ಬೆಂಗಳೂರು: ದೇಶದ ರಕ್ಷಣೆಗೆ ಶ್ರಮಿಸಿದ ಛತ್ರಪತಿ ಶಿವಾಜಿ ಜಯಂತ್ಯುತ್ಸವವನ್ನು ರಾಷ್ಟ್ರಾದ್ಯಂತ ಆಚರಿಸಬೇಕೆಂದು ಜೆಡಿಎಸ್ ನಾಯಕ ಪಿ.ಜಿ.ಆರ್.ಸಿಂಧ್ಯ ಒತ್ತಾಯಿಸಿದ್ದಾರೆ.
ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಶಿವಾಜಿ ಮಹಾರಾಜರ 387ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಜನರ ರಕ್ಷಣೆ ವಿಚಾರದಲ್ಲಿ ಶಿವಾಜಿ ದೇಶಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಆದ್ದರಿಂದಲೇ ವಿಯೆಟ್ನಾಂನಂತಹ ಸಣ್ಣ ರಾಜ್ಯ ಪ್ರತಿ ವರ್ಷ ತಪ್ಪದೇ ಶಿವಾಜಿ ಜಯಂತಿ ಆಚರಿಸುತ್ತಿದೆ. ಅಂದ ಮೇಲೆ ನಮ್ಮ ರಾಜ್ಯದಲ್ಲಿ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ವಾಲ್ಮೀಕಿ ಜಯಂತಿ, ಕನಕ ಜಯಂತಿಯನ್ನು ಆಚರಿಸುವಂತೆ ಶಿವಾಜಿ ಜಯಂತಿಯನ್ನು ರಾಷ್ಟ್ರಾದ್ಯಂತ ಆಚರಿಸುವಂತಾಗಲು ಸಂಸದರು ಮುಂದಾಗಬೇಕು. ಅಂದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗುವ ಸದಸ್ಯರು ಸಂಸತ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ರಾಷ್ಟ್ರಾದ್ಯಂತ ಶಿವಾಜಿ ಜಯಂತಿ ಆಚರಣೆಗೆ ಒತ್ತಾಯಿಸಿಬೇಕು ಸಿಂಧ್ಯ ಸಲಹೆ ನೀಡಿದರು.
ಗೃಹ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ಕ್ಷತ್ರೀಯ ಮರಾಠರನ್ನು ಪ್ರವರ್ಗ 3ಎದಿಂದ 2ಎಗೆ ಸೇರಿಸಬೇಕು. ಆ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗೆ 10ಕೋಟಿ ಅನುದಾನ ನೀಡಬೇಕೆಂದು ಎನ್ನುವುದು ಮರಾಠ ಪರಿಷತ್ತಿನಲ್ಲಿ ಬೇಡಿಕೆಗಳಾಗಿವೆ. ಆದರೆ ಈ ಬಗ್ಗೆ ಇಲ್ಲಿ ಏನೂ ಹೇಳಲಾಗದು. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುತ್ತೇನೆ ಎಂದಷ್ಟೇ ಹೇಳಿದರು.
ಇದೇವೇಳೆ, ಸಮುದಾಯ ವಿವಿಧ ಲೇಖಕರು ರಚಿಸಿದ ವೇದಗಳು, ವೇದಾಂಗಗಳು ಮತ್ತು ಯೋಗ ಮತ್ತು ಆರ್ಯುವೇದ ಎಂಬ ಪುಸ್ತಕಗಳನ್ನು ಸಿಂಧ್ಯಾ ಬಿಡುಗಡೆಗೊಳಿಸಿದರು. ಪರಿಷತ್‌ನ ಅಧ್ಯಕ್ಷ ವಿ.ಎ. ರಾಣೋಜಿ ರಾವ್ ಸಾಠೆ, ಪ್ರಧಾನ ಕಾರ್ಯದರ್ಶಿ ಶಿವಾಜಿ ರಾವ್ ಜಾದವ್, ಮಹಿಳಾ ಅಧ್ಯಕ್ಷೆ ರಮಾಮಣಿ ಜಾದವ್ ಭಾಗವಹಿಸಿದ್ದರು.
Click this button or press Ctrl+G to toggle between Kannada and English