ಬೆಂಗಳೂರು: ಇವರೆಲ್ಲಾ ಅಷ್ಟು ಪ್ರೊಫೆಷನಲ್ ಆಟಗಾರರಲ್ಲ ಬಿಡು ಕಣ್ಲಾ. ಸಿನಿಮಾ ತಾರೆಗಳಿಗೆ ಬ್ಯಾಟ್ ಹಿಡಿಯಕ್ಕೆ ಬರಲ್ಲ, ಕ್ರಿಕೆಟ್ ಬಗ್ಗೆ ಅವರಿಗೇನು ಗೊತ್ತು ಎಂದುಕೊಂಡಿದ್ದವರಿಗೆ ಭಾನುವಾರ (ಜ.26) ರಾತ್ರಿ ನಡೆದ ಹೊನಲು ಬೆಳಕಿನ ಪಂದ್ಯಾವಳಿ ಸೂಕ್ತ ಉತ್ತರ ಕೊಟ್ಟಿದೆ.
ಯಾವ ಪ್ರೊಫೆಷನಲ್ ಆಟಗಾರರಿಗೂ ಕಮ್ಮಿ ಇಲ್ಲದಂತೆ ಕರ್ನಾಟಕ ಬುಲ್ಡೋಜರ್ಸ್ ತಂಡ ಸಿಸಿಎಲ್ ನಾಲ್ಕನೇ ಆವೃತ್ತಿಯ ಚೊಚ್ಚಲ ಪಂದ್ಯದಲ್ಲೇ ಗೆಲುವು ದಾಖಲಿಸಿತು. ಸುದೀಪ್ ತಂಡದ ಆಟ ನೋಡಲು ಚಿನ್ನಸ್ವಾಮಿ ಕ್ರೀಡಾಂಗಣ ಬಹುತೇಕ ಭರ್ತಿಯಾಗಿತ್ತು.
ಮ್ಯಾನ್ ಆಫ್ ದಿ ಮ್ಯಾಚ್ ರಾಜೀವ್ ನಟ ರಾಜೀವ್ 34 ಎಸೆತಗಳಲ್ಲಿ ಭರ್ಜರಿ 87 ರನ್ ಹೊಡೆಯುವ ಮೂಲಕ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗೆದ್ದರು. ಪ್ರದೀಪ್ ಹಾಗೂ ರಾಹುಲ್ ಜೊತೆಯಾಟ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.
ಆರಂಭಿಕ ಆಟಗಾರ ದರ್ಶನ್ ಅವರು ಒಂದೇ ಒಂದು ರನ್ ಹೊಡೆದು ರನ್ ಔಟ್ ಆಗಿದ್ದು ಅವರ ಅಭಿಮಾನಿಗಳಿಗೆ ತೀವ್ರ ನಿರಾಸೆಪಡಿಸಿತು. ಪ್ರದೀಪ್ 47 ಬಾಲ್ ಗಳಲ್ಲಿ ರೋಚಕ 73 ರನ್, ರಾಹುಲ್ 28 ಬಾಲ್ ಗಳಲ್ಲಿ 36 ರನ್ ಹೊಡೆದು ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು.
ಬೆಂಗಾಲ್ ಟೈಗರ್ಸ್ ತಂಡ ವಿಕೆಟ್ ಗಳನ್ನು ಕೀಳುವಲ್ಲಿ ಸಾಕಷ್ಟು ತಿಣುಕಾಡಿತಾದರೂ ಕೇವಲ ಮೂರು ವಿಕೆಟ್ ಗಳಿಸಿತು. ಬೆಂಗಾಲ್ ಟೈಗರ್ಸ್ ತಂಡಕ್ಕೆ 231 ರನ್ ಗಳ ಭಾರಿ ಗುರಿಯನ್ನು ಕರ್ನಾಟಕ ಬುಲ್ಡೋಜರ್ಸ್ ಇಟ್ಟಿತು. ಆದರೆ ಬೆಂಗಾಲ್ ಟೈಗರ್ಸ್ ಆರಂಭದಲ್ಲೇ ತರಗೆಲೆಗಳಂತೆ ವಿಕೆಟ್ ಮೇಲೆ ವಿಕೆಟ್ ಗಳನ್ನು ಕಳೆದುಕೊಂಡು ಸೋಲಿನ ದವಡೆಯಿಂದ ಪಾರಾಗಳು ಸಾಕಷ್ಟು ತಿಣುಕಾಡುವಂತಾಯಿತು. ಅಂತಿಮವಾಗಿ ಪ್ರಯಾಸದ 113 ರನ್ ಗಳನ್ನು ಪೇರಿಸಿ ಹೀನಾಯ ಸೋಲನುಭವಿಸಿತು. ಕರ್ನಾಟಕ ಬುಲ್ಡೋಜರ್ಸ್ 115 ರನ್ ಗಳ ಭರ್ಜರಿ ಜಯ ದಾಖಲಿಸಿತು.
Click this button or press Ctrl+G to toggle between Kannada and English