ಬೆಂಗಳೂರು: ಕೊನೆಯ ದಿನವಾದ ಗುರುವಾರ ವಿಧಾನಸಭೆ ಕಲಾಪದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮತ್ತು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ನಡುವೆ ತೀವ್ರ ಜಟಾಪಟಿ ನಡೆದಿದ್ದು, ಸರ್ಕಾರವನ್ನು ಮುಜುಗರ ಉಂಟುಮಾಡಿತು. ಗುರುವಾರದ ಕಲಾಪದಲ್ಲಿ ಮೀಸಲು ಕ್ಷೇತ್ರಗಳ ಶಾಸಕರ ಕುರಿತು ಸಚಿವ ಆಂಜನೇಯ ಅವರು ಆಡಿದ ಮಾತಿನಿಂದ ಅಸಮಾಧಾನಗೊಂಡ ನರೇಂದ್ರಸ್ವಾಮಿ, ಒಂದು ಹಂತದಲ್ಲಿ ಆಂಜನೇಯ ಅವರ ಮೇಲೆ ಏರಿ ಹೋಗುವ ಯತ್ನವನ್ನೂ ಮಾಡಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸುಳಿವು ಅರಿತ ಇತರ ಸದಸ್ಯರು ಇಬ್ಬರನ್ನೂ ಸಮಾಧಾನಪಡಿಸಿದರು.
ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ತಾಲೂಕು ಮಟ್ಟದ ವಿವಿಧ ಸಮಿತಿಗಳಲ್ಲಿ ಅಧಿಕಾರೇತರ ಸದಸ್ಯರ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರ ಇತ್ತೀಚಿನ ಆದೇಶ ಹೊರಡಿಸಿದ್ದರ ಬಗ್ಗೆ ಪ್ರಸ್ತಾಪಿಸಿದರು. ತಾಲೂಕು ಮಟ್ಟದಲ್ಲಿ ಶಾಸಕರ ಅಧಿಕಾರ ಮೊಟಕುಗೊಳಿಸುವ ಪ್ರಯತ್ನವನ್ನು ಸರ್ಕಾರ ನಡೆಸುತ್ತಿದ್ದು, ಸಮಾಜ ಕಲ್ಯಾಣ, ಕಂದಾಯ, ಗ್ರಾಮೀಣಾಭಿವೃದ್ಧಿ ಮುಂತಾದ ಇಲಾಖೆಗಳಿಗೆ ಸಂಬಂಧಿಸಿದ ವಿವಿಧ ಸಮಿತಿಗಳಲ್ಲಿ ಅಧಿಕಾರೇತರ ಸದಸ್ಯರ ನೇಮಕ ಮಾಡಲು ಅವಕಾಶ ನೀಡಿದೆ. ಇದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಈ ಮಾತಿಗೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಪಕ್ಷದ ಶಾಸಕರು ಧ್ವನಿಗೂಡಿಸಿದರು. ಶಾಸಕ ನರೇಂದ್ರಸ್ವಾಮಿ ಸಹ ಆದೇಶ ಸರಿಯಲ್ಲ ಎಂದು ಹೇಳಿದರು. ಸರ್ಕಾರ ಈ ಕುರಿತು ಹೇಳಿಕೆ ನೀಡದಿದ್ದರೆ ಧರಣಿ ನಡೆಸುವುದಾಗಿಯೂ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದ ಬಾವಿಗೆ ಆಗಮಿಸಿದರು. ಈ ಕುರಿತು ಉತ್ತರ ನೀಡಿದ ಸಮಾಜ ಕಲ್ಯಾಣ ಸಚಿವ ಆಂಜನೇಯ, ಸಮಿತಿಗಳಲ್ಲಿ ಎಲ್ಲ ಜನರಿಗೂ ಅವಕಾಶ ಸಿಗಲಿ ಎಂಬ ಕಾರಣಕ್ಕಾಗಿ ಪ್ರಯೋಗಾತ್ಮಕವಾಗಿ ಸರ್ಕಾರ ಈ ಆದೇ ಹೊಡಿಸಿದೆ. ಕೆಲವು ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರು ತಮ್ಮ ಬೆಂಬಲಿಗರನ್ನೇ ವಿವಿಧ ಸಮಿತಿಗಳಿಗೆ ನೇಮಕ ಮಾಡಿಕೊಂಡಿದ್ದಾರೆ ಎಂದರು. ಇದರಿಂದ ಕೋಪಗೊಂಡ ನರೇಂದ್ರಸ್ವಾಮಿ `ನೀವು ಯಾರನ್ನು ಉದ್ದೇಶಿಸಿ ಈ ಮಾತನ್ನು ಹೇಳುತ್ತಿದ್ದೀರಿ? ಶಾಸಕರಿಗೆ ಅಪಮಾನ ಮಾಡುತ್ತಿದ್ದೀರಿ’ ಎಂದದರು. ನಂತರ ತಮ್ಮ ಸ್ಥಾನದಿಂದ ಎದ್ದು ಬಂದು ಆಂಜನೇಯ ಅವರೊಂದಿಗೆ ವಾಗ್ವಾದ ಆರಂಭಿಸಿದರು. ಒಂದು ಹಂತದಲ್ಲಿ ಇಬ್ಬರ ನಡುವೆ ತೀವ್ರ ಜಟಾಪಟಿ ಆರಂಭವಾದಾಗ ಉಳಿದ ಸದಸ್ಯರು ಅವರನ್ನು ಸಮಾಧಾನಪಡಿಸಿದರು. ಆದರೂ ಸಚಿವ ಆಂಜನೇಯ ನರೇಂದ್ರ ಸ್ವಾಮಿ ಅವರತ್ತ ಸಿಟ್ಟಿನಿಂದ ನೋಡುತ್ತಿದ್ದರು. ತಮ್ಮ ಆಸನಕ್ಕೆ ಮರಳಿದ ನರೇಂದ್ರಸ್ವಾಮಿ ಅವರು ಆಂಜನೇಯ ಅವರತ್ತ ದುರುಗುಟ್ಟಿ ನೋಡುತ್ತಿದ್ದರು. ಉಳಿದ ಸದಸ್ಯರಿಂದಾಗಿ ಇಬ್ಬರ ನಡುವೆ ನಡೆಯಬೇಕಾಗಿದ್ದ ಜಟಾಪಟಿ ಅಂತ್ಯವಾಯಿತು.
ಆದೇಶಕ್ಕೆ ಬಿತ್ತು ಬ್ರೇಕ್ : ತಾಲೂಕು ಮಟ್ಟದ ವಿವಿಧ ಸಮಿತಿಗಳಲ್ಲಿ ಆಧಿಕಾರೇತರ ಸದಸ್ಯರ ನೇಮಕ ಸಂಬಂಧಿಸಿದಂತೆ ಹೊರಡಿಸಿದ್ದ ಆದೇಶಕ್ಕೆ ಸರ್ಕಾರ ತಡೆ ನೀಡಿತು. ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಸಚಿವ ಆಂಜನೇಯ ಆದೇಶವನ್ನು ವಾಪಸ್ ಪಡೆದುಕೊಳ್ಳುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು
Click this button or press Ctrl+G to toggle between Kannada and English