ನವದೆಹಲಿ: ಸಂಸತ್ತಿನ ಹೊರಗೆ ಮತ್ತು ಒಳಗೆ ಸೀಮಾಂಧ್ರ ಮುಖಂಡರ ಪ್ರತಿಭಟನೆಯ ನಡುವೆಯೇ ಆಂಧ್ರವನ್ನು ಇಬ್ಭಾಗ ಮಾಡುವ ತೆಲಂಗಾಣ ಮಸೂದೆಗೆ ಲೋಕಸಭೆಯಲ್ಲಿ ಮಂಗಳವಾರ ಅಂಗೀಕಾರ ನೀಡಲಾಯಿತು. ಸಂಪೂರ್ಣ ನಾಟಕೀಯ ರೀತಿಯಲ್ಲಿ ನಡೆದ ಬೆಳವಣಿಗೆಯಲ್ಲಿ ಲೋಕಸಭೆಯ ನೇರ ಪ್ರಸಾರವನ್ನು ಕಡಿತಗೊಳಿಸಿ, ಮಾರ್ಷಲ್‌ಗಳನ್ನು ಕರೆಸಿ ಮಸೂದೆಗೆ ಕದ್ದುಮುಚ್ಚಿ ಒಪ್ಪಿಗೆ ಪಡೆಯಲಾಯಿತು. ಸ್ವಪಕ್ಷೀಯ ಸಂಸದರು, ಸಚಿವರ ವಿರೋಧದ ಹೊರತಾಗಿಯೂ ಮಂಡನೆಯಾದ ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ಆಂಧ್ರಪ್ರದೇಶ ಮರುವಿಂಗಡಣೆ ಮಸೂದೆ- 2014ಕ್ಕೆ ಧ್ವನಿ ಮತದ ಮೂಲಕ ಅಂಗೀಕಾರ ಪಡೆಯಲಾಯಿತು.
ಆಂಧ್ರವಿಭಜನೆಯ ಈ ಮಸೂದೆಗೆ ಪ್ರಮುಖ ಪ್ರತಿಪಕ್ಷವಾದ ಬಿಜೆಪಿಯಿಂದಲೂ ಬೆಂಬಲ ಸಿಕ್ಕಿತು. ಈ ಮೂಲಕ ತೆಲಂಗಾಣ ಪ್ರದೇಶದ ಜನರ ದಶಕದ ಹೋರಾಟಕ್ಕೆ ಮೊದಲ ಗೆಲವು ಸಿಕ್ಕಂತಾಯಿತು. ದೇಶದ 29ನೇ ರಾಜ್ಯ ರಚನೆಗಿದ್ದ ಅಡ್ಡಿಯೊಂದು ನಿವಾರಣೆಯಾದಂತಾಯಿತು. ಇದೇ ವೇಳೆ ಆಂಧ್ರ ವಿಭಜನೆ ಖಂಡಿಸಿ ಮುಖ್ಯಮಂತ್ರಿ ಕಿರಣ್ ರೆಡ್ಡಿ ಬುಧವಾರ ರಾಜಿನಾಮೆ ನೀಡುವ ಸಾಧ್ಯತೆ ಇದೆ.
ಯುದ್ಧಭೂಮಿಯಾದ ಸಂಸತ್ತು: ಮಸೂದೆ ಮಂಡನೆ ಹಿನ್ನೆಲೆಯಲ್ಲಿ ಲೋಕಸಭೆ 90 ನಿಮಿಷ ಯುದ್ಧಭೂಮಿಯಂತಾಗಿತ್ತು. ಮಸೂದೆ ವಿರೋಧಿಸಿ ಸೀಮಾಂಧ್ರದ ಕಾಂಗ್ರೆಸ್ ಸಂಸದರು, ಸಚಿವರು, ಸಿಪಿಎಂ, ಟಿಎಂಸಿ, ಎಸ್ಪಿ ಸಂಸದರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ರಾಜ್ಯವಿಭಜನೆ ವಿರೋಧಿಸಿ ಘೋಷಣೆ ಕೂಗಿದರು. ಇದರ ಮಧ್ಯೆಯೇ ಮಸೂದೆಯನ್ನು ಸದನದ ಮುಂದಿಟ್ಟ ಸಚಿವ ಸುಶೀಲ್ ಕುಮಾರ್ ಶಿಂದೆ, 2 ಭಾಗದವರ ಕಳವಳವನ್ನು ನಿವಾರಿಸಲು ಸರ್ಕಾರ ಸಾಧ್ಯವಾದಷ್ಟು ಪ್ರಯತ್ನಿಸಿದೆ.
ರಾಜ್ಯ ಇಬ್ಭಾಗದಿಂದ ಆಗುವ ಪರಿಣಾಮವನ್ನು ಕಡಿಮೆ ಮಾಡಲು ಪ್ರಯತ್ನಿಸಿದೆ ಸಂಸತ್ತಿಗೆ ಭರವಸೆ ನೀಡಿದರು. ಜತೆಗೆ, ಸೀಮಾಂಧ್ರದ ಭಾಗದ ಅಭಿವೃದ್ಧಿಗೆ ಕೇಂದ್ರದಿಂದ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಆ ಬಳಿಕ ಪ್ರತಿಪಕ್ಷ ನಾಯಕಿ ಸುಷ್ಮಾಸ್ವರಾಜ್, ಸಚಿವ ಜೈಪಾಲ್ ರೆಡ್ಡಿ ಅವರ ಚುಟುಕು ಭಾಷಣದ ನಂತರ ಧ್ವನಿಮತಕ್ಕೆ ಹಾಕಲಾಯಿತು.
16 ಸಂಸದರು ಅಮಾನತಾಗಿದ್ದರು: ತೆಲಂಗಾಣ ಮಸೂದೆಯನ್ನು ಫೆ.13ರಂದೇ ಲೋಕಸಭೆಯಲ್ಲಿ ಮಂಡಿಸಲು ಪ್ರಯತ್ನಿಸಲಾಗಿತ್ತು. ಆ ವೇಳೆ ಪೆಪ್ಪರ್ ಸ್ಪ್ರೇ, ಸ್ಪೀಕರ್ ಅವರ ಮೈಕ್ ಕೀಳುವಂಥ ಘಟನೆಗಳು ನಡೆದು ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಆ ಬಳಿಕ ಶಿಸ್ತು ಕ್ರಮದ ಹೆಸರಿನಲ್ಲಿ ಸಂಸತ್ತಿನೊಳಗೆ ಗದ್ದಲ ಎಬ್ಬಿಸಿದ್ದ ಸೀಮಾಂಧ್ರದ 16 ಸಂಸದರನ್ನು ಅಮಾನತು ಮಾಡಲಾಗಿತ್ತು.
ಸಂಸದರ ತಡೆಗೋಡೆ: ಫೆ.13ರಂದು ನಡೆದ ಪೆಪ್ಪರ್‌ಸ್ಪ್ರೇಯಂಥ ಘಟನೆ ಮರುಕಳಿಸದಂತೆ ನೋಡಿಕೊಳ್ಳಲು ಸಂಸತ್ತಿನಲ್ಲಿ ಕಾಂಗ್ರೆಸ್ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿತ್ತು. ಪಕ್ಷದ ಅಗ್ರಪಂಕ್ತಿಯ ನಾಯಕರು, ಸಚಿವರನ್ನು ಪ್ರತಿಭಟನಾಕಾರರಿಂದ ರಕ್ಷಿಸಲು ಸದನದ ಒಳಗೆ ಸಂಸದರ ತಡೆಗೋಡೆ ರಚಿಸಲಾಗಿತ್ತು. ಆರೋನ್ ರಶೀದ್, ಲಾಲ್ ಸಿಂಗ್, ಭಕ್ತ ಚರಣ್ ದಾಸ್, ಹಮ್ದುಲ್ಲಾ ಸಯೀದ್, ಮಹಾಬಲ್ ಮಿಶ್ರಾ ಮತ್ತು ಇತರೆ ಸಂಸದರು ಮೊದಲ ಸಾಲಿನಲ್ಲಿದ್ದ ಶಿಂದೆ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತಿತರರ ಸುತ್ತ ರಕ್ಷಣೆಗೆ ನಿಂತಿದ್ದರು.
ಇದಕ್ಕೂ ಮೊದಲು ಅಮಾನತುಗೊಂಡ ಸಂಸದರು ಸದನದೊಳಗೆ ಪ್ರವೇಶಿಸಲು ಪ್ರಯತ್ನಿಸಿದರೂ ಅವರ ಪ್ರಯತ್ನವನ್ನು ಮಾರ್ಷಲ್‌ಗಳ ಪ್ರಯತ್ನದೊಂದಿಗೆ ತಡೆಯಲಾಯಿತು.
ತೆಲಂಗಾಣ ಮಸೂದೆ ಜತೆಗೆ 38 ತಿದ್ದುಪಡಿಯನ್ನೂ ಅಂಗೀಕರಿಸಲಾಯಿತು. ಎಐಎಂಐಎಂ ಸದಸ್ಯ ಅಸಾದುದ್ದೀನ್ ಓವೈಸಿ ಮತ್ತು ತೃಣಮೂಲ ಕಾಂಗ್ರೆಸ್‌ನ ಸುಗತ ರಾಯ್ ಅವರು ಅನೇಕ ತಿದ್ದುಪಡಿಗಳನ್ನು ಸೂಚಿಸಿದರೂ ಅದು ತಿರಸ್ಕೃತಗೊಂಡಿತು.
ಇದು ಪ್ರಜಾಪ್ರಭುತ್ವದ ಪಾಲಿಗೆ ಕರಾಳ ದಿನ. ಹಾಡಹಗಲೇ ಪ್ರಜಾಪ್ರಭುತ್ವದ ಕಗ್ಗೊಲೆ ನಡೆದ ಘಟನೆಗೆ ನಾವು ಸಾಕ್ಷಿಯಾಗಿದ್ದೇವೆ. ರಾಜ್ಯ ವಿಭಜನೆ ನಿರ್ಧಾರವನ್ನು ಆಂಧ್ರದ ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ತೆಗೆದುಕೊಳ್ಳಲಾಗಿದೆ.
ಮಸೂದೆಗೆ ಅಂಗೀಕಾರ ಪಡೆಯುವ ಪ್ರಸಾರವನ್ನು ಉದ್ದೇಶಪೂರ್ವಕವಾಗಿ ಕಡಿತ ಮಾಡಿಲ್ಲ. ಬದಲಾಗಿ ತಾಂತ್ರಿಕ ಕಾರಣದಿಂದಾಗಿ ಕಲಾಪದ ನೇರಪ್ರಸಾರ ಮಾಡುವುದು ಸಾಧ್ಯವಾಗಿಲ್ಲ ಎಂದು ಲೋಕಸಭಾ ಟೀವಿ ಹೇಳಿಕೊಂಡಿದೆ. ನೇರಪ್ರಸಾರವನ್ನು ರದ್ದು ಮಾಡಿ ದೇಶವನ್ನು ಕತ್ತಲೆಯಲ್ಲಿಟ್ಟು ಮಸೂದೆಗೆ ಅಂಗೀಕಾರ ಪಡೆದ ಹಿನ್ನೆಲೆಯಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಈ ಕ್ರಮವನ್ನು ಪ್ರಜಾಪ್ರಭುತ್ವದ ಪಾಲಿಗೆ ಕರಾಳ ದಿನ ಎಂದು ಪ್ರತಿಪಕ್ಷಗಳು ಆರೋಪಿಸಿವು. ಮಸೂದೆಗೆ ಬೆಂಬಲ ವ್ಯಕ್ತಪಡಿಸಿದ್ದ ಬಿಜೆಪಿ ಕಲಾಪದ ನೇರ ಪ್ರಸಾರ ರದ್ದು ಮಾಡಿರುವ ವಿಚಾರ ಗೊತ್ತಿರಲಿಲ್ಲ ಎಂದು ತಿಳಿಸಿದೆ.
ಮಸೂದೆಗೆ ಅಂಗೀಕಾರ ಸಿಗುವುದು ಖಚಿತವಾಗುತ್ತಿದ್ದಂತೆ ಒಂದು ಹಂತದಲ್ಲಿ ಭಾವುಕರಾದ ಕಾಂಗ್ರೆಸ್ ಸಂಸದ ಪೊನ್ನಂ ಪ್ರಭಾಕರ್ ಸೋನಿಯಾ ಗಾಂಧಿ ಅವರ ಕಾಲು ಮುಟ್ಟಿದರು. ಮಸೂದೆಗೆ ಅಂಗೀಕಾರ ಸಿಗುತ್ತಿದ್ದಂತೆ ಪ್ರಭಾಕರ್ ಅವರು ಸೋನಿಯಾ ಭಾವಚಿತ್ರ ಪ್ರದರ್ಶನ ಮಾಡಲೂ ಮುಂದಾದರು. ಆದರೆ, ಸೋನಿಯಾ ಅವರ ಸೂಚನೆಯಂತೆ ಆ ಪ್ರಯತ್ನವನ್ನು ಕೈಬಿಟ್ಟರು.
ಈಗಾಗಲೇ ಕೆಳಮನೆಯ ಅಂಗೀಕಾರ ಪಡೆದಿರುವ ಮಸೂದೆಯನ್ನು ಬುಧವಾರ ರಾಜ್ಯಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ. ಒಂದು ವೇಳೆ ರಾಜ್ಯಸಭೆಯ ಅಂಗೀಕಾರ ದೊರೆತರೆ ತೆಲಂಗಾಣ ರಾಜ್ಯರಚನೆಗಿದ್ದ ಬಹುತೇಕ ಎಲ್ಲ ಅಡ್ಡಿ ಆತಂಕಗಳು ನಿವಾರಣೆಯಾದಂತಾಗಲಿದೆ.
Click this button or press Ctrl+G to toggle between Kannada and English