ದೂರು ಬರಲಿ ಎಂದು ಕೈಕಟ್ಟಿ ಕೂರಬೇಡಿ: ಮೆಸ್ಕಾಂ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ

5:51 PM, Thursday, February 6th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Mescomಬಂಟ್ವಾಳ: ಯಾವುದೇ ಸಮಸ್ಯೆ ಬಗೆಹರಿಸಲು ಗ್ರಾಹಕರಿಂದ ದೂರು ಬರಲಿ ಎಂದು ಕಾದು ಕುಳಿತುಕೊಳ್ಳದೆ, ಸಮಸ್ಯೆಗಳಿಗೆ ಸ್ವತಃ ತಾವೇ ಮುಂದಾಗಿ ಪರಿಹಾರ ಕ್ರಮ ಕೈಗೊಳ್ಳಿ ಎಂದು ಬಂಟ್ವಾಳ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ ಮೆಸ್ಕಾಂ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಬುಧವಾರ ಬಂಟ್ವಾಳ ತಾಪಂ ಸಭಾಂಗಣದಲ್ಲಿ ತಾಪಂ ಉಪಾಧ್ಯಕ್ಷ ಆನಂದ ಶಂಭೂರು ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖಾ ಪ್ರಗತಿ ವೇಳೆ ಅಧಿಕಾರಿಗಳಿಗೆ  ಈ ಮೇಲಿನ ಸೂಚನೆ ನೀಡಿದರು.

ರಾಜೀವ್ ಗಾಂಧಿ ವಿದ್ಯುತ್ತೀಕರಣ ಹಾಗೂ ಈ ಹಿಂದಿನ ಹ್ಯಾಮ್ಲೆಟ್ ಯೋಜನೆ ಕೆಲ ಪಂಚಾಯತಿಗಳಲ್ಲಿ ಸರಿಯಾಗಿ ಅನುಷ್ಠಾನಗೊಳ್ಳದ ಬಗ್ಗೆ ಮಾಹಿತಿ ಕೇಳಿದಾಗ, ಮೆಸ್ಕಾಂ ಅಧಿಕಾರಿ ಉತ್ತರಿಸಲಿಲ್ಲ. ಇದರಿಂದ ಕುಪಿತರಾದ ಸ್ಥಾಯಿ ಸಮಿತಿ ಅಧ್ಯಕ್ಷರು ಅಧಿಕಾರಿಯನ್ನು ತರಾಟೆಗೆ ತೆಗೆದು ಕೊಂಡು, ಅವ್ಯವಸ್ಥೆ, ನಿಧಾನಗತಿಯ ಕಾಮಗಾರಿ ನಡೆಯುತ್ತಿರುವುದು ಸತ್ಯ ಆದರೆ ಅದರ ನಿವಾರಣೆಗೆ ಗ್ರಾಹಕರಿಂದ ದೂರು ಬರಲಿ ಎಂದು ಕಾದು ಕುಳಿತುಕೊಳ್ಳಬೇಡಿ, ಸಮಸ್ಯೆ ಬಗೆಹರಿಸುವುದು ನಿಮ್ಮ ಕರ್ತವ್ಯ ಎಂದರು. ಇದಕ್ಕೆ ಧ್ವನಿಗೂಡಿಸಿದ ತಾಪಂ ಉಪಾಧ್ಯಕ್ಷ ಆನಂದ ಶಂಭೂರು, ಗ್ರಾಹಕರ ಸಮಸ್ಯೆಗಳನ್ನು ಅರಿತು ಜವಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಪಡಿತರ ಚೀಟಿ ವಿತರಣೆ ಪ್ರಗತಿಯಲ್ಲಿ: ತಾಲೂಕಿನಲ್ಲಿ 11,073 ಪಡಿತರ ಚೀಟಿಗಳನ್ನು ವಿತರಿಸಲಾಗಿದೆ ಎಂದು ತಹಸೀಲ್ದಾರ್ ಮಲ್ಲೇಸ್ವಾಮಿ ಸಭೆಗೆ ಮಾಹಿತಿ ನೀಡಿದರು. ತಾಲೂಕಿನಲ್ಲಿ ಒಟ್ಟು 16,116 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಬಿಪಿಎಲ್ ಕಾರ್ಡ್‌ಗಳನ್ನು ಗ್ರಾಮಾಂತರ ಪ್ರದೇಶಗಳಿಗೆ 8114 ಹಾಗೂ ನಗರ ಪ್ರದೇಶಕ್ಕೆ 1185 ವಿತರಿಸಲಾಗಿದೆ. ಎಪಿಎಲ್‌ನಲ್ಲಿ 1170ನ್ನು ಗ್ರಾಮಾಂತರ ಹಾಗೂ 604ನ್ನು ನಗರ ಪ್ರದೇಶದಲ್ಲಿ ವಿತರಿಸಲಾಗಿದೆ. ಬಾಕಿ ಉಳಿದ ಸುಮಾರು 5 ಸಾವಿರ ಅರ್ಜಿದಾರರಿಗೆ ಸೂಕ್ತ ತನಿಖೆ ನಡೆಸಿ ಪಡಿತರ ಚೀಟಿ ವಿತರಿಸಲಾಗುವುದು ಎಂದರು.

8 ಮಂದಿಗೆ ಮಲೇರಿಯಾ, 22 ಮಂದಿಗೆ ಟಿಬಿ: ಆರೋಗ್ಯಾಧಿಕಾರಿ ಡಾ. ಮಂಜುನಾಥ್ ಇಲಾಖಾ ಮಾಸಿಕ ವರದಿ ಮಂಡಿಸಿ, ಜನವರಿಯಲ್ಲಿ 3011 ಮಂದಿಯ ತಪಾಸಣೆ ನಡೆಸಲಾಗಿದ್ದು, 8 ಮಂದಿಯಲ್ಲಿ ಮಲೇರಿಯಾ ದೃಢಪಟ್ಟಿದೆ. 242 ಮಂದಿಯ ಕಫ ಪರೀಕ್ಷೆ ನಡೆಸಲಾಗಿದ್ದು, 22 ಮಂದಿಯಲ್ಲಿ ಕ್ಷಯರೋಗ ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ಪಶುಸಂಗೋಪನಾ ಇಲಾಖೆ, ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮೊದಲಾದ ಇಲಾಖಾವಾರು ಮಾಸಿಕ ವರದಿಗಳನ್ನು ಪರಿಶೀಲಿಸಲಾಯಿತು. ತಾಪಂ ಕಾರ್ಯನಿರ್ವಹಣಾಧಿಕಾರಿ ಇದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English