ವಿಶ್ವೇಶ್ವರ ಭಟ್ ವಿಜಯ ಕರ್ನಾಟಕಕ್ಕೆ ರಾಜೀನಾಮೆ

10:18 PM, Wednesday, December 8th, 2010
Share
1 Star2 Stars3 Stars4 Stars5 Stars
(No Ratings Yet)
Loading...

ವಿಶ್ವೇಶ್ವರ ಭಟ್  ಬೆಂಗಳೂರು  : ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಬುಧವಾರ ಮಧ್ಯಾಹ್ನ ಅವರು ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಆಡಳಿತ ವರ್ಗಕ್ಕೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದು, ರಾಜೀನಾಮೆ ಅಂಗೀಕೃತವಾಗಿದೆ ಎಂದು ವಿಶ್ವಸನೀಯವಾಗಿ ಗೊತ್ತಾಗಿದೆ.
ಕಳೆದ ಹತ್ತು ವರ್ಷಗಳಿಂದ ಸಂಪಾದಕರಾಗಿ ಪತ್ರಿಕೆಯ ಚುಕ್ಕಾಣಿ ಹಿಡಿದು ವಿಜಯ ಕರ್ನಾಟಕವನ್ನು ಮುನ್ನಡೆಸಿದ್ದ ಭಟ್ಟರ ರಾಜೀನಾಮೆ ನಿರ್ಧಾರ ಪತ್ರಿಕೆಯ ಅಸಂಖ್ಯಾತ ಓದುಗರನ್ನು ಮತ್ತು ಅವರ ಅಭಿಮಾನಿ ವರ್ಗವನ್ನು ಬೆಚ್ಚಿಬೀಳಿಸಿದೆ. ಅಲ್ಲದೆ, ಸಮರ್ಥವಾದ ಒಂದು ಸಂಪಾದಕೀಯ ತಂಡವನ್ನು ಕಟ್ಟುವುದು ಮತ್ತು ಸಹೋದ್ಯೋಗಿಗಳಿಗೆ ನಿತ್ಯ ಮಾರ್ಗದರ್ಶನ ಮಾಡುವುದು ಅವರ ವೃತ್ತಿ ಕೌಶಲ್ಯದ ಒಂದು ಪ್ರಮುಖ ಅಂಗ. ಸಂಪಾದಕರ ರಾಜೀನಾಮೆ ನಿರ್ಧಾರ ಅವರ ಸಹೋದ್ಯೋಗಿಗಳನ್ನೂ ಕೂಡ ದಿಗ್ಭ್ರಮೆಗೆ ದೂಡಿದೆ.
ಭಟ್ಟರು ಪತ್ರಿಕೆಯ ಸಂಪಾದಕರಾಗಿ 2000 ಇಸವಿಯಲ್ಲಿ ಜವಾಬ್ದಾರಿ ವಹಿಸಿಕೊಂಡಾಗ ಪತ್ರಿಕೆಯ ಪ್ರಸಾರ1 ಲಕ್ಷ 16 ಸಾವಿರವಿತ್ತು. ಹತ್ತು ವರ್ಷಗಳ ಅವಧಿಯಲ್ಲಿ ಪತ್ರಿಕೆಯ ಪ್ರಸಾರವನ್ನು ಆರು ಲಕ್ಷಗಳ ಗಡಿ ದಾಟಿಸಿದ ಖ್ಯಾತಿ ವಿಶ್ವೇಶ್ವರ ಭಟ್ಟರದು. ಕೇವಲ ಸಂಪಾದಕರಾಗಿಯೇ ಉಳಿಯದೆ, ‘ನಿತ್ಯ ಬರೆಯುವ’ ಸಂಪಾದಕ ಎಂಬ ಖ್ಯಾತಿ ಅವರದಾಗಿತ್ತು. ಗುರುವಾರದ ಅಂಕಣ ನೂರೆಂಟು ಮಾತು, ಶನಿವಾರದ ಸುದ್ದಿಮನೆ ಕತೆ, ವಕ್ರತುಂಡೋಕ್ತಿ, ಭಾನುವಾರದ ಜನಗಳ ಮನಗಳು ಅಲ್ಲದೆ ಹಲವು ಹತ್ತು ಪ್ರಯೋಗಗಳನ್ನು ಪತ್ರಿಕೆಯಲ್ಲಿ ಹುಟ್ಟುಹಾಕಿ ಅವರು ಜನಮನ ಗೆದ್ದಿದ್ದರು.
ಬರೀ ಅಂಕಣಕಾರರಾಗಿ ಮಾತ್ರವಲ್ಲ ಉತ್ತಮ ಲೇಖಕರೂ ಆಗಿರುವ 45 ವರ್ಷದ ಭಟ್ಟರು 48 ಪುಸ್ತಕಗಳನ್ನು ಬರೆದಿರುವುದು ಅವರ ಅಕ್ಷರ ಹಸಿವಿಗೆ ಹಿಡಿದ ಕನ್ನಡಿ. ಅವರ ಮುಂದಿನ ನಡೆ ಏನು? ಎತ್ತ? ಎಂಬುದು ಸದ್ಯಕ್ಕೆ ಎಲ್ಲರಲ್ಲೂ ಎದ್ದಿರುವ ಸಹಜ ಪ್ರಶ್ನೆ. ಇದಕ್ಕೆ ಉತ್ತರಿಸಿರುವ ರೀತಿಯಲ್ಲಿ ಮಾತನಾಡಿದ ಭಟ್ಟರು, ಉನ್ನತ ವ್ಯಾಸಂಗ ಕೈಗೊಳ್ಳುವ ಉದ್ದೇಶದಿಂದ ಹುದ್ದೆಗೆ ರಾಜೀನಾಮೆ ಸಲ್ಲಿರುವುದಾಗಿ ತಿಳಿಸಿದ್ದಾರೆ
ಹಿರಿಯ ಪತ್ರಕರ್ತ ಇ ರಾಘವನ್ ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕರಾಗಿ ನೇಮಕಗೊಂಡಿದ್ದಾರೆ. ಬುಧವಾರ ಸಂಜೆ ಅವರು ಅಧಿಕಾರ ಸ್ವೀಕರಿಸಿದರು. ಆಡಳಿತ ವರ್ಗ ಮತ್ತು ಸಂಸ್ಥೆಯ ಉದ್ಯೋಗಿಗಳು ಅವರನ್ನು ಪತ್ರಿಕಾಲಯಕ್ಕೆ ಔಪಚಾರಿಕವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ನೌಕರರನ್ನು ಉದ್ದೇಶಿಸಿ ಮಾತನಾಡಿದ ರಾಘವನ್, ಪತ್ರಿಕೆಯನ್ನು ಮುನ್ನಡೆಸುವುದಕ್ಕೆ ಎಲ್ಲರ ಸಹಕಾರ ಕೋರಿದರು.
ಪ್ರಸ್ತುತ ಟೈಮ್ಸ್ ಆಫ್ ಇಂಡಿಯಾ ಸಂಸ್ಥೆಯ ಇನ್ನೊಂದು ಪ್ರಕಟಣೆ, ” ವಿಜಯ್Next” ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿರುವ ರಾಘವನ್ ಅವರಿಗೆ ವಿಜಯ ಕರ್ನಾಟಕದ ಹುದ್ದೆ ಹೆಚ್ಚುವರಿ ಜವಾಬ್ದಾರಿ ಆಗಿರುತ್ತದೆ. ರಾಘವನ್ ಅವರು ಈ ಮುನ್ನ ಇಕನಾಮಿಕ್ ಟೈಂಮ್ಸ್ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮುನ್ನ ಇಂಡಿಯನ್ ಎಕ್ಸ್ ಪ್ರೆಸ್ ಬೆಂಗಳೂರು ಆವೃತ್ತಿಯಲ್ಲಿ ಮುಖ್ಯ ವರದಿಗಾರರಾಗಿ ಕೆಲಸ ಮಾಡಿದ್ದರು.

ಕೃಪೆ : ದಟ್ಸ್ ಕನ್ನಡ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English