ದಾಖಲೆ ಬದಲು, ಭಾರಿ ಘಾಟು

2:59 PM, Wednesday, February 5th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Caste-,-Income-Certificateಬೆಂಗಳೂರು: ಜಾತಿ, ಆದಾಯ ಪ್ರಮಾಣ ಪತ್ರ ಬದಲಿಸಿ ಸಿಇಟಿ ಸೀಟು, ಸಾಮಾನ್ಯ ಪ್ರವೇಶ ಪರೀಕ್ಷೆಗೆ ಸಲ್ಲಿಸಿದ ಮೂಲ ಅರ್ಜಿ ದಾಖಲೆಗಳನ್ನು ಏಳು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಬದಲಿಸಿದ್ದಾರೆ! ಇವರಲ್ಲಿ ಸುಮಾರು 2100 ವಿದ್ಯಾರ್ಥಿಗಳು ವೈದ್ಯ, ದಂತವೈದ್ಯ, ಎಂಜಿನಿಯರಿಂಗ್ ಹಾಗೂ ಫಾರ್ಮಾ ಸೈನ್ಸ್ ಕೋರ್ಸ್‌ಗಳಲ್ಲಿ ಸೀಟು ಪಡೆದಿದ್ದಾರೆ. ಈ ವಿದ್ಯಾರ್ಥಿಗಳೆಲ್ಲ ಅಕ್ರಮ ಹಾದಿ ತುಳಿದು ಸೀಟು ಪಡೆದಿದ್ದಾರೆ ಎಂದಲ್ಲ. ಆದರೆ ಮೂಲ ಅರ್ಜಿಯಲ್ಲಿನ ಜಾತಿ, ಆದಾಯ ಪ್ರಮಾಣಪತ್ರ ಹಾಗೂ ಕೆಟಗರಿ ಬದಲಿಸಿರುವುದು ಸಂಶಯಕ್ಕೆ ಕಾರಣವಾಗಿದೆ.

ಏಕೆಂದರೆ ಮಾರ್ಚ್ ತಿಂಗಳಲ್ಲಿ ವಿದ್ಯಾರ್ಥಿಗಳು ಸಲ್ಲಿಸುವ ಸಿಇಟಿ ಅರ್ಜಿಯ ಕೊನೆಯಲ್ಲಿಯೂ ತಾವು ನೀಡಿದ ದಾಖಲೆಗಳು ಸತ್ಯ ಎಂದು ಸಹಿ ಮಾಡಿ ಪ್ರಮಾಣೀಕರಿಸಿರುತ್ತಾರೆ. ಈ ಗೊಂದಲಕ್ಕೆ ಎಡೆಮಾಡಿಕೊಟ್ಟಿರುವುದು ಮೇ 24ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಚಕ್ರವರ್ತಿ ಮೋಹನ್ ಹೊರಡಿಸಿದ್ದ ಸುತ್ತೋಲೆ. ಈ ಸುತ್ತೋಲೆ ಪ್ರಕಾರ ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಸಾಮಾನ್ಯ ವರ್ಗದಿಂದ ಎಸ್‌ಸಿ, ಎಸ್‌ಟಿ, 1ಜಿ, 2ಎ, 2ಬಿ, 3ಎ ಮತ್ತು 3ಬಿಗೆ

ಬದಲಿಸಲು ಅವಕಾಶ ನೀಡಲಾಗಿತ್ತು. ಆದರೆ ಉನ್ನತ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳ ಪ್ರಕಾರ ಮೇ 25ರಂದು ಹೊರಡಿಸಿದ ಸುತ್ತೋಲೆ ಕೂಡ ದುರುದ್ದೇಶಪೂರ್ವಕವಾಗಿದೆ ಹಾಗೂ ಕಾನೂನು ಬಾಹಿರ.

ಈಗ ಸಿಐಡಿಗೆ ವಹಿಸಿರುವ 70 ಪ್ರಕರಣ ಕೇವಲ ಸಾಗರದಿಂದ ಬೊಗಸೆಯಲ್ಲಿ ನೀರು ಎತ್ತಿದಂತೆ ಎಂಬ ಸಂಶಯವೂ ಪ್ರಾಧಿಕಾರ ಹಾಗೂ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕಾಡುತ್ತಿದೆ. ಮಾರ್ಚ್ ತಿಂಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇವೆಲ್ಲ ಅಭ್ಯರ್ಥಿಗಳು ಅರ್ಜಿಯ ಕೊನೆಯಲ್ಲಿ ಬೆರಳಚ್ಚು ಸಹಿತ ಹಸ್ತಾಕ್ಷರ ಹಾಕಿರುತ್ತಾರೆ.

ಸಹಿಯ ಮುಂಚೆ ಘೋಷಣಾಪತ್ರದಲ್ಲಿ ಹೀಗಿರುತ್ತದೆ, ‘ಅರ್ಜಿಯಲ್ಲಿ ದಾಖಲಿಸಿರುವ ಎಲ್ಲ ಮಾಹಿತಿಗಳು ನನಗೆ ತಿಳಿದಂತೆ ಸಮರ್ಪಕವಾಗಿದೆ. ಸಿಇಟಿ-2013ರ ಮಾರ್ಗದರ್ಶಿ ಪುಸ್ತಕವನ್ನು ಓದಿದ್ದೇನೆ. ಒಂದೊಮ್ಮೆ ನಾನು ಸಲ್ಲಿಸಿದ ಮಾಹಿತಿ ತಪ್ಪಾಗಿದ್ದರೆ ಸೀಟನ್ನು ಹಿಂಪಡೆಯುವ ಅಧಿಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕಿದೆ ಹಾಗೂ ನನ್ನ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ವಿಚಾರಣೆ ನಡೆಸಬಹುದು.’

ಈ ಅರ್ಜಿಯಲ್ಲಿ ಸಂಪೂರ್ಣ ವಿಳಾಸ, ಜಾತಿ, ಆದಾಯ ಹಾಗೂ ಕೆಟಗರಿಯ ವಿವರವನ್ನು ಅಭ್ಯರ್ಥಿಗಳು ನೀಡಿರುತ್ತಾರೆ. ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ತಮ್ಮ ಅರಿವಿಗೆ ಬಾರದೇ ಇಂತಹ ಘೋಷಣಾ ಪತ್ರಕ್ಕೆ ಸಹಿ ಹಾಕಿರುವುದಿಲ್ಲ. ಇನ್ನು ಪ್ರಾಧಿಕಾರದ ಅಧಿಕಾರಿಗಳು ತಪ್ಪಾಗಿ ದಾಖಲಿಸಿದ್ದರೆ ಸರಿಪಡಿಸಲು ಅವಕಾಶವಿರುತ್ತದೆ. ಪ್ರಾಧಿಕಾರದ ಮೂಲಗಳ ಪ್ರಕಾರ ಈ 7 ಸಾವಿರ ಪ್ರಕರಣಗಳು ಇಲಾಖೆಯ ನಿರ್ಲಕ್ಷ್ಯದಿಂದ ಆಗಿರುವುದಲ್ಲ.

2012ರ ವೃತ್ತಿಪರ ಕೋರ್ಸ್‌ಗಳ ಕೌನ್ಸೆಲಿಂಗ್‌ಗೆ ಫೆ. 27ರಂದು ಸುತ್ತೋಲೆ ಹೊರಡಿಸಲಾಗಿತ್ತು. ಸುತ್ತೋಲೆಯಲ್ಲಿನ ಪ್ರಮುಖ ಟಿಪ್ಪಣಿ 4ನೇ ಅಂಶದಲ್ಲಿ ದಾಖಲಾಗಿರುವಂತೆ ಅರ್ಜಿಯಲ್ಲಿ ಸಲ್ಲಿಸಿದ ಜಾತಿ, ಆದಾಯ ಹಾಗೂ ಕೆಟಗರಿಯನ್ನು ಯಾವುದೇ ಕಾರಣಕ್ಕೂ ಬದಲಿಸಲು ಸಾಧ್ಯವಿಲ್ಲ. ಆದರೆ 2013ರ ಫೆಬ್ರವರಿಯಲ್ಲಿ ಹೊರಡಿಸಿದ ಸುತ್ತೋಲೆಯಲ್ಲಿ ಈ ಅಂಶವನ್ನು ದಾಖಲಿಸಿಯೇ ಇರಲಿಲ್ಲ. ಇದಕ್ಕೆ ಪರ್ಯಾಯವಾಗಿ ಮತ್ತೆ ಮೇ 24ರಂದು ಹೊರಡಿಸಿದ ಸುತ್ತೋಲೆ ಪ್ರಕಾರ ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಬದಲಿಸಲು ಅವಕಾಶ ನೀಡಲಾಯಿತು. ಆದರೆ ಈ ಅಕ್ರಮಗಳಿಗೆ ಆಸ್ಪದ ನೀಡಲೆಂದೇ ಉದ್ದೇಶಪೂರ್ವಕವಾಗಿ ಈ ಸುತ್ತೋಲೆ ಹೊರಡಿಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.

2100 ಅರ್ಜಿಗಳ ಪರಿಶೀಲನೆ ಆಗಬೇಕಿದೆ: ಈಗಾಗಲೇ ಬೆಳಕಿಗೆ ಬಂದಿರುವ 70 ಪ್ರಕರಣಗಳನ್ನು ಇದರೊಂದಿಗೆ ಸೇರಿಸದೇ ಪ್ರತ್ಯೇಕವಾಗಿ ವಿಚಾರಣೆ ನಡೆಸುವ ಅಗತ್ಯವಿದೆ. ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಈ 2100 ಅಭ್ಯರ್ಥಿಗಳು ಸಲ್ಲಿಸಿದ ಮಾಹಿತಿಯು ಮೂಲ ಮಾಹಿತಿಗೆ ಹೇಗೆ ವೈರುಧ್ಯವಾಗಿದೆ ಎಂಬುದನ್ನು ಪರಿಶೀಲಿಸಬೇಕಿದೆ. ವಿದ್ಯಾರ್ಥಿಗಳ ಹಂತದಲ್ಲಿಯೇ ಅಕ್ರಮ ನಡೆದಿರುವ ಸಾಧ್ಯತೆಯೂ ಇರುತ್ತದೆ. ಇಷ್ಟೊಂದು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಅರ್ಜಿಯಲ್ಲಿ ಸಮರ್ಪಕವಾಗಿ ಮಾಹಿತಿ ತುಂಬದಷ್ಟು ಅಲ್ಪಬುದ್ಧಿ ಹೊಂದಿದ್ದರೇ ಎಂಬ ಸಂಶಯ ಮೂಡುತ್ತದೆ.

70 ಪ್ರಕರಣಗಳ ಅಕ್ರಮಕ್ಕೂ, ಸುತ್ತೋಲೆಗೂ ಸಂಬಂಧವಿಲ್ಲ, ಇದೇ ಸುತ್ತೋಲೆ ಮೂಲಕ ಎಲ್ಲ ಅಕ್ರಮಗಳನ್ನು ಮುಚ್ಚಿಕೊಳ್ಳುವ ಪ್ರಯತ್ನವನ್ನು ಕೆಲ ಅಧಿಕಾರಿಗಳು ಮಾಡುತ್ತಿದ್ದಾರೆ. ಆದರೆ ಈಗಾಗಲೇ ಮೇಲ್ನೋಟಕ್ಕೆ ಅಕ್ರಮ ಎಂದು ಸಾಬೀತಾಗಿರುವ 70 ಪ್ರಕರಣಗಳಲ್ಲಿ ದಾಖಲೆ ತಿದ್ದಿರುವುದು ಈ ಸುತ್ತೋಲೆ ವ್ಯಾಪ್ತಿಯನ್ನು ಕೂಡ ಮೀರುತ್ತದೆ. ಮೇ 25ರ ಸುತ್ತೋಲೆ ಪ್ರಕಾರ ಮೊದಲ ಹಂತದ ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಮಾತ್ರ ದಾಖಲೆ ತಿದ್ದಬಹುದಿತ್ತು. ಸೀಟು ಪಡೆದ 70 ಅಭ್ಯರ್ಥಿಗಳು ಸೇರಿದಂತೆ 122 ವಿದ್ಯಾರ್ಥಿಗಳು ಜಾತಿ, ಆದಾಯ ಹಾಗೂ ಕೆಟಗರಿ ಬದಲಿಸಲು ಈ ದಾಖಲೆ ಪರಿಶೀಲನೆ ಅಂತ್ಯವಾದ ಬಳಿಕ ಅರ್ಜಿ ಸಲ್ಲಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English