ನವದೆಹಲಿ: ಸದನದ ಬಾವಿಯಲ್ಲಿ ಗದ್ದಲ, ಘೋಷಣೆ, ರಾಜ್ಯಸಭೆ ಸೆಕ್ರೆಟರಿ ಜನರಲ್ ಶಂಷೇರ್ ಕೆ. ಶರೀಫ್‌ರಿಂದ ಬಲವಂತವಾಗಿ ಕಾಗದಪತ್ರ ಕಿತ್ತುಕೊಳ್ಳಲು ಯತ್ನ, ಉಪಸಭಾಪತಿಗಳಿಗೇ ಗದರಿದ ಸಂಸದರು, ಮೂರು ಬಾರಿ ಮುಂದೂಡಲ್ಪಟ್ಟ ಕಲಾಪ…
ಇದು ತೆಲಂಗಾಣ ಮಸೂದೆಗೆ ಸಂಬಂಧಿಸಿ ರಾಜ್ಯಸಭೆಯಲ್ಲಿ ಕಂಡ ಘಟನಾವಳಿಗಳು.
ಕೆಳಮನೆಯಲ್ಲಿ ಮಂಗಳವಾರವಷ್ಟೇ ನಾಟಕೀಯ ರೀತಿಯಲ್ಲಿ ಅಂಗೀಕಾರ ಪಡೆದಿದ್ದ ಮಸೂದೆಯನ್ನು ರಾಜ್ಯಸಭೆಯಲ್ಲಿ ಬುಧವಾರ ಮಂಡಿಸುವ ಸರ್ಕಾರದ ಪ್ರಯತ್ನ ಟಿಡಿಪಿ ಸಂಸದರ ಗದ್ದಲದಿಂದಾಗಿ ವಿಫಲವಾಗಿದೆ. ದಿನದ ಆರಂಭದಿಂದಲೇ ಕಲಾಪವನ್ನು ರಣರಂಗವಾಗಿ ಪರಿವರ್ತಿಸಿದ್ದ ಟಿಡಿಪಿ ಸಂಸದರು ಸದನದ ಬಾವಿಗೆ ನುಗ್ಗಿ ತೀವ್ರ ಗದ್ದಲ ಎಬ್ಬಿಸಿದರು. ಕಲಾಪ ಮೂರು ಬಾರಿ ಮುಂದೂಕಲು ಕಾರಣವಾದರು. ಇದರಿಂದ ಆಂಧ್ರ ಇಬ್ಭಾಗ ಮಸೂದೆಯನ್ನು ಮಂಡಿಸುವುದು ಅಸಾಧ್ಯವಾಯಿತು. ಈ ಹಿನ್ನೆಲೆಯಲ್ಲಿ ಸರ್ಕಾರ ಮಸೂದೆಯನ್ನು ಗುರುವಾರ ಮಂಡಿಸಲು ತೀರ್ಮಾನಿಸಿದೆ.
ರಮೇಶನ ಅವಾಂತರ: ಇದಕ್ಕೂ ಮೊದಲು ಟಿಡಿಪಿ ಸಂಸದರಾದ ಸಿ.ಎಂ. ರಮೇಶ್ ಮತ್ತು ವೈ.ಎಸ್. ಚೌಧರಿ ವರ್ತನೆಯಂತೂ ಉಪಸಭಾಪತಿಯವರಿಂದಲೂ ಖಂಡನೆಗೊಳಗಾಯಿತು. ಉಪಸಭಾಪತಿ ಕುರಿಯನ್ ಅವರು ರಾಜ್ಯಸಭೆ ಪ್ರಧಾನ ಕಾರ್ಯದರ್ಶಿ ಶಂಷೇರ್ ಅವರಿಗೆ ಲೋಕಸಭೆ ಸಂದೇಶವನ್ನು ಓದುವಂತೆ ಸೂಚಿಸಿದಾಗ ಬಾವಿಯಲ್ಲೇ ಇದ್ದ ರಮೇಶ್ ಇದಕ್ಕೆ ಅಡ್ಡಿ ಪಡಿಸಿದರು. ಶಂಷೇರ್ ಇನ್ನೇನು ಆ ಸಂದೇಶವನ್ನು ಓದಬೇಕು ಅನ್ನುವಾಗಲೇ ರಮೇಶ್ ಅದನ್ನು ಕಿತ್ತುಕೊಂಡರು. ನಂತರ ಅವರ ಮೇಜಿನ ಮೇಲಿದ್ದ ಮೈಕ್‌ಗೆ ಗುದ್ದಿದರು. ಈ ವೇಳೆ ಶಂಷೇರ್ ಗಲ್ಲಕ್ಕೂ ಏಟು ಬಿತ್ತು. ಸಂಸದರ ವರ್ತನೆ ವಿರುದ್ಧ ಕುರಿಯನ್ ಸಂಸದರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ನಂತರ ರಮೇಶ್ ತಮ್ಮ ವರ್ತನೆಗೆಗಾಗಿ ಕ್ಷಮೆ ಯಾಚಿಸಿದರು.
ಉಪಸಭಾಪತಿಗೇ ‘ಶಟ್ ಅಪ್’ ಅಂದ್ರು!: ತೆಲಂಗಾಣ ಮಸೂದೆ ವಿರೋಧಿ ಸಂಸದರು ಉಪಸಭಾಪತಿ ಪಿ.ಜೆ. ಕುರಿಯನ್ ಅವರಿಗೇ ‘ಶಟ್ ಅಪ್(ಬಾಯ್ಮುಟ್ಟಿ)’ ಎಂದು ಗದರಿದ ಘಟನೆಗೂ ರಾಜ್ಯಸಭೆ ಸಾಕ್ಷಿಯಾಯಿತು. ತೆಲಂಗಾಣ ವಿರೋಧಿ ಹೋರಾಟಗಾರರ ದುಂಡಾವರ್ತನೆಯಿಂದ ಬೇಸತ್ತ ಕುರಿಯನ್ ಒಂದು ಹಂತದಲ್ಲಿ ತೀವ್ರ ಆಕ್ರೋಶಕ್ಕೆ ಒಳಗಾದರು. ಸದನದ ಬಾವಿಗೆ ನುಗ್ಗಿ ದಾಂದಲೆ ನಡೆಸುತ್ತಿದ್ದ ಸಂಸದರಿಗೆ ಶಟ್‌ಅಪ್ ಎಂದು ಗದರಿದರು. ಆಗ ಬಾವಿಯಲ್ಲಿ ನೆರೆದಿದ್ದ ಸಂಸದರು ಕುರಿಯನ್ ಅವರಿಗೇ ಶಟ್‌ಅಪ್ ಎಂದು ಮರು ಗದರಿದ್ದಾರೆ. ತೆಲಂಗಾಣ ವಿರೋಧಿ ಸಂಸದರು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಅವರಿಂದ ಕಾಗದಪತ್ರ ಕಸಿಯಲು ಯತ್ನಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ.
ಇಂದು ಮಂಡನೆ: ಈಗಾಗಲೇ ಲೋಕಸಭೆಯ ಅನುಮೋದನೆ ಪಡೆದಿರುವ ತೆಲಂಗಾಣ ಮಸೂದೆಯನ್ನು ಬುಧವಾರ ರಾಜ್ಯಸಭೆಯಲ್ಲಿ ಮಂಡಿಸುವ ಸರ್ಕಾರದ ಪ್ರಯತ್ನ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಸೂದೆಯನ್ನು ಗುರುವಾರ ಮೇಲ್ಮನೆಯಲ್ಲಿ ಮಂಡಿಸಲಿದೆ.
ಪ್ರಧಾನಿ ಮಾತುಕತೆ ವಿಫಲ: ತೆಲಂಗಾಣ ಮಸೂದೆಗೆ ತಿದ್ದುಪಡಿ ಇಲ್ಲದೆ ರಾಜ್ಯಸಭೆಯಲ್ಲಿ ಅಂಗೀಕರಿಸುವ ಸರ್ಕಾರದ ಪ್ರಯತ್ನ ವಿಫಲವಾಗಿದೆ. ರಾಜ್ಯಸಭೆಯಲ್ಲಿ ಬುಧವಾರವೇ ಮಸೂದೆಯನ್ನು ಮಂಡಿಸುವ ನಿಟ್ಟಿನಲ್ಲಿ ಪ್ರಧಾನಿ ಮನಮೋಹನ ಸಿಂಗ್ ಬಿಜೆಪಿ ಮುಖಂಡರಾದ ಅರುಣ್‌ಜೇಟ್ಲಿ, ವೆಂಕಯ್ಯನಾಯ್ಡು ಜತೆ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಆದರೆ, ಬಿಜೆಪಿ ಕೆಲ ತಿದ್ದುಪಡಿಗೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಅದು ಮುರಿದು ಬಿತ್ತು. ಈ ಹಿನ್ನೆಲೆಯಲ್ಲಿ ಮಸೂದೆ ಮಂಡನೆಯನ್ನು ಮುಂದೂಡಬೇಕಾಯಿತು. ಚಳಿಗಾಲದ ಅಧಿವೇಶನ ಶುಕ್ರವಾರ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಸರ್ಕಾರ ಗುರುವಾರವೇ ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ. ಒಂದು ವೇಳೆ ರಾಜ್ಯಸಭೆಯಲ್ಲಿ ಮೂಸೂದೆ ತಿದ್ದುಪಡಿಗೆ ಒಳಗಾದರೆ ಈ ಮಸೂದೆಯನ್ನು ಲೋಕಸಭೆಯಲ್ಲಿ ಮತ್ತೊಂದು ಬಾರಿ ಮಂಡಿಸುವುದು ಅನಿವಾರ್ಯವಾಗಲಿದೆ.
ವಿಶೇಷ ಸ್ಥಾನಮಾನ ನೀಡಿ: ಸೋನಿಯಾ ಸೂಚನೆ: ತೆಲಂಗಾಣ ರಾಜ್ಯ ರಚನೆಯಿಂದ ಭುಗಿಲೆದ್ದಿರುವ ಆಕ್ರೋಶ ತಣ್ಣಗಾಗಿಸುವ ನಿಟ್ಟಿನಲ್ಲಿ ಸೀಮಾಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಸೂಚಿಸಿದ್ದಾರೆ. ಮೂಲಗಳ ಪ್ರಕಾರ ಸುಮಾರು ಐದು ವರ್ಷಗಳ ಕಾಲ ವಿಶೇಷ ಸ್ಥಾನಮಾನ ನೀಡುವಂತೆ ಅವರು ಹೇಳಿದ್ದಾರೆ ಎನ್ನಲಾಗಿದೆ.
ಆಂಧ್ರಪ್ರದೇಶದ ಸಿಎಂ ಕಿರಣ್ ರೆಡ್ಡಿ ಕೊನೆಗೂ ರಾಜಿನಾಮೆ ನೀಡಿದ್ದಾರೆ. ಆಂಧ್ರವಿಭಜನೆ ವಿರೋಧಿಸಿ ಬುಧವಾರ ಶಾಸಕ ಸ್ಥಾನ, ಕಾಂಗ್ರೆಸ್ ಸದಸ್ಯತ್ವಕ್ಕೂ ರಾಜಿನಾಮೆ ಸಲ್ಲಿಸಿದ್ದಾರೆ. ಕೆಲ ಸಚಿವರು, ಶಾಸಕರ ಜತೆಗೆ ರಾಜ್ಯಪಾಲನ್ನು ಭೇಟಿಯಾದ ರೆಡ್ಡಿ ರಾಜಿನಾಮೆ ಪತ್ರ ಸಲ್ಲಿಸಿದರು. ಆದರೆ, ಹೊಸ ಪಕ್ಷ ಸ್ಥಾಪನೆ ವಿಚಾರದಲ್ಲಿ ಅವರು ಮೌನವಹಿಸಿದ್ದಾರೆ.
Click this button or press Ctrl+G to toggle between Kannada and English