ಮಂಗಳೂರು: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಫೆ.18ರಂದು ಮಂಗಳೂರಿಗೆ ಆಗಮಿಸಲಿದ್ದು, ಅವರಿಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ನೆಹರೂ ಮೈದಾನ ಹಾಗೂ ನಗರದಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸೋಮವಾರ ಸಂಜೆಯಿಂದ ಸಮಾವೇಶ ನಡೆಯುವ ಸ್ಥಳ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ನಿರ್ಬಂಧಿಸಿದ್ದು, ನಗರದೆಲ್ಲೆಡೆ ಪೊಲೀಸ್ ಸರ್ಪಕಾವಲು ಹಾಕಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಆರ್.ಹಿತೇಂದ್ರ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೈದಾನ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ, ಕಾರ್ಯಕ್ರಮದಂದು ವಿಐಪಿ ಮಾರ್ಗ ಮತ್ತು ಕಾರ್ಯಕ್ರಮ ಸ್ಥಳದ ಸುತ್ತ ವಾಹನ ಸಂಚಾರ, ನಿಲುಗಡೆಯನ್ನು ನಿರ್ಬಂಧಿಸಲಾಗಿದೆ. ಇದು ಪೊಲೀಸ್ ತುರ್ತು ಕರ್ತವ್ಯದ ವಾಹನಗಳು ಮತ್ತು ನಿಗದಿತವಾಗಿ ಪಾಸ್ ಹೊಂದಿದ ವಾಹನಗಳಿಗೆ ಅನ್ವಯಿಸುವುದಿಲ್ಲ.
ಬ್ಯಾಗ್, ನೀರಿನ ಬಾಟಲಿ ತರಬೇಡಿ: ಕಾರ್ಯಕ್ರಮಕ್ಕೆ ಆಗಮಿಸುವವರು ಬೆಂಕಿ ಪೊಟ್ಟಣ, ಲೈಟರ್, ನೀರಿನ ಬಾಟಲಿ, ಬ್ಯಾಗ್, ಕ್ಯಾಮೆರಾ, ಆಯುಧ, ಸ್ಫೋಟ ವಸ್ತು ತರುವುದನ್ನು ನಿಷೇಧಿಸಲಾಗಿದೆ. ನಗರಕ್ಕೆ ಹೊರಗಡೆಯಿಂದ ಬರುವ, ಹೋಗುವ ಮತ್ತು ನಗರದಲ್ಲಿ ಸಂಚರಿಸುವ ಎಲ್ಲ ರೀತಿಯ ವಾಹನಗಳಿಗೆ ಕಾರ್ಯಕ್ರಮಕ್ಕೆ ಬರುವ ವಾಹನಗಳಿಗೆ ನೀಡಿದ ಮಾರ್ಗಸೂಚಿಗಳೇ ಅನ್ವಯವಾಗುತ್ತದೆ ಎಂದರು.
ವಾಹನಗಳಿಗೆ ಸೂಚನೆ: ನಗರಕ್ಕೆ ಬರುವ ವಾಹನಗಳಿಗೆ ಕೊಟ್ಟಾರ ಚೌಕಿ, ನಂತೂರು, ಪಂಪ್‌ವೆಲ್, ಕಂಕನಾಡಿ ರಸ್ತೆಗಳಿಂದ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಕುಂಟಿಕಾನ ಕಡೆಯಿಂದ ಒಳಪ್ರವೇಶ ನೀಡಲಾಗಿದೆ. ನಗರದಿಂದ ಹೊರ ಹೋಗಲು ಕರಾವಳಿ ರಸ್ತೆ, ಮಹಾಕಾಳಿಪಡ್ಪು ರಸ್ತೆ, ಕೊಟ್ಟಾರ ಚೌಕಿ ರಸ್ತೆ, ನಂತೂರು ರಸ್ತೆ, ಕುಂಟಿಕಾನ ರಸ್ತೆ ಕಡೆಯಿಂದ ಅವಕಾಶ ನೀಡಲಾಗಿದೆ. ಕಾರ್ಯಕ್ರಮಕ್ಕೆ ಬರುವ ವಾಹನಗಳಿಗೆ ಉಳ್ಳಾಲ್ ನರ್ಸಿಂಗ್ ಹೋಂ ಬಳಿ, ಎಮ್ಮೆಕೆರೆ ಮೈದಾನ, ವಾಮನ್ ನಾಯಕ್ ನಂದಿಗುಡಿ ಮೈದಾನ, ಮಾರ್ಗನ್ಸ್‌ಗೇಟ್ ಮೈದಾನ, ಎಕ್ಕೂರು ಮೈದಾನ, ಕೂಳೂರು ಬೆನಾಲ್ಟ್ ಶೋರೂಂ ಹತ್ತಿರ ಮೈದಾನದಲ್ಲಿ ನಿಲುಗಡೆಗೆ ಅವಕಾಶವಿದೆ.
5 ಸಾವಿರ ಪೊಲೀಸರು: ಮಂಗಳೂರು ನಗರ ಹಾಗೂ ನಗರದ ಹೊರಗೆ ಬಂದೋಬಸ್ತ್‌ಗೆ ವಿವಿಧ ಜಿಲ್ಲೆಗಳಿಂದ 4500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, 500ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಸಮಾವೇಶದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಾಧ್ಯಮಗಳಿಗೆ ಸಂಘಟಕರು ನೀಡಿದ ಪಾಸ್‌ಗೆ ಪೊಲೀಸರು ದೃಢೀಕರಿಸರಿಸಿದ ಬಳಿಕವೇ ಪ್ರವೇಶ ಅವಕಾಶ. ಸಂಚಾರ ವ್ಯತ್ಯಯ ಬಗ್ಗೆ ನಗರದ ಸ್ಥಳೀಯ ಶಿಕ್ಷಣ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ ಎಂದರು.
ಫೆ.18 ಮಧ್ಯಾಹ್ನ 12ರಿಂದ ನರೇಂದ್ರ ಮೋದಿ ವಾಪಾಸ್ ಹೋಗುವಲ್ಲಿವರೆಗೆ ವಾಹನ ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ. ನೆಹರೂ ಮೈದಾನ ಮತ್ತು ಸುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ಫೆ.17ರಂದು ಸಂಜೆ 6ರಿಂದ ಮರುದಿನ ಕಾರ್ಯಕ್ರಮ ಮುಕ್ತಾಯವರೆಗೆ ಎಲ್ಲ ತರಹದ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಕುಂದಾಪುರ-ಉಡುಪಿ-ಸುರತ್ಕಲ್ ಕಡೆಯಿಂದ ಬರುವ ವಾಹನಗಳು ಕೊಟ್ಟಾರ ಚೌಕಿ-ಲೇಡಿಹಿಲ್-ಲಾಲ್‌ಬಾಗ್-ಬಲ್ಲಾಳ್‌ಬಾಗ್ ಜಂಕ್ಷನ್‌ನಲ್ಲಿ ಬಲಕ್ಕೆ ತಿರುವುಗುವುದು. ಅಲ್ಲಿಯೇ ಜನರನ್ನು ಇಳಿಸಿ ದುರ್ಗಾ ಮಹಲ್ ಮಾರ್ಗವಾಗಿ ಎಡಕ್ಕೆ ಚಲಿಸಿ ಉಳ್ಳಾಲ ನರ್ಸಿಂಗ್ ಹೋಂ ಪಕ್ಕದ ಮೈದಾನದಲ್ಲಿ ನಿಲ್ಲಿಸುವುದು. ಇಲ್ಲಿ ಭರ್ತಿಯಾದರೆ ನಗರದ ಹೊರಭಾಗ ಲೇಡಿಹಿಲ್-ಕೊಟ್ಟಾರ ಚೌಕಿ ಮಾರ್ಗವಾಗಿ ಕೂಳೂರು ವೃತ್ತ ಬಳಸಿ, ಕೂಳೂರು ಬೆಂಗ್ರೆ ಸಮೀಪದ ರೆನಾಲ್ಟ್ ಶೋರೂಂ ಹಿಂಬದಿ ಮೈದಾನ ಕಡೆ ಹೋಗುವುದು. ಯಾವುದೇ ಕಾರಣಕ್ಕೂ ಕಾರ್‌ಸ್ಟ್ರೀಟ್ ಕಡೆಗೆ ಬರಬಾರದು.
ಮೂಡುಬಿದಿರೆ-ಕಾರ್ಕಳ ಕಡೆಯಿಂದ ಬರುವ ವಾಹನಗಳು ನಂತೂರು ವೃತ್ತ, ಸಂತ ಆಗ್ನೇಸ್ ಕಾಲೇಜು ಮೂಲಕ ಬೆಂದೂರ್‌ವೆಲ್‌ಗೆ ಬಂದು ಬಲಕ್ಕೆ ಚಲಿಸಿ ಬಲ್ಮಠ ವೃತ್ತವಾಗಿ ಕಲೆಕ್ಟರ್ ಗೇಟ್ ಮುಂಭಾಗ ಜನರನ್ನು ಇಳಿಸುವುದು. ನಂತರ ವಾಹನವನ್ನು ನಂತೂರು ಮೂಲಕ ಪದವು ಹೈಸ್ಕೂಲ್ ಮೈದಾನದಲ್ಲಿ ಪಾರ್ಕ್ ಮಾಡುವುದು. ಮೈದಾನದಿಂದ ಹೊರಕ್ಕೆ ಹೋಗುವ ವಾಹನಗಳು ಎಡಕ್ಕೆ ಚಲಿಸಿ, ಯೆಯ್ಯಾಡಿ ರಸ್ತೆಗೆ ಹೋಗಿ ಎಡಕ್ಕೆ ತಿರುಗಿ ಕೆಪಿಟಿಯಿಂದ ಹೊರಕ್ಕೆ ಹೋಗುವುದು. ಯಾವುದೇ ಕಾರಣಕ್ಕೂ ಅಂಬೇಡ್ಕರ್ ವೃತ್ತ ಕಡೆ ಬರಬಾರದು.
ಬೆಳ್ತಂಗಡಿ-ಬಂಟ್ವಾಳ ಕಡೆಯಿಂದ ಬರುವ ವಾಹನಗಳು ಪಂಪ್‌ವೆಲ್‌ನಿಂದ ಕಂಕನಾಡಿ ಬೈಪಾಡ್ ರಸ್ತೆ ಮೂಲಕ ಫಾದರ್ ಮುಲ್ಲರ್-ವೆಲೆನ್ಸಿಯಾ ಮಾರ್ಗವಾಗಿ ಕೋಟಿ ಚೆನ್ನಯ ವೃತ್ತದಲ್ಲಿ ಜನರನ್ನು ಇಳಿಸಬೇಕು. ನಂದಿಗುಡ್ಡೆ ಮೈದಾನದಲ್ಲಿ ವಾಹಗಳನ್ನು ನಿಲ್ಲಿಸಬೇಕು. ಅಲ್ಲಿ ಜಾಗ ಭರ್ತಿಯಾದರೆ ಜೆಪ್ಪು ಮಾರ್ಕೆಟ್, ಮಾಂಕಾಳಿಪಡ್ಪು-ಜೆಪ್ಪಿನಮೊಗರು ಮೂಲಕ ಎಕ್ಕೂರು ಮೈದಾನ ಕಡೆಗೆ ಹೋಗುವುದು. ಯಾವುದೇ ಕಾರಣಕ್ಕೂ ಅತ್ತಾವರ ಮತ್ತು ಪಾಂಡೇಶ್ವರ ಕಡೆಗೆ ಬರಬಾರದು.
ಮಡಿಕೇರಿ-ಸುಳ್ಯ-ಪುತ್ತೂರು ಕಡೆಯಿಂದ ಬರುವ ವಾಹನಗಳು ಪಂಪ್‌ವೆಲ್‌ನಿಂದ ಕಂಕನಾಡಿ ಬೈಪಾಸ್ ರಸ್ತೆ ಮೂಲಕ ಫಾದರ್ ಮುಲ್ಲರ್-ವೆಲೆನ್ಸಿಯಾ ಮಾರ್ಗವಾಗಿ ಕೋಟಿ ಚೆನ್ನಯ ವೃತ್ತ ಮಾರ್ಗವಾಗಿ ಬಂದು ಮೊಗರ್ನ್‌ಗೇಟ್, ಮಂಗಳಾದೇವಿ ಮೂಲಕ ಎಮ್ಮೆಕೆರೆ ಮೈದಾನದಲ್ಲಿ ಜನರನ್ನು ಇಳಿಸಿ ಅಲ್ಲೇ ನಿಲುಗಡೆ ಮಾಡುವುದು. ಜಾಗ ಭರ್ತಿಯಾದರೆ ಜೆಪ್ಪು ಮಾರ್ಕೆಟ್, ಮಾಂಕಾಳಿಪಡ್ವು-ಜೆಪ್ಪಿನಮೊಗರು ಮೂಲಕ ಎಕ್ಕೂರು ಮೈದಾನ ಕಡೆಗೆ, ಪಾಂಡೇಶ್ವರಕ್ಕೆ ಪ್ರವೇಶವಿಲ್ಲ.
ಕಾಸರಗೋಡು-ಮಂಜೇಶ್ವರ-ಉಳ್ಳಾಲ ಕಡೆಯಿಂದ ಬರುವ ವಾಹನಗಳು ಕಂಕನಾಡಿ ಬೈಪಾಸ್ ರಸ್ತೆಯಿಂದ ಫಾದರ್ ಮುಲ್ಲರ್-ವೆಲೆನ್ಸಿಯಾ ಮಾರ್ಗವಾಗಿ ಮಂಗಳಾದೇವಿ ಜಂಕ್ಷನ್‌ಗೆ. ಮೋಗರ್ನ್‌ಗೇಟ್ ಮೈದಾನದಲ್ಲಿ ವಾಹನ ನಿಲುಗಡೆ. ಜಾಗ ಭರ್ತಿಯಾದರೆ ಜಪ್ಪಿನಮೊಗರು ಮೂಲಕ ಎಕ್ಕೂರು ಮೈದಾನ ಕಡೆಗೆ. ಪಾಂಡೇಶ್ವರಕ್ಕೆ ಬರುವಂತಿಲ್ಲ.
ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಪಂಪ್‌ವೆಲ್ ಕಡೆಯಿಂದ ಬರುವ ಎಲ್ಲ ಸರ್ಕಾರಿ ಬಸ್‌ಗಳು ನಂತೂರು-ಕೆಪಿಟಿ-ಕುಂಟಿಕಾನ-ಬಾಳಿಗಾಸ್ಟೋರ್ ಮೂಲಕ ಬಸ್ಟೇಂಡ್‌ಗೆ. ಅದೇ ಮಾರ್ಗ ಹೊರಹೋಗುವುದು.
ವಿವಿಐಪಿ ಬರುವ ಮಾರ್ಗದಲ್ಲಿ ಎಲ್ಲ ರೀತಿಯ ವಾಹನ ನಿಲ್ಲಿಸುವುದನ್ನು ಫೆ.18 ಬೆಳಗ್ಗೆ 9ರಿಂದ ನಿಷೇಧಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲೂ ವಿಐಪಿ ಬಂದುಹೋಗುವ ಸಮಯದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
Click this button or press Ctrl+G to toggle between Kannada and English