ಬೆಂಗಳೂರು : ಬಿಗ್ ಬಜಾರ್ ಗ್ರೂಪ್‍ನ ಗೋದಾಮಿನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಸುಮಾರು 30 ಕೋಟಿ ನಷ್ಟ ಉಂಟಾಗಿದೆ. ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ 220ಕ್ಕೂ ಹೆಚ್ಚು ಸಿಬ್ಬಂದಿ ಹೊರಗೋಡಿ ಬಂದಿದ್ದರಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. 12 ಅಗ್ನಿ ಶಾಮಕ ದಳದ ವಾಹನಗಳು ಸತತ ಆರು ಗಂಟೆ ಕಾರ್ಯಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ.
ಆನೇಕಲ್ ಪಟ್ಟಣದ ಇಂಡ್ಲವಾಡಿ ಕ್ರಾಸ್‍ನಲ್ಲಿರುವ ಬಿಗ್ ಬಜಾರ್ ಗ್ರೂಪ್‍ಗೆ ಸೇರಿದ ಫೀಚರ್ ಸಪ್ಲೈ ಗೋದಾಮಿನಲ್ಲಿ ಗುರುವಾರ ಮಧ್ಯಾಹ್ನ 2.30ರ ಸುಮಾರಿನಲ್ಲಿ ಶಾರ್ಟ್ ಸಕ್ರ್ಯುಟ್‍ನಿಂದ ಬೆಂಕಿ ಕಾಣಿಸಿಕೊಂಡಿತು. ಮೊದಲು ಗೋದಾಮಿನ ಐದನೇ ಅಂತಸ್ತಿನಲ್ಲಿ ಕಾಣಿಸಿಕೊಂಡ ಬೆಂಕಿ ನಂತರ, 5 ಎಕರೆ ವಿಸ್ತೀರ್ಣದ ಗೋದಾಮಿಗೆ ಹಬ್ಬಿದ್ದು, ಗೋದಾಮು ಸಂಪೂರ್ಣವಾಗಿ ಅಗ್ನಿಗೆ ಆಹುತಿಯಾಗಿದೆ.
ಅಗ್ನಿ ಆಕಸ್ಮಿಕದಿಂದ ಅಂದಾಜು 30 ಕೋಟಿಗೂ ಹೆಚ್ಚು ಬೆಲೆ ಬಾಳುವ ಸಿದ್ಧ ಉಡುಪುಗಳು, ಎಲೆಕ್ಟ್ರಿಕ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳು, ಗೃಹ ಬಳಕೆ ವಸ್ತುಗಳು ಹಾಗೂ ಪೀಠೋಪಕರಣಗಳು ಭಸ್ಮವಾಗಿವೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ ರಮೇಶ್ ಬಾನೋತ್, ಅಗ್ನಿ ಅನಾಹುತದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿದ್ದು, ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English