ಮಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕರಾಮುವಿ) ಪ್ರಥಮ ಹಾಗೂ ಅಂತಿಮ ವರ್ಷದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಗೆ ಕೊನೆಕ್ಷಣದಲ್ಲಿ ಸಂಪರ್ಕ ಕಾರ್ಯಕ್ರಮ (ಕಾಂಟಾಕ್ಟ್ ಪ್ರೋಗ್ರಾಮ್) ಕಡ್ಡಾಯಗೊಳಿಸಿದೆ. ಅಷ್ಟು ಮಾತ್ರವಲ್ಲ, ಅಸೈನ್‌ಮೆಂಟ್ (ಪ್ರಬಂಧ)ವಿಷಯವನ್ನು ವೆಬ್‌ಸೈಟ್‌ನಲ್ಲಿ ಹಾಕದೆ, ಸಂಪರ್ಕ ಕಾರ್ಯಕ್ರಮಕ್ಕೆ ಹಾಜರಾದವರಿಗೆ ಮಾತ್ರ ನೀಡುವುದಾಗಿ ಹೇಳಿದೆ.
ಸಂಪರ್ಕ ಕಾರ್ಯಕ್ರಮಗಳನ್ನು ತನ್ನ ಪ್ರಾದೇಶಿಕ ಕೇಂದ್ರಗಳಲ್ಲಿ ಆಯೋಜಿಸುವ ಬದಲು ಒಂದೇ ಕಡೆ ಮೈಸೂರಿನಲ್ಲಿ ನಡೆಸುತ್ತಿದೆ. ವಿವಿಯ ದಿಢೀರ್ ಕ್ರಮಕ್ಕೆ ವಿದ್ಯಾರ್ಥಿ ಸಮೂಹದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸಂಪರ್ಕ ಕಾರ್ಯಕ್ರಮಕ್ಕೆ ಹಾಜರಾಗದವರು ಅಸೈನ್‌ಮೆಂಟ್ ಬರೆಯುವಂತಿಲ್ಲ, ಅಸೈನ್‌ಮೆಂಟ್ ಬರೆಯದಿದ್ದರೆ ತಲಾ 10 ಅಂಕ ಕಡಿಮೆಯಾಗುತ್ತದೆ. ಇಂಥ ಸಂದಿಗ್ಧ ಪರಿಸ್ಥಿಯಲ್ಲಿದ್ದಾರೆ ವಿದ್ಯಾರ್ಥಿಗಳು.
2005 ಮತ್ತು 2007ರಲ್ಲಿ ಸಂಪರ್ಕ ಕಾರ್ಯಕ್ರಮ ಕಡ್ಡಾಯವಾಗಿತ್ತು. ಆಗ ಆಯಾ ಪ್ರಾದೇಶಿಕ ಕೇಂದ್ರಗಳಲ್ಲಿ ಮಾಡುತ್ತಿದ್ದರು. ವಿವರಣಾ ಪತ್ರದಲ್ಲಿ ಸಂಪರ್ಕ ಕಾರ್ಯಕ್ರಮ ಕಡ್ಡಾಯ ಎಂದು ನಮೂದಿಸಿಲ್ಲ. ಆದರೆ ವರ್ಷಾಂತ್ಯದಲ್ಲಿ ಸಂಪರ್ಕ ಕಾರ್ಯಕ್ರಮ ಕಡ್ಡಾಯಗೊಳಿಸಿದೆ. ರಾಜ್ಯದಲ್ಲಿ 20 ಪ್ರಾದೇಶಿಕ ಕೇಂದ್ರಗಳಿದ್ದು, ಡಿಪ್ಲೊಮಾ ಸರ್ಟಿಫಿಕೆಟ್ ಕೋರ್ಸ್‌ನಿಂದ ಸ್ನಾತಕೋತ್ತರ ಪದವಿ ವರೆಗೆ ವಿವಿಧ 50 ವಿಷಯಗಳಲ್ಲಿ ವ್ಯಾಸಂಗಕ್ಕೆ ಕರಾಮುವಿಯಲ್ಲಿ ಅವಕಾಶವಿದೆ.
ಪತ್ರಿಕೋದ್ಯಮ ವಿಷಯ ಹೊರತುಪಡಿಸಿ ಬೇರೆಲ್ಲ ವಿಷಯಕ್ಕೆ ಪ್ರಾದೇಶಿಕ ಕೇಂದ್ರಗಳಲ್ಲಿ ಸಂಪರ್ಕ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇದರಿಂದ ರಾಜ್ಯದ ಇತರೆ ಕಡೆಗಳಿಂದ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವವರು ಸಂಪರ್ಕ ಕಾರ್ಯಕ್ರಮಕ್ಕೆ ಮೈಸೂರಿಗೆ ಬರಬೇಕಾಗಿದೆ.
ಹಾಜರಾಗದಿದ್ದರೆ ವಿನಾಯ್ತಿ ಇಲ್ಲ: ಪ್ರಥಮ ಎಂಸಿಜೆಗೆ ಏ.3ರಿಂದ 7, ಅಂತಿಮ ಎಂಸಿಜೆಗೆ ಮಾ.25ರಿಂದ 5 ದಿನ ಸಂಪರ್ಕ ಕಾರ್ಯಕ್ರಮ ನಡೆಯಲಿದೆ. ಈ ವರ್ಷ ಸಂಪರ್ಕ ಕಾರ್ಯಕ್ರಮ ಕಡ್ಡಾಯಗೊಳಿಸಿರುವುದು ಈಗಷ್ಟೆ ವಿದ್ಯಾರ್ಥಿಗಳ ಗಮನಕ್ಕೆ ಬಂದಿದೆ. ಅಧಿಕೃತವಾಗಿ ಸೂಚನಾ ಪತ್ರ ಯಾವುದೇ ಪ್ರಾದೇಶಿಕ ಕೇಂದ್ರಗಳಿಗೆ, ವಿದ್ಯಾರ್ಥಿಗಳಿಗೆ ತಲುಪಿಲ್ಲ.
ಈ ಬಗ್ಗೆ ವಿವಿ ಪರೀಕ್ಷಾಂಗ ಕುಲಸಚಿವ ಡಾ.ಕೆ.ವಿ. ಸುರೇಶ್‌ರನ್ನು ಸಂಪರ್ಕಿಸಿದಾಗ, ‘ವಿದ್ಯಾರ್ಥಿಗಳ ಕೋರಿಕೆ ಮೇರೆಗೆ ಸಂಪರ್ಕ ಕಾರ್ಯಕ್ರಮ ಆಯೋಜಿಸಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಒಂದೇ ಕಡೆ ಸಂಪರ್ಕ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ. ವಿದ್ಯಾರ್ಥಿಗಳು ಸಂಪರ್ಕ ಕಾರ್ಯಕ್ರಮಕ್ಕೆ ಕಡ್ಡಾಯ ಹಾಜರಾಗಲು ಅಸೈನ್‌ಮೆಂಟ್‌ನ್ನು ಹಾಜರಾದವರಿಗೆ ಮಾತ್ರ ನೀಡುವಂತೆ ಸೂಚಿಸಲಾಗಿದೆ. ಸಂಪರ್ಕ ಕಾರ್ಯಕ್ರಮಕ್ಕೆ ಹಾಜರಾಗಲು ಅಸಾಧ್ಯವಾದವರಿಗೆ ವಿನಾಯ್ತಿ ಇಲ್ಲ’ ಎಂದಿದ್ದಾರೆ.
ದೂರ ಸಂಪರ್ಕ ಶಿಕ್ಷಣ ಎಂದು ಎಂಸಿಜೆಗೆ ಸೇರಿದ್ದೆ. ಈಗ ಸಂಪರ್ಕ ಕಾರ್ಯಕ್ರಮ ಕಡ್ಡಾಯಕ್ಕೆ ವಿರೋಧವಿಲ್ಲ. ಆದರೆ ಒಂದೇ ಕಡೆ ಕಡ್ಡಾಯಗೊಳಿಸಿರುವುದರಿಂದ ಗೃಹಿಣಿಯರಿಗೆ ಹಾಜರಾಗಲು ಕಷ್ಟ. ಸಣ್ಣ ಮಕ್ಕಳನ್ನು ನೋಡಿಕೊಳ್ಳುವುದು, ಶಾಲೆಗೆ ಕಳುಹಿಸುವುದು ಇದೆ. ಅವರನ್ನು ಬಿಟ್ಟು ಮೈಸೂರಿನಲ್ಲಿ ಇರುವುದು ಕಷ್ಟ. ಅದರ ಬದಲು ಪ್ರಾದೇಶಿಕ ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸಿದರೆ ಉತ್ತಮವಾಗುತ್ತಿತ್ತು. ಸಂಪರ್ಕ ಕಾರ್ಯಕ್ರಮಕ್ಕೆ ಹೋದರೆ ಮಾತ್ರ ಅಸೈನ್‌ಮೆಂಟ್ ಕೊಡುವುದು ಸರಿಯಲ್ಲ. ಈ ನಿರ್ಧಾರವನ್ನು ಕರಾಮುವಿ ಪುನರ್ ಪರಿಶೀಲಿಸಬೇಕು’ ಎಂದು ಎಂಸಿಜೆ ಅಂತಿಮ ವರ್ಷದ ವಿದ್ಯಾರ್ಥಿನಿ ರಚನಾ(ಹೆಸರು ಬದಲಿಸಿದೆ)ಆಗ್ರಹಿಸಿದ್ದಾರೆ.
Click this button or press Ctrl+G to toggle between Kannada and English