬಾಲಿ ಶೃಂಗಸಭೆಯಲ್ಲಿ ಭಾರತದ ಪ್ರತಿನಿಧಿಗಳು ಒಪ್ಪಿಕೊಳ್ಳಬಾರದು ಎಂದು ಆಗ್ರಹಿಸಿದ ಮನವಿಯನ್ನು ಸಹಾಯಕ ಆಯುಕ್ತರ ಮೂಲಕ ಪ್ರಧಾನ ಮಂತ್ರಿಯವರಿಗೆ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ–ಹಸಿರು ಸೇನೆ, ತಮಿಳುನಾಡು ರೈತ ಸಂಘಟನೆ, ಮಹಾರಾಷ್ಟ್ರದ ಶೇಟ್ಕಾರಿ ಸಂಘಟನೆ, ಕೇರಳ ತೆಂಗು ಬೆಳೆಗಾರರ ಸಂಘದ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಆಹಾರ ಭದ್ರತಾ ಕಾನೂನಿನಲ್ಲಿ ರಾಜಿ ಮಾಡಿಕೊಳ್ಳದೆ ದೇಶದ 60 ಕೋಟಿ ರೈತರು ಮತ್ತು 85 ಕೋಟಿ ಜನರಿಗೆ ಆಹಾರ ಭದ್ರತೆ ಒದಗಿಸಬೇಕು.

WTO

WTO

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English