ಮೂಡುಬಿದಿರೆ : ವಿದ್ಯಾಗಿರಿಯಲ್ಲಿ ಡಿ.19ರಿಂದ 22ರವರೆಗೆ ನಡೆಯಲಿರುವ ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್-2013ರ ಅಮಂತ್ರಣ ಪತ್ರಿಕೆಯನ್ನು ಗುರುವಾರ ಆಳ್ವಾಸ್ ವಿಶ್ವನುಡಿಸಿರಿ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಪಂಡಿತಾಚರ್ಯವರ್ಯ ಸ್ವಾಮೀಜಿ ಹಾಗೂ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿ, ಸಾಹಿತ್ಯ, ಸಂಸ್ಕೃತಿ, ಕಲೆಗಳ ಜತೆಗೆ ಕೃಷಿ, ಜನಪದ ಬಗ್ಗೆ ಕ್ರಾಂತಿ ಮಾಡಲು ಹೊರಟಿರುವ ವಿಶ್ವನುಡಿಸಿರಿ ಸಮ್ಮೇಳನವು ಜಾಗತಿಕ ಮಟ್ಟದಲ್ಲೇ ಗಮನಸೆಳೆಯಲಿದೆ. ಡಾ.ಎಂ. ಮೋಹನ್ ಆಳ್ವರವರ ಉತ್ಸಾಹ, ಪರಿಶ್ರಮ, ನಾಡುನುಡಿಗಾಗಿ ಅವರು ಮಾಡಲು ಹೊರಟಿರುವ ಕೈಂಕರ್ಯಗಳು ಅವರ ಹೃದಯ ವೈಶಾಲ್ಯತೆಯ ಪ್ರತೀಕ. ಸರ್ಕಾರವು ಅವರ ಸೇವೆಯನ್ನು ಮನಗಂಡು ತುರ್ತು ಪ್ಯಾಕೇಜ್ ರೂಪದಲ್ಲಿ ಕನಿಷ್ಠ 5 ಕೋಟಿ ರೂ.ಗಳನ್ನಾದರೂ ಬಿಡುಗಡೆಗೊಳಿಸಲಿ. ಈ ಮೂಲಕ ಕನ್ನಡದ ಕೆಲಸದಲ್ಲಿ ಕೈಜೋಡಿಸಲಿ ಎಂದರು.
ಸಮ್ಮೇಳನದ ಸಂದರ್ಭ ಮೂಡುಬಿದಿರೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಶ್ರಮಿಸುವುದು ಅಗತ್ಯ. ಸ್ಥಳೀಯಾಡಳಿತ ಕೂಡ ಸ್ವಚ್ಛತೆ, ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿಯೂ ಪ್ರಯತ್ನಿಸಬೇಕು ಎಂದರು. ಡಾ.ಆಳ್ವರು ಕನ್ನಡದ ಇತಿಹಾಸದಲ್ಲೇ ,ಜಾಗತಿಕಮಟ್ಟದಲ್ಲೇ ಪ್ರಪ್ರಥಮ ಪ್ರಯೋಗಕ್ಕೊಂದು ಮುನ್ನುಡಿ ಬರೆಯುತ್ತಿದ್ದಾರೆ. ಸಾಹಿತ್ಯ,ಕಲೆ, ಸಂಸ್ಕೃತಿ, ಕೃಷಿ ಬದುಕು ಹೀಗೆ ಸಮಾಜದಲ್ಲಿ ಹಲವಾರು ವಿಷಯಗಳು ಮೇಳೈಸುವಂತೆ ವಿಶ್ವನುಡಿಸಿರಿ ಎಂಬ ಬೃಹತ್ ಮಹಲ್ ಮಾದರಿಯ ಕಾರ್ಯಕ್ರಮವನ್ನು ಜನರ ಮುಂದಿಟ್ಟಿದ್ದಾರೆ ಎಂದರು.
ಮಾಜಿ ಸಚಿವ ಅಮರನಾಥ ಶೆಟ್ಟಿ, ವಿಶ್ವನುಡಿಸಿರಿ ಅಂತರ್ಜಾಲದ ಸಂಪಾದಕ ಅಭಿಜಿತ್ ಎಂ., ಆಳ್ವಾಸ್ ಪಿ.ಆರ್.ಒ ಚೆಂಗಪ್ಪ ಮೊದಲಾದವರು ಉಪಸ್ಥಿತರಿದ್ದರು . ಡಾ.ಧನಂಜಯ ಕುಂಬ್ಳೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English