ಬಂಟ್ವಾಳ: ಮಾ. 1ರಿಂದ ಎಂಡೋ ಸಂತ್ರಸ್ತರ ಪುನರ್ ಸಮೀಕ್ಷೆ ನಡೆಸಲಾಗುವುದು. ಅರ್ಹ ಎಂಡೋ ಸಂತ್ರಸ್ತರನ್ನು ಪತ್ತೆ ಹಚ್ಚಿ ಅವರಿಗೂ ಸರ್ಕಾರದ ಸೌಲಭ್ಯ ಒದಗಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಇಲಾಖೆ ಇದರ ಆಶ್ರಯದಲ್ಲಿ ಗುರುವಾರ ಮಂಚಿಯ ಲಯನ್ಸ್ ಮಂದಿರದಲ್ಲಿ ನಡೆದ ಎಂಡೋ ಸಂತ್ರಸ್ತರ ಮಿತವೇತನದ (ಸ್ಟೈಫಂಡ್) ಆದೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಎಂಡೋ ಸಂತ್ರಸ್ತರಿಗೆ ಆದೇಶ ಪತ್ರ ವಿತರಿಸಿ ಮಾತನಾಡಿದರು.
ದ.ಕ. ಜಿಲ್ಲೆಯಲ್ಲಿ ಈಗಾಗಲೇ 2400ಕ್ಕೂ ಅಧಿಕ ಎಂಡೋ ಸಂತ್ರಸ್ತರನ್ನು ಗುರುತಿಸಿ ಅವರಿಗೆ ಸರ್ಕಾರದ ವತಿಯಿಂದ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ. ಈ ನಡುವೆ ಹಲವು ಎಂಡೋ ಸಂತ್ರಸ್ತರ ಹೆಸರು ಬಿಟ್ಟು ಹೋಗಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಮರು ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.
ಇನ್ನೂ 6 ಎಂಡೋ ಪಾಲನಾ ಕೇಂದ್ರ..: ಎಂಡೋ ಪೀಡಿತರಿಗೆ ಶಾಶ್ವತ ಪುನರ್ ವಸತಿ ಕಲ್ಪಿಸಬೇಕು ಎಂಬ ಹೋರಾಟ ಸಮಿತಿಯ ಕೂಗು ಸರ್ಕಾರದ ಗಮನದಲ್ಲಿದೆ. ಈಗಾಗಲೇ ಕೊಕ್ಕಡ ಹಾಗೂ ಕೈಲದಲ್ಲಿ ಎಂಡೋ ಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಹೆಚ್ಚುವರಿಯಾಗಿ ಇನ್ನೂ 6 ಎಂಡೋ ಪಾಲನಾ ಕೇಂದ್ರಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಕೇರಳ ಮಾದರಿಯಲ್ಲಿ ಎಂಡೋ ಸಂತ್ರಸ್ತರಿಗೆ ನೆರವಾಗಬೇಕು ಎಂಬ ಇಚ್ಚಾಶಕ್ತಿಯಿಂದ ಮುಂದುವರಿದ ಕರ್ನಾಟಕ ಸರ್ಕಾರ ಇಂದು, ಕೇರಳಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಎಂಡೋ ಸಂತ್ರಸ್ತರಿಗೆ ಮಾಸಾಶನ ನೀಡಲು ಮುಂದಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಇಬ್ರಾಹಿಂ ಮಾತನಾಡಿ, ಜಿಲ್ಲೆಯ ಒಟ್ಟು 2,479 ಎಂಡೋಸಂತ್ರಸ್ತರ ಪೈಕಿ 2,189 ಮಂದಿಗೆ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಉಳಿದವರಿಗೆ ಆಯಾ ಗ್ರಾಮ ಪಂಚಾಯಿತಿಗಳ ಮೂಲಕ ಕಾರ್ಡ್ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಗುವುದು. ಸರ್ಕಾರ ಎಂಡೋ ಸಂತ್ರಸ್ತರ ಹಿತ ಕಾಯುವ ದೃಷ್ಟಿಯಿಂದ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ, ಇಲ್ಲಿಯೂ ಕೆಲವರು ಈ ಸೌಲಭ್ಯಗಳನ್ನು ದುರುಪಯೋಗ ಮಾಡಿಕೊಳ್ಳದಂತೆ ಅಧಿಕಾರಿವರ್ಗ ಎಚ್ಚರ ವಹಿಸಬೇಕು ಎಂದು ಹೇಳಿದರು.
ಎಂಡೋ ಸಂತ್ರಸ್ತರ ಪರ ಹೋರಾಟ ಸಮಿತಿ ಸದಸ್ಯರಾದ ಮಹಮ್ಮದ್ ಪೀರ್, ಎಂಡೋ ಸಂತ್ರಸ್ತರ ಪರವಾದ ಹೋರಾಟ ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು. ಜಿಲ್ಲಾ ನೋಡಲ್ ಅಧಿಕಾರಿ ಡಾ.ಅರುಣ್ ಕುಮಾರ್ ಇಲಾಖೆಯಿಂದ ಎಂಡೋ ಸಂತ್ರಸ್ತರಿಗೆ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಮಂಚಿ ಗ್ರಾ.ಪಂ. ಅಧ್ಯಕ್ಷ ಶ್ರೀಪತಿ ರಾವ್, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್. ಮಹಮ್ಮದ್, ತಾಲೂಕು ಪಂಚಾಯಿತಿ ಸದಸ್ಯೆ ಲವೀನಾ ಡಿ’ ಸೋಜ, ಸಹಾಯಕ ಆಯುಕ್ತ ಪ್ರಶಾಂತ್, ತಹಸೀಲ್ದಾರ್ ಮಲ್ಲೇಸ್ವಾಮಿ, ತಾಲೂಕು ವೈದ್ಯಾಧಿಕಾರಿ ಮಂಜುನಾಥ್ ಇದ್ದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಲೋಕನಾಥ್ ಸ್ವಾಗತಿಸಿ, ಉಮೇಶ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಮಾತಿನ ಮಧ್ಯೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಕಾರ್ಯ ವೈಖರಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಖಾದರ್ ಆರೋಗ್ಯ ಸಚಿವರಾದ ತಕ್ಷಣದಿಂದಲೇ ಎಂಡೋ ಸಂತ್ರಸ್ತರ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಿದ್ದಾರೆ. ಎಂಡೋ ಸಂತ್ರಸ್ತರಿಗಾಗಿ ವಿಶೇಷ ಯೋಜನೆಗಳನ್ನು ಅನುಷ್ಠಾನಗೊಳಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಶ್ಲಾಘಿಸಿದರು.
ಎಂಡೋಸಲ್ಫಾನ್ ಸಂತ್ರಸ್ತರಿಗೆ ಮಿತವೇತನ ಆದೇಶ ವಿತರಣಾ ಕಾರ್ಯಕ್ರಮಕ್ಕೆ ಸಚಿವರಾದ ಬಿ. ರಮಾನಾಥ ರೈ, ಯು.ಟಿ. ಖಾದರ್, ಅಭಯಚಂದ್ರ ಜೈನ್, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಜಿಲ್ಲೆಯ ಶಾಸಕರು, ಜಿ.ಪಂ., ತಾ.ಪಂ. ಸದಸ್ಯರು ಸಹಿತ ಒಟ್ಟು 18 ಮಂದಿಯನ್ನು ಅತಿಥಿಗಳಾಗಿ ಆಮಂತ್ರಿಸಿ, ಆಮಂತ್ರಣ ಪತ್ರಿಕೆಯಲ್ಲಿ ಹೆಸರು ನಮೂದಿಸಲಾಗಿತ್ತು. ಆದರೆ, 18 ಮಂದಿಯ ಪೈಕಿ ಸಚಿವ ಬಿ. ರಮಾನಾಥ ರೈ, ಜಿ.ಪಂ. ಸದಸ್ಯ ಎಂ.ಎಸ್. ಮಹಮ್ಮದ್, ತಾ.ಪಂ. ಸದಸ್ಯೆ ಲವೀನಾ ಡಿ’ ಸೋಜ, ಗ್ರಾ.ಪಂ. ಅಧ್ಯಕ್ಷ ಶ್ರೀಪತಿ ರಾವ್ ಮಾತ್ರ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
Click this button or press Ctrl+G to toggle between Kannada and English