ಬೆಂವಿವಿ ವಿಭಜನೆ ಅಗತ್ಯ

1:15 PM, Thursday, February 6th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

siddaramaiahಬೆಂಗಳೂರು:  ಬೆಂಗಳೂರು ವಿಶ್ವವಿದ್ಯಾಲಯ ಅತ್ಯಂತ ದೊಡ್ಡದಾಗಿರುವುದರಿಂದ ವಿಭಜಿಸುವುದು ಅವಶ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಬೆಂವಿವಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸುವರ್ಣ ಮಹೋತ್ಸವ ಆಚರಣೆ ಚಟುವಟಿಕೆಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

3.5ಲಕ್ಷ ವಿದ್ಯಾರ್ಥಿಗಳು: ಈ ಹಿಂದೆ ವಿವಿ 32 ಕಾಲೇಜು ಹೊಂದಿತ್ತು. 16,300 ವಿದ್ಯಾರ್ಥಿಗಳಿದ್ದರು. ಇಂದು 3.5ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 650ಕ್ಕೂ ಹೆಚ್ಚಿನ ಕಾಲೇಜುಗಳು ಇಂದು ಸಂಯೋಜನೆ ಪಡೆದಿರುವುದರಿಂದ ವಿವಿ ವ್ಯಾಪ್ತಿ ಬಹಳ ದೊಡ್ಡದಾಗಿದೆ. ಈ ಹಿನ್ನೆಲೆಯಲ್ಲಿ ವಿವಿ ವಿಭಜನೆ ಅವಶ್ಯ ಎಂದರು.

ಏಷ್ಯಾದಲ್ಲೇ ಶ್ರೇಷ್ಠ ವಿವಿ: ಮಾಹಿತಿಗಳ ಪ್ರಕಾರ ಏಷ್ಯಾದಲ್ಲೇ ಬೆಂಗಳೂರು ವಿವಿ ಶ್ರೇಷ್ಠ ವಿವಿ ಎಂದು ಗುರುತಿಸಿಕೊಂಡಿದೆ. ಭಾರತದಲ್ಲಿರುವ ವಿವಿಗಳ ಪೈಕಿ ಬೆಂಗಳೂರು ವಿವಿ 14ನೇ ಸ್ಥಾನ ಪಡೆದುಕೊಂಡಿದೆ ಎಂದರು.

ವಿಜ್ಞಾನಿಗಳಾಗಿ: ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳು ವೈದ್ಯ ಅಥವಾ ಎಂಜಿನಿಯರಿಂಗ್ ಓದಬೇಕು, ಹೆಚ್ಚಿನ ಹಣ ಸಂಪಾದಿಸುವಂತಾಗಬೇಕು ಎಂದು ಆಸೆ ಇರುತ್ತದೆ. ಆದರೆ, ಮಕ್ಕಳು ಪೋಷಕರ ಆಸೆಗೆ ಬಲಿಯಾಗುವುದು ಬೇಡ.  ವಿಜ್ಞಾನಿ ಸಹ ಆಗಬಹುದು. ಪ್ರೊ.ಯು.ಆರ್.ರಾವ್, ಸಿ.ಎನ್.ಆರ್. ರಾವ್ ಇವರೆಲ್ಲಾ ವಿಜ್ಞಾನಿಗಳಾಗಿ ಸಮಾಜಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ. ನೀವು ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡು ನಿಮ್ಮ ಗುರಿ ಮುಟ್ಟಲು ಪ್ರಯತ್ನಿಸಿ ಎಂದು ಸಲಹೆ ನೀಡಿದರು.

ವೇಗದ ಬೆಳವಣಿಗೆ: ವಿಜ್ಞಾನಿ ಪ್ರೊ.ಯು.ಆರ್. ರಾವ್ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಮುಂದಿನ 50 ವರ್ಷಗಳಲ್ಲಿ ಬಾಹ್ಯಾಕಾಶಕ್ಕೆ ಸುಲಭವಾಗಿ ಪ್ರತಿಯೊಬ್ಬರೂ ಸಂಚರಿಸಬಹುದು ಎಂದರೆ, ಇಂದು ನಂಬುವುದಿಲ್ಲ. ಆದರೆ, ಮುಂದಿನ ವರ್ಷಗಳಲ್ಲಿ ನೀವೇ ಈ ಪ್ರಯೋಗವನ್ನು ನೋಡಬಹುದು ಎಂದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಚಿವ ಎಚ್.ಎಂ. ರೇವಣ್ಣ, ವಿವಿ ಕುಲಪತಿ ಪ್ರೊ.ಬಿ. ತಿಮ್ಮೇಗೌಡ, ಕುಲಸಚಿವೆ ಪ್ರೊ.ಕೆ.ಕೆ. ಸೀತಮ್ಮ ಮತ್ತಿತರರು ಉಪಸ್ಥಿತರಿದ್ದರು.

ರಾಜಕೀಯ ಲೂಟಿ ಮಾಡಲು ಅಲ್ಲ, ಯುವಕರು ರಾಜಕೀಯಕ್ಕೆ ಬನ್ನಿ. ಆದರೆ, ರಾಜಕೀಯ ವ್ಯವಸ್ಥೆ ಶುದ್ಧೀಕರಣಗೊಳಿಸುತ್ತೇನೆ ಎಂಬ ನಂಬಿಕೆ ಇಟ್ಟುಕೊಂಡು ಬನ್ನಿ.  ಬಂದು ಲೂಟಿ ಮಾಡಲು ಪ್ರಯತ್ನಿಸಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದರು. ಬೆಂಗಳೂರು ವಿವಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಸಾಕಷ್ಟು ಯುವಕರಿದ್ದಾರೆ. ನಾನು ನಿಮ್ಮನ್ನು ರಾಜಕೀಯಕ್ಕೆ ಬರಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಕೆಲವರು ಸೇವಾ ಮನೋಭಾವ ಇಟ್ಟುಕೊಂಡು ಬಂದು ಆನಂತರ ಲೂಟಿ ಮಾಡುತ್ತಿದ್ದಾರೆ. ಆದರೆ, ನೀವು ಈ ರೀತಿ ಆಗಬೇಡಿ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English