ಲೋಕಾಯುಕ್ತ ತಿದ್ದುಪಡಿಗೆ ಸಹಿ ಹಾಕಬೇಡಿ: ರಾಜ್ಯಪಾಲರಿಗೆ ನ್ಯಾ.ಭಾಸ್ಕರ್‌ರಾವ್ ಮನವಿ

4:48 PM, Monday, February 24th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Bhaskar-Ravಬೆಂಗಳೂರು: ಕೇಂದ್ರ ಸರ್ಕಾರದ ಜಾರಿಗೆ ತಂದಿರುವ ಲೋಕಪಾಲ ಮಾದರಿ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿ ತರುವುದಕ್ಕೆ ಲೋಕಾಯುಕ್ತರಿಂದಲೇ ವಿರೋಧ ವ್ಯಕ್ತವಾಗಿದೆ.

ಲೋಕಾಯುಕ್ತ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತರಲು ಮುಂದಾಗಿದ್ದು, ಇದರಲ್ಲಿ ಸಾಕಷ್ಟು ಲೋಪಗಳಿವೆ. ಇದರಿಂದ ಲೋಕಾಯುಕ್ತ ಸಂಸ್ಥೆಯ ಮೂಲ ಸಂರಚನೆಗೆ ಧಕ್ಕೆ ತರುತ್ತದೆ ಹಾಗೂ ಭ್ರಷ್ಟಾಚಾರ ನಿಯಂತ್ರಣ ಉದ್ದೇಶಕ್ಕೆ ಅಡ್ಡಿಯಾಗುತ್ತದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ಭಾನುವಾರ ಭೇಟಿ ಮಾಡಿದ ಲೋಕಾಯುಕ್ತ ನ್ಯಾ. ವೈ. ಭಾಸ್ಕರ್‌ರಾವ್, ಲೋಕಾಪಾಲ ಮಸೂದೆಯಲ್ಲಿರುವ ಋಣಾತ್ಮಕ ಅಂಶಗಳ ಬಗ್ಗೆ ಚರ್ಚೆ ನಡೆಸಿದರು. ಅಲ್ಲದೇ ಇದಕ್ಕೆ ಪೂರಕವಾಗಿ ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿ ತರಲು ಸರ್ಕಾರ ಉದ್ದೇಶಿಸಿರುವುದರಿಂದ ಈ ತಿದ್ದುಪಡಿಗೆ ಅಂಕಿತ ಹಾಕದಂತೆ ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಲೋಕಪಾಲ ಕಾಯಿದೆಗೆ ಪೂರಕವಾಗಿ ರಾಜ್ಯದ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಶುಕ್ರವಾರ ಅಂಗೀಕಾರ ದೊರೆತಿದೆ. ಈ ತಿದ್ದುಪಡಿ ವಿಧೇಯಕವನನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಸೋಮವಾರ ಮಂಡಿಸಲು ಸರ್ಕಾರ ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿರುವ ಲೋಕಾಯುಕ್ತರು, ವಿಧೇಯಕದಲ್ಲಿರುವ ಲೋಪಗಳ ಬಗ್ಗೆ ಗಮನ ಸೆಳೆದಿದ್ದಾರೆ. ರಾಜ್ಯಪಾಲರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ಈ ಭೇಟಿಯ ಬಳಿಕ ಚರ್ಚೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಲು ಅವರು ನಿರಾಕರಿಸಿದರು.

ಏಕೆ ಆತಂಕ: ಲೋಕಾಯುಕ್ತ ಕಾಯಿದೆಗೆ ಉದ್ದೇಶಿತ ತಿದ್ದುಪಡಿ, ಸರ್ಕಾರವೇ ಜಾತಿವಾರು ಪ್ರಾತಿನಿಧ್ಯ ನೀಡಿ ನ್ಯಾಯಾಂಗ ಇಲಾಖೆ ಹಾಗೂ ಸಮಾಜದ ಗಣ್ಯ ವ್ಯಕ್ತಿಗಳನ್ನು ನಾಮ ನಿರ್ದೇಶಿತ ಸದಸ್ಯರನ್ನಾಗಿ ಒಂದು ಸಮಿತಿಯನ್ನು ನೇಮಕ ಮಾಡಲಿದೆ. ಈ ಸಮಿತಿಯ ಸದಸ್ಯರು ಕೂಡ ವಿಚಾರಣೆ, ತನಿಖೆ ಮಾಡಬಹುದಾಗಿದೆ. ಇದರಿಂದ ಲೋಕಾಯುಕ್ತದ ಅಧಿಕಾರ ವಿಭಜನೆಯಾದಂತಾಗುತ್ತದೆ.

ಹೊಸ ಸಮಿತಿಯ ಸದಸ್ಯರನ್ನೆಲ್ಲ ಸರ್ಕಾರವೇ ನಾಮ ನಿರ್ದೇಶನ ಮಾಡುವುದರಿಂದ ಭವಿಷ್ಯದಲ್ಲಿ ಸಿಎಂ ಅಥವಾ ಸಚಿವ ಸಂಪುಟ ಸದಸ್ಯರ ವಿರುದ್ಧ ಆರೋಪಗಳು ಬಂದಾಗ ಪಕ್ಷಪಾತವಿಲ್ಲದೇ ತನಿಖೆ ಹಾಗೂ ವಿಚಾರಣೆ ನಡೆಯುವ ಭರವಸೆ ಇಲ್ಲ. ಇದರೊಂದಿಗೆ ಲೋಕಾಯುಕ್ತರ ಎಲ್ಲಾ ಅಧಿಕಾರಗಳಿಗೂ ಕತ್ತರಿ ಬೀಳಲಿದೆ. ಹೀಗಾಗಿ ಲೋಕಾಯುಕ್ತ ಸಂಸ್ಥೆಯ ಉದ್ದೇಶವೇ ಬುಡಮೇಲಾಗುವ ಆತಂಕವಿದೆ. ಸಿಎಂ, ಸಚಿವರು, ಸರ್ಕಾರ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳ ವಿರುದ್ಧ ತನಿಖೆ, ವಿಚಾರಣೆಯ ಅಧಿಕಾರ ಲೋಕಾಯುಕ್ತರಿಗೆ ಇರಬೇಕು.

ಆದರೆ ಹೊಸ ತಿದ್ದುಪಡಿ ಪ್ರಕಾರ ಲೋಕಾಯುಕ್ತ ತನಿಖೆಯೇ ಅಂತಿಮವಾಗುವುದಿಲ್ಲ. ಸಮಿತಿಯ ತನಿಖೆಯೂ ನಡೆಯಲಿದೆ. ಇದರಿಂದ ಸಮಸ್ಯೆಗಳು ಹೆಚ್ಚಾಗಲಿವೆ ಎನ್ನುವ ಅಭಿಪ್ರಾಯವನ್ನು ನ್ಯಾ.ವೈ.ಭಾಸ್ಕರ್‌ರಾವ್ ರಾಜ್ಯಪಾಲರ ಮುಂದೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸದ್ಯ ಲೋಕಾಯುಕ್ತ ಪೊಲೀಸರಿಗೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು (ಎಡಿಜಿಪಿ) ಮುಖ್ಯಸ್ಥರಾಗಿದ್ದಾರೆ. ತಿದ್ದುಪಡಿ ಪ್ರಕಾರ, ಎಡಿಜಿಪಿಯ ಮೇಲ್ವಿಚಾರಣೆಗಾಗಿಯೇ ಕೇಂದ್ರದ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಲಾಗುತ್ತದೆ. ಇದರಿಂದ ಭ್ರಷ್ಟಾಚಾರ ಆರೋಪಗಳಿರುವ ಜನಪ್ರತಿನಿಧಿಗಳು, ಅಧಿಕಾರಿಗಳ ಕಚೇರಿ, ನಿವಾಸಗಳ ಮೇಲೆ ದಾಳಿ ನಡೆಯುವ ಎಲ್ಲ ವಿಚಾರಗಳು ನಿವೃತ್ತ ಐಎಎಸ್ ಅಧಿಕಾರಿ ನೇತೃತ್ವದಲ್ಲೇ ನಡೆಯಲಿವೆ. ಆದರೆ, ನಿವೃತ್ತ ಐಎಎಸ್ ಅಧಿಕಾರಿಯನ್ನು ಸರ್ಕಾರವೇ ನೇಮಿಸುವುದರಿಂದ ಎಡಿಜಿಪಿ ಅವರ ಕೆಲಸದ ಮೇಲೆ ನಿಯಂತ್ರಣ ಸಾಧಿಸುವ ಅವಕಾಶ ಸರ್ಕಾರಕ್ಕೆ ಇರುತ್ತದೆ.  ಹೀಗೆ ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿಯಲ್ಲಿ ಹಲವು ಲೋಪ ದೋಷಗಳು ಇವೆ. ಲೋಕಾಯುಕ್ತ ಸಂಸ್ಥೆಯ ಶಕ್ತಿ ಕುಂದುವ ಭೀತಿ ಇರುವ ಹಿನ್ನೆಲೆಯಲ್ಲಿ ಲೋಕಾಯುಕ್ತರು ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ.

ಸೋಮವಾರ ಉಭಯ ಸದನಗಳಲ್ಲಿ ನೂತನ ವಿಧೇಯಕಕ್ಕೆ ಒಪ್ಪಿಗೆ ದೊರೆತರೆ, ರಾಜ್ಯಪಾಲರ ಅಂಕಿತಕ್ಕೆ ಬರಲಿದೆ. ಈ ವೇಳೆ ರಾಜ್ಯಪಾಲರು ಲೋಕಾಯುಕ್ತ ನ್ಯಾಯಮೂರ್ತಿ ಗಮನಕ್ಕೆ ತಂದಿರುವ ವಿಚಾರಗಳ ಆಧಾರದ ಮೇಲೆ ತಿದ್ದುಪಡಿಗೆ ಅಂಕಿತ ಹಾಕದೆ ತಡೆ ಹಿಡಿಯುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.

ರಾಜ್ಯದಲ್ಲೂ ಕೇಂದ್ರದ ಲೋಕಪಾಲ್ ಮಾದರಿ ವಿಧೇಯಕ ಜಾರಿಗೆ ಚಿಂತಿಸಲಾಗಿದೆ. ಆದರೆ, ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿ ತರಲು ತರಾತುರಿ ಏನಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಲೋಕಪಾಲ್ ಮಾದರಿ ಜಾರಿಗೆ ಲೋಕಾಯುಕ್ತಕ್ಕೆ ತಿದ್ದುಪಡಿ ತರಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಆದರೆ, ಪ್ರಸ್ತುತ ನಡೆಯುತ್ತಿರುವ ವಿಧಾನಮಂಡಲದ ಬಜೆಟ್ ಅಧಿವೇಶನದಲ್ಲಿಯೇ ತರಾತುರಿಯಲ್ಲಿ ಲೋಕಾಯುಕ್ತ ತಿದ್ದುಪಡಿ ವಿಧೇಯಕ ಮಂಡಿಸುವುದಿಲ್ಲ ಎಂದು ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ತಿಳಿಸಿದ್ದಾರೆ.

ಸಂಪುಟ ನಿರ್ಧಾರದಿಂದ ಲೋಕಾಯುಕ್ತದ ಅಧಿಕಾರ ವಿಭಜನೆಯಾದಂತಾಗುತ್ತದೆ, ಸಿಎಂ, ಸಚಿವರ ವಿರುದ್ಧ ಆರೋಪ ಬಂದಾಗ ಪಕ್ಷಪಾತ ರಹಿತ ತನಿಖೆ ನಡೆಯುವ ಬಗ್ಗೆ ಆತಂಕ, ಹೊಸ ಪ್ರಸ್ತಾಪದ ಪ್ರಕಾರ ಲೋಕಾಯುಕ್ತದ ಜತೆ ಪ್ರತ್ಯೇಕ ಸಮಿತಿಯಿಂದಲೂ ನಡೆಯಲಿದೆ ತನಿಖೆ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English