ಬೆಂಗಳೂರು: ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅವರ ವಿರುದ್ಧ ಕಾಂಗ್ರೆಸ್ ನಾಯಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಮಂಗಳವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಹಿರೇಮಠ ಅವರು ಪ್ರಚಾರಕ್ಕಾಗಿ ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿರುವ ರಮೇಶ್ ಕುಮಾರ್, ಈ ಸಂಬಂಧ ನಗರದ 8ನೇ ಎಸಿಎಂಎಂ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ.
ಕೋರ್ಟ್ ರಮೇಶ್ ಕುಮಾರ್ ಅವರ ಅರ್ಜಿಯನ್ನು ಸ್ವೀಕರಿಸಿದ್ದು, ನಾಳೆ ಅರ್ಜಿಯ ವಿಚಾರಣೆ ನಡೆಸಲಿದೆ. ಈ ಮೂಲಕ ಹಿರೇಮಠ ಹಾಗೂ ರಮೇಶ್ ಕುಮಾರ್ ನಡುವಿನ ಗುದ್ದಾಟ ಇದೀಗ ಕಾನೂನಿನ ಸ್ವರೂಪ ಪಡೆದುಕೊಂಡಿದೆ.
ಕೋಲಾರದ ಶ್ರೀನಿವಾಸಪುರದಲ್ಲಿ 54 ಎಕರೆ ಸರಕಾರಿ ಭೂಮಿ ಒತ್ತುವರಿ ಸೇರಿದಂತೆ ರಮೇಶ್ ಕುಮಾರ್ ವಿರುದ್ಧ ಹಲವು ಆರೋಪಗಳನ್ನು ಹಿರೇಮಠ ಮಾಡಿದ್ದಾರೆ. ಈ ಸಂಬಂಧ ರಮೇಶ್ ಕುಮಾರ್ ಅವರು ಹಿರೇಮಠ ವಿರುದ್ಧ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸಿದ್ದರು.
ರಮೇಶ್ ಕುಮಾರ್ ಅವರ ಬೆದರಿಕೆಗೆ ನಾನು ಜಗ್ಗುವುದಿಲ್ಲ. ಅವರು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವ ಮೂಲಕ ಹೋರಾಟ ಮುಂದುವರಿಸಲು ಮತ್ತಷ್ಟು ಉತ್ತೇಜನ ನೀಡಿದ್ದಾರೆ ಎಂದು ಹಿರೇಮಠ ತಿರುಗೇಟು ನೀಡಿದ್ದಾರೆ.
Click this button or press Ctrl+G to toggle between Kannada and English