ಡಿಸಿ ಕಚೇರಿ ಎದುರಲ್ಲೇ ವಾಮಾಚಾರ!

1:34 PM, Wednesday, February 5th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

vomacharaಮೈಸೂರು: ನಗರ  ಪ್ರದೇಶವಾದ  ಮೈಸೂರುನಲ್ಲಿ  ಇತ್ತೀಚಿನ ದಿನಗಳಲ್ಲಿ ವಾಮಾಚಾರ ಹೆಚ್ಚಾಗಿದೆ. ವಿದ್ಯಾವಂತರು ಸಹ ವಾಮಾಚಾರದಂಥ ಮೂಢನಂಬಿಕೆಯನ್ನು ಅನುಸರಿಸುತ್ತಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಎದುರು ವಾಮಾಚಾರ ಮಾಡಿಸಿರುವುದು ಮಂಗಳವಾರ ಪತ್ತೆಯಾಗಿದೆ.

ಸೋಮವಾರ ರಾತ್ರಿ ಯಾರೋ ವಾಮಾಚಾರ ಮಾಡಿಸಿ, ಜಿಲ್ಲಾಧಿಕಾರಿ ಕಚೇರಿಯಿಂದ ಮಹಾರಾಣಿ ಕಾಲೇಜಿನತ್ತ ಹೋಗುವ ರಸ್ತೆಯ ಮಧ್ಯಭಾಗದಲ್ಲಿ ಇರಿಸಿದ್ದಾರೆ.ಬಟ್ಟೆಯೊಂದರಲ್ಲಿ ಅದೇನನ್ನೋ ಸುತ್ತಿಟ್ಟಿದ್ದಾರೆ. ಅದಕ್ಕೆ ಅರಿಶಿನನ, ಕುಂಕುಮ ಹಚ್ಚಿದ್ದಾರೆ. ಅಲ್ಲದೆ, ತೆಂಗಿನ ಕಾಯೊಂದನ್ನು ಒಡೆಯಲಾಗಿದೆ. ಆ ಮಾರ್ಗವಾಗಿ ಸಂಚರಿಸುವವರು ವಾಮಾಚಾರವನ್ನು ನೋಡಿ ಆತಂಕಗೊಳ್ಳುತ್ತಿದ್ದಾರೆ.

ಮಹಾರಾಣಿ ಮಹಿಳಾ ಕಾಲೇಜು, ಮಹಾರಾಜ ಜೂನಿಯರ್ ಕಾಲೇಜು ಜಿಲ್ಲಾಧಿಕಾರಿ ಕಚೇರಿ ಎದುರಲ್ಲೇ ಇದೆ. ಈ ಕಾಲೇಜುಗಳಿಗೆ ನೂರಾರು ವಿದ್ಯಾರ್ಥಿಗಳು ಪ್ರತಿನಿತ್ಯ ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಆಗಾಗ ಇಂಥ ವಾಮಾಚಾರ ಮಾಡಿಸಿರುವದನ್ನು ವಿದ್ಯಾರ್ಥಿಗಳು ನೋಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದ ಬಳಿ ವಾಮಾಚಾರ ಮಾಡಿಸಿ ರಸ್ತೆ ಮಧ್ಯ ಭಾಗದಲ್ಲಿ ಬಿಸಾಡಿದ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ವಾಮಾಚಾರ ಮಾಡಿಸಲಾಗಿದ್ದ ವಸ್ತುಗಳನ್ನು ತೆರವುಗೊಳಿಸಿ ಆತಂಕ ದೂರ ಮಾಡಿದ್ದರು.ಇದಾದ ಕೆಲವೇ ದಿನಗಳಲ್ಲಿ ಮತ್ತೊಮ್ಮೆ ವಾಮಾಚಾರ ಮಾಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯ ಮಧ್ಯಭಾಗದಲ್ಲಿ ಇರಿಸಿದ್ದಾರೆ. ಅಲ್ಲದೆ, ವಾಮಾಚಾರವನ್ನು ಯಾರೂ ತೆಗೆದು ಬಿಸಾಡಬಾರದು ಹಾಗೂ ವಾಹನಗಳನ್ನು ಅದರ ಮೇಲೆ ಹತ್ತಿಸಬಾರದು ಎಂದು ವಾಮಾಚಾರದ ಮೇಲ್ಭಾಗದಲ್ಲಿ ಸಿಮೆಂಟ್ ಕಲ್ಲೊಂದನ್ನು ಸಹ ಇರಿಸಿದ್ದಾರೆ.

ನಗರದ ವಿವಿಧ ಬಡಾವಣೆ, ಹಾಸ್ಟೆಲ್ ಮತ್ತು ಗ್ರಾಮಾಂತರ ಪ್ರದೇಶಗಳಿಂದ ಕಾಲೇಜಿಗೆ ಬರುವ ವಿದ್ಯಾರ್ಥಿನಿಯರು ಹೆಚ್ಚಾಗಿ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಆಗಾಗ ವಾಮಾಚಾರ ಮಾಡಿ ರಸ್ತೆಯಲ್ಲಿ ಹಾಕಿರುತ್ತಾರೆ. ಅದನ್ನು ತೆಗೆದು ಹಾಕಬೇಕೆಂದು ಕೆಲವು ವಿದ್ಯಾರ್ಥಿನಿಯರು ಪ್ರಯತ್ನ ಮಾಡಿದ್ದಾರೆ. ಆದರೆ, ವಾಮಾಚಾರದಿಂದ ತೊಂದರೆ ಆಗಬಹುದೆಂಬ ಸಹಪಾಠಿಗಳ ಎಚ್ಚರಿಕೆ ಹಿನ್ನೆಲೆಯಲ್ಲಿ ವಾಮಾಚಾರ ವಸ್ತುಗಳನ್ನು ತೆರವು ಮಾಡುತ್ತಿಲ್ಲ. ಕೆಲವು ವಿದ್ಯಾರ್ಥಿನಿಯರು ವಾಮಾಚಾರ ಮಾಡಿಸಿರುವ ಮಾರ್ಗದಲ್ಲಿ ಹೋಗಲು ಸಹ ಹೆದರುತ್ತಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಬಳಿ ತಮ್ಮ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರತಿಭಟಿಸಲು ಬರುವವರು ಸಹ ವಾಮಾಚಾರವನ್ನು ಕಂಡು ಹೆದರುವುದುಂಟು. ಕೆಲವು ಸಂಘಟನೆಯವರು ಮಾತ್ರ ವಾಮಾಚಾರಕ್ಕೆ ಹೆದರದೆ ಮುಂದೆ ಸಾಗುತ್ತಾರೆ. ಜಿಲ್ಲಾಧಿಕಾರಿ ಕಚೇರಿ ಬಳಿ ಹಲವು ರಸ್ತೆಗಳು ಸಂಪರ್ಕಿಸುತ್ತವೆ.

ಹೀಗಾಗಿ ಎಲ್ಲೋ ವಾಮಾಚಾರ ಮಾಡಿಸುವವರು ಸಹ ಇಲ್ಲಿಗೆ ತಂದು ನಡುರಸ್ತೆಯಲ್ಲಿ ಬಿಸಾಡಿ ಹೋಗುತ್ತಾರೆ. ಈ ವಾಮಾಚಾರಕ್ಕೆ ಯಾರು ಕಡಿವಾಣ ಹಾಕುತ್ತಾರೋ ಕಾದು ನೋಡಬೇಕಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English