ಬೆಂಗಳೂರು: ನಾನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಬಂದ ಮೇಲೆ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದ್ದೇನೆ. ಆದರೆ, ನಾನು ಪ್ರಯತ್ನಿಸಿದ ಎಲ್ಲ ಕೆಲಸಗಳಿಗೆ ವಿವಿ ಸಿಬ್ಬಂದಿ ಸಂಪೂರ್ಣ ಸಹಕರಿಸಿಲ್ಲ ಎಂಬ ಅಸಮಧಾನ ನನ್ನಲ್ಲೇ ಉಳಿದಿದೆ. ಆದರೂ, ಕಳೆದ ಒಂದು ವರ್ಷದಲ್ಲಿ ನಾನು ವಿವಿಯನ್ನು ಅಭಿವೃದ್ಧಿ ಪಥದೆಡೆಗೆ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ.
ಇದು ಬೆಂಗಳೂರು ವಿವಿ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಅವರು ನುಡಿಗಳು. ಭಾರಿ ವಿವಾದದಲ್ಲಿದ್ದ ಬೆಂಗಳೂರು ವಿಶ್ವವಿದ್ಯಾಲಯವನ್ನು ‘ಶಾಂತನಡೆ’ಯಲ್ಲಿ ಕೊಂಡೊಯ್ಯುವಲ್ಲಿ ಈವರೆಗೂ ತಿಮ್ಮೇಗೌಡ ಯಶಸಾಧಿಸಿದ್ದಾರೆ. ಬೆಂಗಳೂರು ವಿವಿ ಕುಲಪತಿ ಪ್ರೊ.ಬಿ. ತಿಮ್ಮೇಗೌಡ ಅವರು ‘ಕುಲಪತಿ’ ಹುದ್ದೆ ಅಲಂಕರಿಸಿ ಫೆ.6ಕ್ಕೆ ಒಂದು ವರ್ಷ ಕಳೆದಿದೆ. ಈ ಸಂದರ್ಭದಲ್ಲಿ ‘ಕನ್ನಡಪ್ರಭ’ದೊಂದಿಗೆ ಅವರು ಮನಬಿಚ್ಚಿ ಮಾತನಾಡಿದ್ದಾರೆ.
* ಕುಲಪತಿ ಹುದ್ದೆ ಅಲಂಕರಿಸಿದ ನಂತರ ಮಾಡಿದ ಮೊದಲ ಕೆಲಸ ಏನು?
ನಾನು ಮೊದಲು ಪರೀಕ್ಷಾ ವಿಭಾಗದಲ್ಲಿ ಕೆಲವು ಸುಧಾರಣೆ ತರಲು ಬಯಸಿದ್ದೆ. ಈ ಹಿನ್ನೆಲೆಯಲ್ಲಿ ಕೇಂದ್ರೀಕೃತ ಮೌಲ್ಯಮಾಪನ ನಡೆಸಿದೆ. ಒಂದೇ ಸಭಾಂಗಣದಲ್ಲಿ ಎಲ್ಲ ವಿಷಯಗಳ ಮೌಲ್ಯಮಾಪನ ನಡೆದರಿಂದ ಸಾಧ್ಯವಾದಷ್ಟು ಬೇಗ ಫಲಿತಾಂಶ ನೀಡಲು ಅನುಕೂಲವಾಯಿತು.
* ವಿವಿಯಲ್ಲಿ ಕಟ್ಟಡಗಳ ಕೊರತೆ ಇದೆ. ಹಳೆಯ ಕಟ್ಟಡಗಳ ಪರಿಸ್ಥಿತಿ ಏನು?
ನಾನು ಅಧಿಕಾರವಹಿಸಿಕೊಂಡ ನಂತರ ಕಾಮಗಾರಿ ಸ್ಥಗಿತಕೊಂಡಿದ್ದ ಕಟ್ಟಡಗಳನ್ನು ಮರು ನಿರ್ಮಾಣ ಮಾಡುವಂತೆ ತಿಳಿಸಿದ್ದೆ. ಆದರೆ, ಕೆಲವು ದಿನಗಳ ನಂತರ ನಾನೇ ನೆನಪಿಸಿದರೂ ಆ ಕೆಲಸ ಹಾಗೇ ಉಳಿಕೆಯಾಗಿತ್ತು. ಪ್ರತಿಯೊಬ್ಬರ ಮೇಲಿಯೂ ಒತ್ತಡ ತಂದು ಇಂದು ಹಳೇ ಕಟ್ಟಡ ರಿಪೇರಿ ಮಾಡಿಸಬೇಕಾಯಿತು.
* ಸಿಬ್ಬಂದಿ ನಿಮ್ಮ ಸೂಚನೆ ಅನುಸರಿಸುತ್ತಾರಾ?
ಮಂಗಳೂರಿನಲ್ಲಿ ಹಂಗಾಮಿ ಕುಲಪತಿಯಾಗಿದ್ದ ನಾನು ನೀಡುತ್ತಿದ್ದ ಕೆಲವು ಸೂಚನೆಗಳನ್ನು ಪ್ರತಿಯೊಬ್ಬರು ಯಾವುದೇ ಅಸಡ್ಡೆ ತೋರಿಸಿದೆ ನಿಷ್ಠೆಯಿಂದ ನಿರ್ವಹಿಸುತ್ತಿದ್ದರು. ಆದರೆ, ಬೆಂಗಳೂರಿನಲ್ಲಿ ಈ ರೀತಿ ಮನೋಭಾವ ಇಲ್ಲ. ಎಷ್ಟೇ ಹೇಳಿದರು ಒತ್ತಡ ತಂದರೂ ಶೀಘ್ರಗತಿಯಲ್ಲಿ ಕೆಲಸ ಮಾಡುವರ ಸಂಖ್ಯೆ ತೀರಾ ಕಡಿಮೆ.
* ಅಕ್ರಮ ಬಿಎಡ್ ಕಾಲೇಜುಗಳ ಹಾವಳಿಗೆ ಬ್ರೇಕ್ ಬಿದ್ದಿದೆ ಅಂತೀರಾ.?
ಮೊದಲು ಬೆಂಗಳೂರು ವಿವಿ ವ್ಯಾಪ್ತಿಯಲ್ಲಿ 98ಕ್ಕೂ ಹೆಚ್ಚಿನ ಬಿಎಡ್ ಕಾಲೇಜುಗಳಿದ್ದವು. ಇದೀಗ ಅವುಗಳ ಸಂಖ್ಯೆ 49ಕ್ಕೆ ಇಳಿದಿದೆ. ಕೆಲವೊಂದು ಕಾಲೇಜುಗಳು ಹೈಕೋರ್ಟ್ ಮೂಲಕ ಅನುಮತಿ ಪಡೆದುಕೊಂಡು ಬಂದರೂ ಗರಿಷ್ಠ ಕಾಲೇಜುಗಳ ಸಂಖ್ಯೆ 65ಕ್ಕೆ ನಿಲ್ಲಬಹುದು. ಹೀಗಾಗಿ ಬಿಎಡ್ ಕಾಲೇಜು ಹಾವಳಿಗೆ ಬ್ರೇಕ್ ಹಾಕಿರುವ ವಿಚಾರದಲ್ಲಿ ನನಗೆ ತೃಪ್ತಿ ಇದೆ.
* ಯಾರೇ ಕುಲಪತಿಯಾದರೂ ಸುಳ್ಳು ಅಂಕಪಟ್ಟಿ ಹಾವಳಿ ನಡೆಯುತ್ತಲೇ ಇರುತ್ತದಲ್ಲ?
ಹಾಗೇ ಹೇಳುವುದು ತಪ್ಪು. ನಾವು ಇದೀಗ ಅಂತಹ ಪ್ರಕರಣಗಳನ್ನು ಗುರುತಿಸಿ ಪಟ್ಟಿ ಮಾಡಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದೇವೆ. ಅಂಕಪಟ್ಟಿ ನಕಲು ಮಾಡಿಕೊಡುತ್ತೇನೆ ಎಂಬ ವಿಷಯ ತಲುಪಿದ ತಕ್ಷಣ ನನಗೆ ತಿಳಿಸಿದರೆ ಅಂತಹರ ವಿರುದ್ಧ ಕ್ರಮ ಜರುಗಿಸಬಹುದು.
* ವಿವಿಯ ಬಲ ಮತ್ತು ದೌರ್ಬಲ್ಯ ಏನು?
ವಿವಿಯಲ್ಲಿ ಸಾಕಷ್ಟು ಸ್ಥಳಾವಕಾಶವಿದೆ. ಸಾಕಷ್ಟು ಕಾಲೇಜುಗಳು ನಮ್ಮಿಂದ ಸಂಯೋಜನೆ ಪಡೆದಿರುವುದರಿಂದ ದೊಡ್ಡ ವಿವಿ ಎಂಬ ಖ್ಯಾತಿಯೇ ವಿವಿಯ ಬಲ. ಸಿಬ್ಬಂದಿ ಮತ್ತು ಶಿಕ್ಷಕರ ಸಂಖ್ಯೆ ಕಡಿಮೆ ಇರುವುದರಿಂದ ನಿಗದಿತ ಸಮಯದಲ್ಲಿ ನಡೆಯಬೇಕಾಗಿರುವ ಕೆಲಸಗಳು ನಡೆಯದಿರುವುದು ದೌರ್ಬಲ್ಯ.
* ವಿದ್ಯಾರ್ಥಿಗಳ ಸಮಸ್ಯೆ ಕೇಳೋರು ಯಾರು?
ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಸಮಸ್ಯೆಗಳು ಇದ್ದೇ ಇರುತ್ತವೆ. ಆದರೆ, ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿಗಳಿಗಾಗಿ 19 ಲಕ್ಷ ವೆಚ್ಚದಲ್ಲಿ ನೂತನ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದೇವೆ. ಅಲ್ಲದೆ, ನೂತನ ವಿದ್ಯಾರ್ಥಿ ನಿಲಯಗಳು ಸ್ಥಾಪಿಸಲಾಗುತ್ತಿರುವುದರಿಂದ ಮುಂದೆ ಸಮಸ್ಯೆಗಳು ಕ್ಷೀಣಿಸಲಿವೆ.
ಎಲ್ಲ ಕಡೆ ಸಣ್ಣಪುಟ್ಟ ಸಮಸ್ಯೆಗಳು ಇದ್ದೇ ಇರುತ್ತವೆ. ಈ ಸಮಸ್ಯೆಗಳನ್ನು ಮಾಧ್ಯಮಗಳು ಪ್ರಕಟಿಸುವ ಮೂಲಕ ನಮ್ಮ ಗಮನಕ್ಕೆ ತರುವುದು ಸಂತೋಷದ ವಿಷಯ. ನಮ್ಮನ್ನು ತಿದ್ದಿಕೊಳ್ಳಲು ಇರುವ ಅವಕಾಶ ಇದು ಎಂದೇ ನಾನು ಭಾವಿಸುತ್ತೇನೆ.
Click this button or press Ctrl+G to toggle between Kannada and English