ವಿಧಾನಸೌಧ ಮುಂದೆ ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆಗೆ ಯತ್ನ

1:07 PM, Friday, February 21st, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Vidhana-Soudhaಬೆಂಗಳೂರು: ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ತುಮಕೂರು ಮೂಲದ ಕುಟುಂಬವೊಂದು ವಿಧಾನಸೌಧದ ಪಕ್ಕದಲ್ಲಿರುವ ವಿಕಾಸಸೌಧದ ಮುಂದೆ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಘಟನೆ ಶುಕ್ರವಾರ ನಡೆಯಿತು.

ನಿವೃತ್ತ ಎಸಿಪಿ ಸುಬ್ಬಣ್ಣ ವಿರುದ್ಧ ಕಿರುಕುಳ ಆರೋಪ ಮಾಡಿರುವ ಕುಟುಂಬ, ಇಂದು ಬೆಳಗ್ಗೆ ವಿಕಾಸಸೌಧದ ಮುಂದೆ ಕುಟುಂಬದ ಆರು ಮಂದಿ ಪೆಟ್ರೋಲ್ ಕ್ಯಾನ್ ಹಿಡಿದುಕೊಂಡು ಕಾರಿನಲ್ಲಿ ಕುಳಿತು, ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ಆದರೆ ಸ್ಥಳದಲ್ಲಿದ್ದ ಪೊಲೀಸರ ಮಧ್ಯಪ್ರವೇಶಿಸಿ ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವೊಲಿಸಿದರು. ಬಳಿಕ ಕಾರಿನಿಂದ ಕೆಳಗಿಳಿದ ಕುಟುಂಬ, ನಮಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿತು.

ತುಮಕೂರಿನ ಕೆ.ಆರ್.ಬಡಾವಣೆ ನಿವಾಸಿಗಳಾದ  ಕೆ.ಮಹೇಶ್‌, ಪತ್ನಿ ಎಸ್‌.ದಾಕ್ಷಾಯಿಣಿ,  ಮಹೇಶ್ ತಂದೆ, ತಾಯಿ ಹಾಗೂ ಮಕ್ಕಳಾದ ವಿದ್ಯಾ ಮತ್ತು ಚಂದನ್‌ ಆತ್ಮಹತ್ಯೆಗೆ ಯತ್ನಿಸಿದವರು. ಭೂ ವಿವಾದ ಸಂಬಂಧ ಕಳೆದ ಎರಡು ವರ್ಷಗಳಿಂದ ನಿತ್ಯ ಪೊಲೀಸ್ ಠಾಣೆ ಹಾಗೂ ಕೋರ್ಟ್‌ಗೆ ಅಲೆಯುತ್ತಿದ್ದೇವೆ. ಈ ಸಂಬಂಧ ಹಲವು ಸಚಿವರಿಗೂ ಮನವಿ ಮಾಡಿದ್ದೇವೆ. ಆದರೆ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ಆತ್ಮಹತ್ಯೆ ಬೆದರಿಕೆ ಹಾಕಿದ ಕುಟುಂಬದ ಸದಸ್ಯೆ ದಾಕ್ಷಾಯಿಣಿ ಅವರು ಹೇಳಿದ್ದಾರೆ.

ಈ ಸಂಬಂಧ ವಿಧಾಸಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕುಟುಂಬದ ಆರು ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ: ತುಮಕೂರಿನ ಅರಕೆರೆ ಗ್ರಾಮದ ದಾಕ್ಷಾಯಿಣಿ, ಕೆ.ಮಹೇಶ್‌ ದಂಪತಿ ಕೆ.ಆರ್‌.ಬಡಾವಣೆಯಲ್ಲಿ ಹೋಟೆಲ್‌ ನಡೆಸುತ್ತಿದ್ದಾರೆ. ದಾಕ್ಷಾಯಿಣಿ ಸೋದರರಾದ ಕಾಂತರಾಜು ಮತ್ತು ಸೋಮಶೇಖರ್ ಅರಕೆರೆಯಲ್ಲಿ ಆಸ್ತಿ ಮಾಡೋಣ ಎಂದು, ದಾಕ್ಷಾಯಿಣಿ ಮತ್ತು ಮಹೇಶ್ ರಿಂದ 45 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆ ಎಂಬುದು ಆರೋಪ. ಸೋದರರ ವಂಚನೆ ಕುರಿತು 2010ರಲ್ಲಿ ತುಮಕೂರು ಸಿವಿಲ್‌ ಕೋರ್ಟ್‌ನಲ್ಲಿ ದಾಕ್ಷಾಯಿಣಿ ದೂರು ನೀಡಿದ್ದರು. ಆದರೆ, ತುಮಕೂರು ಸರ್ಕಲ್‌ ಇನ್ಸ್‌ಪೆಕ್ಟರ್ ಹಾಗೂ ನಗರದಲ್ಲಿ ಎಸಿಪಿಯಾಗಿ ನಿವೃತ್ತವಾಗಿರುವ ಸುಬ್ಬಣ್ಣ ಮಧ್ಯಪ್ರವೇಶಿಸಿ ದೂರನ್ನು ಹಿಂಪಡೆಯುವಂತೆ ಮನವಿ ಮಾಡಿದ್ದರು. ಪೊಲೀಸರು ಸಂಧಾನ ನಡೆಸುತ್ತಾರೆ ಎಂದು ದಾಕ್ಷಾಯಿಣಿ ಅವರು ದೂರು ವಾಪಸ್ ಪಡೆದಿದ್ದಾರೆ.

ಆದರೆ, ಎಸಿಪಿ ಮತ್ತು ಪೊಲೀಸರು ಸೋದರರರಿಂದ ಹಣಪಡೆದು, ಈಗ ದಾಕ್ಷಾಯಿಣಿ ಕುಟುಂಬದವರಿಗೆ ಬೆದರಿಕೆ ಹಾಕುತ್ತಿದ್ದಾರೆ. 2013ರ ಫೆ.21ರಂದು ದಾಕ್ಷಾಯಿಣಿ ಕುಟುಂಬ ಮಾಧ್ಯಮಗಳ ಮುಂದೆ ಬಂದು ತಮ್ಮ ಸಮಸ್ಯೆ ಹೇಳಿಕೊಂಡಿದ್ದರು. ನಂತರ ಶೀಘ್ರವೇ ವಿವಾದ ಇತ್ಯರ್ಥಪಡಿಸುವುದಾಗಿ ಸುಬ್ಬಣ್ಣ ಭರವಸೆ ನೀಡಿದ್ದರು. ಈಗ ನಿವೃತ್ತಿಯಾಗಿರುವ ಸುಬ್ಬಣ್ಣ ಅವರು ನನಗೂ ನಿಮ್ಮ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ, ಎಂದು ದಂಪತಿಗಳನ್ನು ವಂಚಸುವ ಮೂಲಕ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆತ್ಮಹತ್ಯೆಗೆ ಯತ್ನಿಸಿದ ದಾಕ್ಷಾಯಿಣಿ ಕುಟುಂಬದವರು ಆರೋಪಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English